ಬಳ್ಳಾರಿ / ಕಂಪ್ಲಿ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಮತ್ತು ಇಡೀ ರಾಜ್ಯಾಧ್ಯಂತ ಅಕ್ರಮವಾಗಿ ಚುನಾವಣೆ ನಡೆಸಲು ಮುಂದಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿ ನಾಗನಗೌಡ ಎಂ.ಎ ಆರೋಪಿಸಿದರು.
ಅವರು ಶನಿವಾರ ಪಟ್ಟಣದ ಎಸ್.ಎನ್.ಪೇಟೆ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಚುನಾವಣೆ ಬಹಿಷ್ಕಾರದ ವೇಳೆ ಮಾತನಾಡಿ, ಅನ್ಯಾಯದ ವಿರುದ್ಧ ಪ್ರತಿಭಟಿಸುವುದು ಪ್ರತಿಯೊಬ್ಬರ ಹಕ್ಕಾಗಿದೆ. ನಾನೊಬ್ಬ ರಾಜ್ಯ ಪದಾಧಿಕಾರಿಯಾಗಿದ್ದು, ನಮ್ಮ ಮೇಲೆ ರಾಜ್ಯ ಸಂಘದಿಂದ ಯಾವಾಗಲು ಕಣ್ಣಿತ್ತು. ಇವತ್ತು ಮತ್ತು ನಾಳೆ ಎರಡು ದಿನ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಇವತ್ತಿನವರೆಗೂ ಕಂಪ್ಲಿಯಲ್ಲಿ ಚುನಾವಣಾ ಕಛೇರಿ ಆರಂಭವಾಗಿಲ್ಲ. ಚುನವಣಾ ಮತದಾರರ ಪಟ್ಟಿ ಇಲ್ಲ. ಕಂಪ್ಲಿ ತಾಲೂಕಿನಲ್ಲಿ 113 ಜನ ಶಿಕ್ಷಕರಿದ್ದಾರೆ. ಇದರಲ್ಲಿ ಎರಡು ಪುರುಷ ಮತ್ತು ಒಂದು ಮಹಿಳಾ ಪದಾಧಿಕಾರಿಗಳ ಹುದ್ದೆ ಬರುತ್ತದೆ. ಆದರೆ, ಈ ಚುನಾವಣೆಯಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ರಾಜ್ಯ ಸಂಘ ಮಾಡಿದೆ. ಯಾರನ್ನು ಮತದಾರರ ಪಟ್ಟಿಯಿಂದ ತೆಗೆದರೆ, ಏನು ಮಾಡಿಕೊಳ್ಳುತ್ತಾರೇ ಎಂಬುವ ಉಡಾಫೆ ಪ್ರವೃತಿಯನ್ನು ಹೊಂದಿದೆ. ಆದ್ಧರಿಂದ ಶಿಕ್ಷಕರು ರಾಜ್ಯ ಸಂಘಕ್ಕೆ ತಿರುಗೇಡು ನೀಡುವ ಸಮಯ ಬಂದಿದೆ. ಮತ್ತು ಮುಂದಿನ ದಿನದಲ್ಲಿ ರಾಜ್ಯ ಸಂಘಕ್ಕೆ ತಕ್ಕ ಉತ್ತರ ನೀಡಲಿದ್ದೇವೆ. ಬಳ್ಳಾರಿ ನಗರದಲ್ಲಿ 1400 ಶಿಕ್ಷಕರಿದ್ದರೂ, ಚುನಾವಣೆ ನಡೆಯುತ್ತಿಲ್ಲ. ಇಲ್ಲಿ ಯಾವುದೇ ಮತದಾರರ ಪಟ್ಟಿ ಕೊಟ್ಟಿಲ್ಲ. ಬಳ್ಳಾರಿ ಸೇರಿದಂತೆ ರಾಜ್ಯದ ಮಂಡ್ಯ, ಚಾಮರಾಜನಗರ, ಅರಸಿಕೇರಿ, ಉಡುಪಿಯಲ್ಲಿ ಚುನಾವಣೆ ಇಲ್ಲದಂತಾಗಿದೆ. ರಾಜ್ಯದ 50ಕ್ಕೂ ಹೆಚ್ಚು ತಾಲೂಕುಗಳು ದುಸ್ಥಿತಿಯಲ್ಲಿವೆ. ನಮ್ಮ ಹೆಸರು ತೆಗೆದಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಮತದಾರರ ಪಟ್ಟಿಯಲ್ಲಿ 50-100 ಶಿಕ್ಷಕರ ಹೆಸರುಗಳನ್ನು ಮಂಗಮಾಯ ಮಾಡಿದ್ದಾರೆ. ಕಂಪ್ಲಿಯಲ್ಲಿ ನಮ್ಮದು ಮತ್ತು ಹಿರಿಯ ಶಿಕ್ಷಕರ ಹೆಸರು ತೆಗೆದು ಹಾಕಿದ್ದಾರೆ. ಆದರೆ, ಕಂಪ್ಲಿಯಲ್ಲಿ ಮತದಾರರ ಪಟ್ಟಿಯಲ್ಲಿ ಶಿಕ್ಷಕರ ಹೆಸರು ತೆಗೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಶಿಕ್ಷಕರೆಲ್ಲರೂ ಒಗ್ಗಟ್ಟಾಗಿದ್ದು, ಯಾವುದೇ ಶಿಕ್ಷಕರಿಗೆ ಅನ್ಯಾಯವಾಗಬಾರದೆಂಬ ಸಂದೇಶವನ್ನು ಸಾರಿದ್ದಾರೆ. ಪ್ರತಿ ವರ್ಷ ಸಂಘಕ್ಕೆ 200 ರೂ.ಗಳನ್ನು ಕಟ್ಟುತ್ತಿದ್ದೇವೆ. ಈ ಮತದಾರರ ಪಟ್ಟಿಯಲ್ಲಿ ಯಾರೆಲ್ಲಾ ಹೆಸರನ್ನು ಬಿಟ್ಟಿದ್ದಾರೋ ಅವರೆಲ್ಲರೂ ಕೂಡಿಕೊಂಡು ಭಾನುವಾರ ಸಿವಿಲ್ ಕೋರ್ಟ್ ಮೊರೆ ಹೋಗಲಿದ್ದೇವೆ. ಇಡೀ ರಾಜ್ಯಾದ್ಯಂತ ಚುನಾವಣೆ ಅಕ್ರಮವಾಗಿದ್ದು, ನ್ಯಾಯಾಲಯದ ಸುಪರ್ದಿಯಲ್ಲಿ ಕೇಸ್ ನಡೆಯುತ್ತಿರುವುದಿಂದ ಈ ಪ್ರಕರಣಕ್ಕೆ ನ್ಯಾಯ ಸಿಗುವ ವಿಶ್ವಾಸದ ಜೊತೆಗೆ ಗಟ್ಟಿಯಾಗುತ್ತದೆ. ನ್ಯಾಯಯುತ ಚುನಾವಣೆ ನಡೆಸುವವರೆಗೂ ಕಂಪ್ಲಿಯಲ್ಲಿ ಚುನಾವಣೆ ಬಾಯ್ಕಟ್ ಮಾಡಲಾಗುತ್ತದೆ. ಸಂಘದ ಕೊಂಡಿಯಾಗಿ ಶಿಕ್ಷಕರು ನಿಂತಿದ್ದಾರೆ. ಆದರೆ, ಸಂಘವಿರುವುದು ದುಡ್ಡು ಹೊಡೆಯುವದಕ್ಕಲ್ಲ ಎಂದರು.
ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ರಾಜಶೇಖರ, ಎಚ್.ಪಿ.ಸೋಮಶೇಖರ, ರುದ್ರಪ್ಪ ವಸಂತಕುಮಾರ, ಪ್ರಭಕರ, ರೇವಣ್ಣಸಿದ್ದೇಶ, ಚನ್ನಬಸಪ್ಪ, ಸುನೀತ, ಪೂಜಾ, ಮರಿಸ್ವಾಮಿ, ನಾಗರತ್ನ, ಲತಾ ಸೇರಿ ಅನೇಕ ಶಿಕ್ಷಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















