ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಭಾರತ ಎಲ್ಲಾ ಕ್ಷೇತ್ರಗಳಲ್ಲಿಯೂ ಗಣನೀಯ ಪ್ರಗತಿ ಸಾಧಿಸುತ್ತಿದೆ; ಹಲವು ಶತಮಾನಗಳ ಹಿಂದೆ ಇದ್ದ ಭವ್ಯ, ದಿವ್ಯ, ಪರಂಪರೆ, ಸಂಸ್ಕೃತಿಗಳ ಪುನರುತ್ಥಾನವಾಗುತ್ತಿದೆ; ವಿಶ್ವದಲ್ಲಿಯೇ ವೇಗವಾಗಿ ಪ್ರಗತಿ ಸಾಧಿಸುತ್ತಿರುವ ದೇಶ ನಮ್ಮ ಭಾರತ ; ಅದು ಈಗ ವಿಶ್ವಗುರುವಾಗುವುದರಲ್ಲಿ ಸಂದೇಹವಿಲ್ಲ ಎಂದು ಡಾ. ಟಿ ಎಂ ಗಿರಿಧರ ಉಪಾಧ್ಯಾಯ ಅವರು ನುಡಿದರು.
ಅವರು ಇಂದು ಆನಂದ ರಾವ್ ವೃತ್ತದ ಬಳಿಯಿರುವ ಲೆಕ್ಕಾಧಿಕಾರಿಗಳ ಸಂಘದ ಹಾಲ್ ನಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮುಂದುವರಿದು ಅವರು ಆರ್ಥಿಕ ಕ್ಷೇತ್ರದಲ್ಲಿ, ರಕ್ಷಣಾ ಕ್ಷೇತ್ರದಲ್ಲಿ, ವಿಜ್ಞಾನ ಕ್ಷೇತ್ರದಲ್ಲಿ ಆದ ಪ್ರಗತಿಯನ್ನು ವಿವರಿಸುತ್ತಾ ಭಾರತ ವಿಶ್ವಗುರುವಾಗಲು ಸ್ವದೇಶಿ ವಸ್ತುಗಳನ್ನೇ ಪ್ರೋತ್ಸಾಹಿಸಿ, ನಮ್ಮ ಸಣ್ಣ ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸುವುದು ಅಗತ್ಯ ಎಂದು ಪ್ರತಿಪಾದಿಸಿದರು. ಭಾರತೀಯ ಕುಟುಂಬ ವ್ಯವಸ್ಥೆ ಅನುಪಮವಾದದ್ದು ; ಪ್ರತಿಯೊಂದು ಸ್ತ್ರೀ ಕೂಡ ಒಂದು ಬ್ಯಾಂಕ್ ಎಂದು ಮಾರ್ಮಿಕವಾಗಿ ನುಡಿದರು. ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡಲು ಸಲಹೆ ನೀಡಿದರು.
1962ರ ಚೀನಾ ಯುದ್ಧದಲ್ಲಿಯ ಭಾರತದ ಸ್ಥಿತಿ, ಇಂದು ಆಪರೇಷನ್ ಸಿಂಧೂರ ನಡೆಸುವವರೆಗಿನ ಬೃಹತ್ ಬದಲಾವಣೆಯನ್ನು, ಸೈನಿಕರ ದೇಶಪ್ರೇಮವನ್ನು ವಿವರಿಸಿ, ಸಭಿಕರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿಯಾದರು.
ಸಭೆಯಲ್ಲಿ ಉಪಸ್ಥಿತರಿದ್ದ ವಿಕ್ರಮ ಪತ್ರಿಕೆ ಸಂಪಾದಕ ನಾ ನಾಗರಾಜ್ ಅವರು ನಿನ್ನೆ ನಿಧನರಾದ ಎಸ್ ಆರ್ ರಾಮಸ್ವಾಮಿ ಅವರ ವ್ಯಕ್ತಿತ್ವವನ್ನು ಕೊಂಡಾಡಿ ಎಲ್ಲರೊಂದಿಗೆ ಶ್ರದ್ಧಾಂಜಲಿ ಸಮರ್ಪಿಸಿದರು.
ವ್ಯಕ್ತಿತ್ವ ವಿಕಸನ ತರಬೇತುದಾರ, ಯೋಗ ಗುರು ಶ್ರೀ ರಾಮು ಅವರು ಪರಿಪೂರ್ಣ ವ್ಯಕ್ತಿತ್ವ ವಿಕಾಸದ ಅಡಿಯಲ್ಲಿ ಯೋಗದ ಪಾತ್ರ ಕುರಿತು ಹಿರಿಯರು ಅನುಸರಿಸಲೇಬೇಕಾದ ಹಲವಾರು ಮಹತ್ವಪೂರ್ಣ ವಿಷಯಗಳನ್ನು ತಿಳಿಸಿ ಯೋಗದ ಮಹತ್ವವನ್ನು ಪ್ರಾತ್ಯಕ್ಷಿಕೆಯೊಂದಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು.
ಶಿವಗಂಗಾ ಡ್ಯಾನ್ಸ್ ಅಕಾಡೆಮಿಯ ವಿದುಷಿ ಆಶಾ ಕುಮಾರ್ ಅವರ ಶಿಷ್ಯೆಯರಿಂದ ಭರತನಾಟ್ಯ ಕಾರ್ಯಕ್ರಮ ಜನ ಮೆಚ್ಚುಗೆ ಗಳಿಸಿತು.
ಇದೇ ಸಂದರ್ಭದಲ್ಲಿ ವ್ಯಕ್ತಿತ್ವ ವಿಕಸನದ ಮಹತ್ವ ತಿಳಿಸಿಕೊಟ್ಟ ಶ್ರೀ ರಾಮು ಅವರನ್ನು, ಉಪನ್ಯಾಸಕ ಡಾ. ಗಿರಿಧರ ಉಪಾಧ್ಯಾಯ ಅವರನ್ನು, ನೃತ್ಯ ಗುರು ವಿದುಷಿ ಆಶಾ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಅಣೆಕಟ್ಟು ಮಧುಸೂಧನ್ ರಾವ್ ಅವರು , ವಿಜಯವಾಣಿ ಉಪಸಂಪಾದಕ ರಾಜಶೇಖರ ಜೋಗಿನಮನೆ ರಚಿಸಿದ ಪರಿಸರ ಗೀತೆಯನ್ನು ಹಾಡಿ, ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಪ್ತ ಸಲಹೆಗಾರ ಆರ್ ಶ್ರೀನಾಗೇಶ್ , ಕವಿಗಳಾದ ಪ್ರಭಾಕರ ಗಂಗೊಳ್ಳಿ, ಸಿದ್ದಣ್ಣ ಸೊನ್ನದ , ಕವಯತ್ರಿಯರಾದ ವಿಶಾಲಾಕ್ಷಿ ಶರ್ಮ, ಕೊಪ್ಪರಂ ಅನ್ನಪೂರ್ಣ, ಸಂಘದ ಸದಸ್ಯರುಗಳಾದ ಬಿ ಸತ್ಯನಾರಾಯಣ, ನಿತ್ಯಾನಂದಪ್ಪ, ವಾಸುದೇವ ಕಾರಂತ, ಗೀತಾ ಸಭಾಹಿತ ಆರ್ ವತ್ಸಲಾ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















