ಆತ್ಮಹತ್ಯೆ ಎಂದರೆ ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ತಾನೇ ಉದ್ದೇಶಪೂರ್ವಕವಾಗಿ ಅಂತ್ಯಗೊಳಿಸಿಕೊಳ್ಳುವ ಅಸ್ವಾಭಾವಿಕ ಪ್ರಕ್ರಿಯೆ. ಇದು ತೀವ್ರವಾದ ಮಾನಸಿಕ ಒತ್ತಡ, ಖಿನ್ನತೆ, ಆರ್ಥಿಕ ಸಂಕಷ್ಟ, ಸಂಬಂಧಗಳಲ್ಲಿನ ವೈಫಲ್ಯ ಅಥವಾ ಸಾಮಾಜಿಕ ಒತ್ತಡದಿಂದ ಉಂಟಾಗುವ ಹತಾಶೆಯ ಪ್ರತಿಕ್ರಿಯೆಯಾಗಿದೆ.
ದೇಶದ ಯಾವುದೋ ಭಾಗದಲ್ಲಿ ಯಾವುದೋ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇದ್ದಾರೆ. ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ, ಅದರ ಹಿಂದೆ ಆತ/ಆಕೆಯ ಸಾಮಾಜಿಕ, ಆರ್ಥಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಾರಣಗಳಿರುತ್ತವೆ. ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ, ಅದಕ್ಕೆ ಪ್ರಮುಖವಾಗಿ ಪರೀಕ್ಷೆಯ ಒತ್ತಡ ಮತ್ತು ಶೈಕ್ಷಣಿಕ ವೈಫಲ್ಯ ಕಾರಣವಾಗಿರುತ್ತವೆ. ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಶೈಕ್ಷಣಿಕ ವ್ಯವಸ್ಥೆಯ ಪ್ರತಿಬಿಂಬವೂ ಆಗಿದೆ.
ಸಾವಿಗೆ ಕಾರಣವಾಗುತ್ತಿರುವ ನಿರೀಕ್ಷೆ, ಒತ್ತಡ:
ಭಾರತದಲ್ಲಿ ಶೈಕ್ಷಣಿಕ ಸಾಧನೆಗೆ ಅತಿಯಾದ ಒತ್ತು ನೀಡಲಾಗುತ್ತಿದ್ದು, ಅದು ಉತ್ತಮ ಭವಿಷ್ಯಕ್ಕೆ ದಾರಿ ಎಂದೇ ಪರಿಗಣಿಸಲಾಗುತ್ತಿದೆ. ನಿರ್ದಿಷ್ಟ ವಿಶ್ವವಿದ್ಯಾಲಯ/ಕಾಲೇಜುಗಳಲ್ಲಿ, ನಿರ್ದಿಷ್ಟ ಕೋರ್ಸ್ಗಲ್ಲಿಯೇ ಸೀಟು ಗಳಿಸಬೇಕು ಎನ್ನುವ ಪೋಷಕರ ಮತ್ತು ವಿದ್ಯಾರ್ಥಿಗಳ ಮನೋಭಾವವು ಒತ್ತಡ ಸೃಷ್ಟಿಸುತ್ತಿದೆ. ಅತಿ ಹೆಚ್ಚು ಅಂಕ ಗಳಿಸಬೇಕು ಎನ್ನುವ ಒತ್ತಡ, ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳು, ನೀಟ್, ಐಐಟಿ ಕನಸುಗಳು ಆಕಾಂಕ್ಷಿಗಳ ಸಾವಿನಲ್ಲಿ ಪರ್ಯವಸಾನಗೊಳ್ಳುತ್ತಿವೆ. ದೆಹಲಿ, ಚೆನ್ನೈ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಪರೀಕ್ಷೆಗಳು ನಡೆಯುವ ಮತ್ತು ಫಲಿತಾಂಶ ಪ್ರಕಟಗೊಳ್ಳುವ ಸಂದರ್ಭದಲ್ಲಿ ಮನಶ್ಯಾಸ್ತ್ರಜ್ಞರು, ಆಪ್ತ ಸಮಾಲೋಚಕರ ಬಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದು, ಕರೆ ಮಾಡುತ್ತಿರುವುದು ಸಮಸ್ಯೆಗೆ ಕನ್ನಡಿ ಹಿಡಿಯುತ್ತಿದೆ.
ಪಿಯುಸಿ ಫಲಿತಾಂಶ ನಂತರ ವಿದ್ಯಾರ್ಥಿಗಳ ಆತ್ಮಹತ್ಯೆ ಎಂಬುದು ಸಮಾಜಕ್ಕೆ ಅತಿ ದೊಡ್ಡ ಆಘಾತ ಮತ್ತು ತಪ್ಪು ನಿರ್ಧಾರವಾಗಿದೆ.
ಇತ್ತೀಚೆಗೆ ನಡೆದ ಬೆಂಗಳೂರಿನಲ್ಲಿ ಎರಡನೇ ಪಿಯುಸಿ ಫಲಿತಾಂಶ ಬಂದ ಕೆಲವೇ ಗಂಟೆಗಳಲ್ಲಿ 75% ಅಂಕ ಗಳಿಸಿದರೂ ನಿರೀಕ್ಷಿತ ಫಲಿತಾಂಶ ಬಾರದ ಕಾರಣಕ್ಕೆ ವಿದ್ಯಾರ್ಥಿ ಒಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಿದ್ಯಾರ್ಥಿಗಳು ಈ ಹಂತಕ್ಕೆ ಹೋಗಲು ಪ್ರಮುಖ ಕಾರಣಗಳು :
ಹೆಚ್ಚಿನ ನಿರೀಕ್ಷೆಗಳು ವಿದ್ಯಾರ್ಥಿಗಳು ತಮಗೆ ತಾವೇ ಹಾಕಿಕೊಳ್ಳುವ ಅಥವಾ ಪೋಷಕರು ಅವರ ಮೇಲೆ ಇಡುವ ಹೆಚ್ಚಿನ ಅಂಕಗಳ ನಿರೀಕ್ಷೆ ನಿರೀಕ್ಷಿತ ಫಲಿತಾಂಶ ಬಾರದಿದ್ದಾಗ ತೀವ್ರ ನಿರಾಸೆ ಮತ್ತು ಅವಮಾನದ ಭಯ ಅವರನ್ನು ಕುಗ್ಗಿಸುತ್ತದೆ.
ಪೋಷಕರು ಅಥವಾ ಸಮಾಜವೂ ಮಕ್ಕಳನ್ನು ಇತರರೊಂದಿಗೆ ಹೋಲಿಸುವುದು ( ಉದಾಹರಣೆಗೆ ಪಕ್ಕದ ಮನೆಯವರು ಅಂಕ ಹೆಚ್ಚು ಪಡೆದಿದ್ದಾರೆ ಮಕ್ಕಳಲ್ಲಿ ಕೇಳಿರುವ ಮೂಡಿಸುವುದು ವೈಫಲ್ಯವನ್ನು ಎದುರಿಸುವ ಸಾಮರ್ಥ್ಯದ ಕೊರತೆ ಪರೀಕ್ಷೆಯಲ್ಲಿ ಫೇಲಾಗುವುದೆಂದರೆ ಜೀವನ ಮುಗಿದು ಹೋಯಿತು ಎಂಬ ತಪ್ಪು ಭಾವನೆ ಮತ್ತು ಮಾನಸಿಕ ಧೈರ್ಯದ ಕೊರತೆ.
ಕಾರಣಗಳು :
ಶೈಕ್ಷಣಿಕ ಒತ್ತಡ, ಅತಿಯಾದ ನಿರೀಕ್ಷೆ, ಆತ್ಮವಿಶ್ವಾಸದ ಕೊರತೆ, ವಿವೇಚನೆಯ ಕೊರತೆ, ಜಾತಿ ತಾರತಮ್ಯ/ದೌರ್ಜನ್ಯ, ದೈಹಿಕ ಹಾಗೂ ಲೈಂಗಿಕ ದೌರ್ಜನ್ಯ, ಕಲಿಕಾ ನ್ಯೂನತೆ ಸೇರಿದಂತೆ ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗೆ ಹಲವು ಕಾರಣಗಳಿರುತ್ತವೆ. ಜತೆಗೆ, ಮಕ್ಕಳ ಬಗೆಗಿನ ಪೋಷಕರ ಮಹತ್ವಾಕಾಂಕ್ಷೆ, ಕುಟುಂಬದಲ್ಲಿನ ಸಾಮಾಜಿಕ, ಆರ್ಥಿಕ ಸಮಸ್ಯೆಗಳು, ಸಂಬಂಧಗಳಲ್ಲಿನ ಸಮಸ್ಯೆಗಳು, ಹಿರಿಯರ ಟೀಕೆ, ಸಾಮರ್ಥ್ಯದ ಹೋಲಿಕೆ, ಬೆಂಬಲದ ಕೊರತೆ, ಮದ್ಯ, ಮಾದಕ ವಸ್ತು ಸೇವನೆಯ ಚಟವೂ ಯುವ ಮನಸ್ಸುಗಳು ಕಮರಲು ಕಾರಣವಾಗುತ್ತಿವೆ.
ಏನು ಮಾಡಬೇಕು?
ಪ್ರತಿಯೊಂದು ವಿ.ವಿ./ಕಾಲೇಜಿನಲ್ಲಿಯೂ ಆಪ್ತ ಸಮಾಲೋಚನೆಯ ವ್ಯವಸ್ಥೆ ಇರಬೇಕು; ಖಿನ್ನತೆ, ಒತ್ತಡದಿಂದ ಬಳಲುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಅಗತ್ಯ ನೆರವು ನೀಡಬೇಕು
ಮಾನಸಿಕ ಮತ್ತು ದೈಹಿಕ ಆರೋಗ್ಯ ನಿರ್ವಹಣೆಯ ಬಗ್ಗೆ ಶಾಲಾ– ಕಾಲೇಜುಗಳಲ್ಲಿಯೇ ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು
ಸರ್ಕಾರ, ಪೋಷಕರು, ಶಿಕ್ಷಣ ಸಂಸ್ಥೆಗಳು ಮತ್ತು ಎನ್ಜಿಒ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು
ರ್ಯಾಗಿಂಗ್, ಜಾತಿ/ಲಿಂಗ ತಾರತಮ್ಯ, ಲೈಂಗಿಕ ದೌರ್ಜನ್ಯಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಚಾಲ್ತಿಯಲ್ಲಿರುವ ಅತ್ಯುತ್ತಮ ಪದ್ಧತಿಗಳನ್ನು ಎಲ್ಲೆಡೆ ಅಳವಡಿಸಿಕೊಳ್ಳಬೇಕು
ಅಂಕಗಳೇ ಜೀವನವಲ್ಲ : ಅಂಕಗಳ ಜೀವನವಲ್ಲ ಎಂಬ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು ಪೋಷಕರು ಮಕ್ಕಳೊಂದಿಗೆ ಸಂವಾದ ನಡೆಸುವುದು ಮತ್ತು ಮಾನಸಿಕ ಒತ್ತಡ ಬಿದ್ದಾಗ ಸಹಾಯ ಪಡೆಯುವುದು ಅಗತ್ಯವಾಗಿದೆ.
ಭಾವನಾತ್ಮಕ ಬೆಂಬಲ ಮತ್ತು ಅರಿವಿನ ಅಗತ್ಯ
ಈ ಘಟನೆಯು ವಿದ್ಯಾರ್ಥಿಗಳು ಎದುರಿಸುತ್ತಿರುವ ತೀವ್ರವಾದ ಶೈಕ್ಷಣಿಕ ಒತ್ತಡದತ್ತ ಮತ್ತೊಮ್ಮೆ ಗಮನ ಸೆಳೆದಿದೆ. ವಿಶೇಷವಾಗಿ ಫಲಿತಾಂಶ ಅವಧಿಯಲ್ಲಿ ಪೋಷಕರು, ಶಿಕ್ಷಕರು ಮತ್ತು ಗೆಳೆಯರಿಂದ ಭಾವನಾತ್ಮಕ ಬೆಂಬಲದ ಮಹತ್ವವನ್ನು ತಜ್ಞರು ಒತ್ತಿ ಹೇಳುತ್ತಾರೆ.
ಪರೀಕ್ಷಾ ಫಲಿತಾಂಶಗಳ ಆಘಾತದ ನಂತರ ಇಂತಹ ದುರಂತಗಳನ್ನು ತಡೆಗಟ್ಟುವಲ್ಲಿ ವಿದ್ಯಾರ್ಥಿಗಳು ನಿರಾಶೆಯನ್ನು ವ್ಯಕ್ತಪಡಿಸಲು ಮತ್ತು ಸಹಾಯವನ್ನು ಪಡೆಯಲು ಸುರಕ್ಷಿತವಾಗಿರುವಂತಹ ಬೆಂಬಲ ವಾತಾವರಣವನ್ನು ಸೃಷ್ಟಿಸುವುದು ನಿರ್ಣಾಯಕವಾಗಿದೆ.
ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ತಡೆಗಟ್ಟುವುದು ಒಂದು ಗಂಭೀರ ವಿಷಯವಾಗಿದ್ದು, ಇದಕ್ಕೆ ಪೋಷಕರು, ಶಿಕ್ಷಕರು, ಸ್ನೇಹಿತರು ಮತ್ತು ಸಮಾಜದ ಜಂಟಿ ಪ್ರಯತ್ನದ ಅಗತ್ಯವಿದೆ. ಪ್ರಮುಖ ತಡೆಗಟ್ಟುವ ಕ್ರಮಗಳು :
1 ಮುಕ್ತ ಸಂವಹನ ಮತ್ತು ಆಲಿಸುವಿಕೆ :
ಆಲಿಸಿ: ವಿದ್ಯಾರ್ಥಿಗಳ ಸಮಸ್ಯೆಗಳನ್ನು ತೀರ್ಪು ನೀಡದೆ ಆಲಿಸಿ. ಅವರು ಏನನ್ನು ಹೇಳಲು ಬಯಸುತ್ತಾರೆ ಎಂಬುದನ್ನು ಗಮನವಿಟ್ಟು ಕೇಳಿ.
ಮಾತನಾಡಿ: ಅವರ ಮಾನಸಿಕ ಒತ್ತಡ, ಭಯ, ಮತ್ತು ಆತಂಕಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಪ್ರೋತ್ಸಾಹಿಸಿ.
2.ಶೈಕ್ಷಣಿಕ ಒತ್ತಡ ಕಡಿಮೆ ಮಾಡುವುದು:
ಪರೀಕ್ಷಾ ಭಯ ನಿವಾರಣೆ: ಪರೀಕ್ಷೆಗಳು ಜೀವನದ ಅಂತ್ಯವಲ್ಲ, ಕೇವಲ ಒಂದು ಭಾಗ ಎಂದು ಮನವರಿಕೆ ಮಾಡಿಕೊಡಿ.
ಸ್ಪರ್ಧಾತ್ಮಕ ಮನೋಭಾವ ಕಡಿಮೆ: ಇತರರೊಂದಿಗೆ ಹೋಲಿಕೆ ಮಾಡುವುದನ್ನು ನಿಲ್ಲಿಸಿ ಮತ್ತು ಕೇವಲ ಅಂಕಗಳ ಮೇಲೆ ಗಮನ ಹರಿಸಬೇಡಿ.
3.ಮಾನಸಿಕ ಆರೋಗ್ಯ ಜಾಗೃತಿ:
ಸಲಹೆ : ಶಾಲೆ/ಕಾಲೇಜುಗಳಲ್ಲಿ ಕೌನ್ಸಿಲರ್ಗಳ ವ್ಯವಸ್ಥೆ ಇರಬೇಕು.
ಲಕ್ಷಣಗಳನ್ನು ಗುರುತಿಸಿ: ಅತಿಯಾದ ನಿದ್ರೆ/ನಿದ್ರೆಯಿಲ್ಲದಿರುವುದು, ಆಹಾರ ಸೇವನೆಯಲ್ಲಿ ಬದಲಾವಣೆ, ಒಂಟಿತನ, ಆತ್ಮಹತ್ಯೆಯ ಮಾತುಗಳಂತಹ ಲಕ್ಷಣಗಳನ್ನು ಕಂಡರೆ ತಕ್ಷಣ ಸ್ಪಂದಿಸಿ.
- ಕೌಟುಂಬಿಕ ಬೆಂಬಲ:
ಭಾವನಾತ್ಮಕ ಬೆಂಬಲ: ಪೋಷಕರು ತಮ್ಮ ಮಕ್ಕಳೊಂದಿಗೆ ಸಮಯ ಕಳೆಯಬೇಕು ಮತ್ತು ಪ್ರೀತಿಯಿಂದ ನಡೆದುಕೊಳ್ಳಬೇಕು.
ನಿರೀಕ್ಷೆಗಳ ಹೊರೆಯನ್ನು ಕಡಿಮೆ ಮಾಡಿ: ಮಕ್ಕಳ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಹೇರಬೇಡಿ. - ಸ್ನೇಹಿತರ ಮತ್ತು ಶಿಕ್ಷಕರ ಪಾತ್ರ :
ಕಾವಲುಗಾರರಾಗಿ : ಆತ್ಮಹತ್ಯೆಯ ಆಲೋಚನೆ ಹೊಂದಿರುವವರನ್ನು ಗುರುತಿಸಿ ಅವರಿಗೆ ಸಹಾಯ ಮಾಡಲು ಸಿದ್ಧರಿರುವವರು ‘ಕಾವಲುಗಾರ’ರಾಗಿ ಕಾರ್ಯನಿರ್ವಹಿಸಬಹುದು.
ಸಹಾಯವಾಣಿ : ಆತ್ಮಹತ್ಯೆ ತಡೆ ಸಹಾಯವಾಣಿಗಳ ಸಂಖ್ಯೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ. - ಜೀವನ ಕೌಶಲ್ಯಗಳ ಕಲಿಕೆ:
ಸವಾಲುಗಳನ್ನು ಎದುರಿಸುವುದು: ಸೋಲುಗಳನ್ನು ಹೇಗೆ ಎದುರಿಸಬೇಕು, ಕಷ್ಟದ ಸಂದರ್ಭಗಳಲ್ಲಿ ಹೇಗೆ ತಾಳ್ಮೆಯಿಂದ ಇರಬೇಕು ಎಂಬುದನ್ನು ಕಲಿಸಿ.
ವಿದ್ಯಾರ್ಥಿಗಳ ಆತ್ಮಹತ್ಯೆಯು ನಮ್ಮ ಶಿಕ್ಷಣ ವ್ಯವಸ್ಥೆಯ ದೋಷವನ್ನು ಎತ್ತಿ ತೋರಿಸುತ್ತದೆ. ಅಂಕಗಳಿಗಿಂತ ಜೀವನ ಮುಖ್ಯ. ಯುವ ಪೀಳಿಗೆಯನ್ನು ಆತ್ಮಹತ್ಯೆಯ ಹಾದಿಯಿಂದ ದೂರವಿರಿಸಲು, ಸ್ಪರ್ಧಾತ್ಮಕ ವಾತಾವರಣವನ್ನು ಕಡಿಮೆ ಮಾಡಿ, ಪ್ರೀತಿ, ಆಪ್ತಸಮಾಲೋಚನೆ ಮತ್ತು ಬೆಂಬಲದ ವಾತಾವರಣವನ್ನು ಸೃಷ್ಟಿಸುವುದು ಅಗತ್ಯವಾಗಿದೆ.
ವಿಶೇಷ ಲೇಖನ : ಜಿಲಾನಸಾಬ್ ಬಡಿಗೇರ್




















