ಬಾಗಲಕೋಟೆ : ತಾಲೂಕಿನ ಬೇವೂರಿನ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ವತಿಯಿಂದ ಒಂದುವಾರದ ತನಕ ಸಮೀಪದ ಬಿಲ್‌ಕೆರೂರ ಗ್ರಾಮದಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ವಾರ್ಷಿಕ ವಿಶೇಷ ಶಿಬಿರವನ್ನು ಹಮ್ಮಿಕೊಂಡು ವಿವಿಧ ಕಡೆಗಳಲ್ಲಿ ಶ್ರಮದಾನ ಮಾಡಲಾಯಿತು.
ಶಿಬಿರಾರ್ಥಿಗಳನ್ನು ಐದು ತಂಡಗಳಾಗಿ ವಿಂಗಡಿಸಿ ಗ್ರಾಮದ ವಿವಿಧ ಕಡೆಗಳಲ್ಲಿ ಶ್ರಮದಾನ ಕೈಗೊಳ್ಳಲಾಯಿತು.
ಶಾಲಾ ಆವರಣ ಸ್ವಚ್ಚತೆ : ಬಿಲ್‌ಕೆರೂರಿನ ಕರವೀರೆಶ್ವರ ಪ್ರೌಢ ಶಾಲಾ ಆವರಣವನ್ನು ಸ್ವಚ್ಚಗೊಳಿಸಿ ಮುಳ್ಳು ಕಂಟೆಗಳನ್ನು ತೆರವುಗೊಳಿಸಲಾಯಿತು. ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲು ತೆಗ್ಗುಗಳನ್ನು ತೆಗೆಯಲಾಯಿತು.
ಮಠದ ತೋಟದಲ್ಲಿ ಅಗತಿಗಳ ನಿರ್ಮಾಣ :
ಬಿಲ್ ಕೆರೂರಿನ ಬಿಲ್ವಾಶ್ರಮದ ತೋಟದಲ್ಲಿ ಇಡಲಾಗಿದ್ದ ಸಣ್ಣ ಸಣ್ಣ ಸಸಿಗಳಿಗೆ ನೀರು ನಿಲ್ಲುವಂತಹ ವ್ಯವಸ್ಥೆ ಕಲ್ಪಿಸಲು ೮೦ ಕ್ಕೂ ಅಧಿಕ ಕಡೆಗಳಲ್ಲಿ ಅಗತಿ ನಿರ್ಮಾಣ ಮಾಡಿ ಅಲ್ಲಿರುವ ಮುಳ್ಳುಕಂಟೆಗಳನ್ನು ತೆಗೆದು ಹಾಕಲಾಯಿತು. ಗ್ರಾಮದ ಹಿರಿಯರಿಂದ ಶ್ರೀ ಮಠದ ಪೂಜ್ಯರಿಂದ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಗಮನಾರ್ಹ ಎನಿಸಿತು.
ರಥಧ ಬೀದಿಯಲ್ಲಿ ಶ್ರಮದಾನ :
ಬಿಲ್ ಕೆರೂರಿನ ಬಿಲ್ವಾಶ್ರಮದ ರಥದ ಮುಖ್ಯ ಬೀದಿಯಲ್ಲಿ ಶಿಬಿರಾರ್ಥಿಗಳು ಶ್ರಮದಾನ ಕೈಗೊಂಡು ಅಲ್ಲಿರುವ ಕಲ್ಲು ಮುಳ್ಳುಗಳನ್ನು ತೆರವುಗೊಳಿಸಿದರು. ನಾವೆಲ್ಲರೂ ಒಂದಾಗಿ ಬಾಳೋಣ ಬನ್ನಿ ಎಂಬ ಧ್ಯೇಯ ದಂತೆ ಶಿಬಿರಾರ್ಥಿಗಳು ಗ್ರಾಮದ ವಿವಿಧ ಕಡೆಗಳಲ್ಲಿ ಶಿಸ್ತಿನಿಂದ ಶ್ರಮದಾನ ಕೈಗೊಂಡರು.
ಮಠ, ಮಂದಿರ, ಮಸೀದಿಗಳಲ್ಲಿ ಶ್ರಮದಾನ : ಗ್ರಾಮದ ಆಂಜನೇಯ ದೇವಾಸ್ಥಾನ,ಬಿಲ್ವಾಶ್ರಮ ಹೀರೆಮಠ ಇಲ್ಲಿ ಶ್ರಮದಾನ ಕೈಗೊಂಡ ಶಿಬಿರಾರ್ಥಿಗಳು ಉತ್ಸಾಹದಿಂದ ಕಾರ್ಯಗಳನ್ನು ಪೂರೈಸಿದರು. ಆಂಜನೇಯ ದೇವಾಸ್ಥಾನದ ಪಕ್ಕದಲ್ಲಿ ಇಡಲಾಗಿದ್ದ ಕಲ್ಲುಗಳನ್ನು ತೆರವುಗೊಳಿಸಿ ಅಲ್ಲಿನ ತಗ್ಗು ಗುಂಡಿಗಳನ್ನು ಮುಚ್ಚಿದರು. ಗ್ರಾಮದ ಮಸೀದಿ ಕಟ್ಟೆಯಲ್ಲಿ ಕಸಗೂಡಿಸಿ ಅಲ್ಲಿನ ಗಿಡಮರಗಳ ತಪ್ಪಲಗಳ ತ್ಯಾಜ್ಯವನ್ನು ತೆರವುಗೊಳಿಸಿ ಹತ್ತಾರು ಕೊಡಗಳಿಂದ ವಿದ್ಯಾರ್ಥಿಗಳೆ ನೀರನ್ನು ಹೊತ್ತು ತಂದು ಮಸೀದಿಯ ಕಟ್ಟೆಯನ್ನು ಶುಚಿಗೊಳಿಸಿದರು. ಭಾವೈಕ್ಯತೆಯ ಮಂತ್ರ ಜಪಿಸುತ್ತಾ ಗ್ರಾಮದ ವಿವಿಧ ಕಡೆಗಳಲ್ಲಿ ಸ್ವಚ್ಚತಾ ಶ್ರಮದಾನ ಕೈಗೊಂಡರು. ಶ್ರಮದಾನ ಕೈಗೊಂಡ ಶಿಬಿರಾರ್ಥಿಗಳಿಗೆ ಗ್ರಾಮದ ಯುವಕರು ಹಿರಿಯರು ತಂಪುಪಾನೀಯದ ವ್ಯವಸ್ಥೆ ಕಲ್ಪಿಸಿದರು.
ಈ ಶ್ರಮದಾನ ಕಾರ್ಯದಲ್ಲಿ ಶಿಬಿರದ ಅಧ್ಯಕ್ಷರಾದ ಡಾ. ಜಗದೀಶ ಗು. ಭೈರಮಟ್ಟಿ, ಯೋಜನಾಧಿಕಾರಿಗಳಾದ ಜಿ.ಎಸ್. ಗೌಡರ, ಸಲಹಾ ಸಮಿತಿಯ ಡಾ.ಎಸ್.ಬಿ. ಹಂಚಿನಾಳ, ಡಾ.ಎ.ಎಮ್. ಗೊರಚಿಕ್ಕನವರ. ಉಪನ್ಯಾಸಕರಾದ ಎಸ್.ಎಸ್ ಆದಾಪೂರ, ಬಿ.ಬಿ. ಬೇವೂರ, ಡಿ.ವಾಯ್. ಬುಡ್ಡಿಯವರ, ಶ್ರೀಮತಿ ಶ್ವೇತಾ ಕಾಗಿಯವರ ಶಿಬಿರದ ಪ್ರತಿನಿಧಿಗಳಾದ ಅಭಿಷೇಕ ಪೂಜಾರಿ, ಭಾಗೀರಥಿ ಬಾರಕೇರ, ಬೋಧಕೇತರ ಸಿಬ್ಬಂದಿಗಳಾದ ಆರ್.ಬಿ. ಕರಡಿಗುಡ್ಡ, ಶಿವು ಕಟಗಿ, ಪ್ರದೀಪ ಪಡಶೆಟ್ಟಿ ಸೇರಿದಂತೆ ಶಿಬಿರಾರ್ಥಿಗಳು ಭಾಗಿಯಾಗಿದ್ದರು. ಶಿಬಿರಕ್ಕೆ ಬೇಟಿ ನೀಡಿ ಶಿಬಿರದ ಕುರಿತು ಪರಿಶೀಲನೆ ನಡೆಸಿದ ಬಾಗಲಕೋಟೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಶ್ರೀ ಎಸ್.ಎಸ್ ಭೂಮಣ್ಣವರ ಶಿಬಿರದ ಶಿಸ್ತು ಊಟೋಪಚಾರ, ಶ್ರಮದಾನದ ಮಾಹಿತಿ, ಸಾಂಸ್ಕೃತಿಕ ಕಾರ್ಯಕ್ರಮಗಳ ವರದಿ ಮುಂತಾದವುಗಳನ್ನು ಪರಿಶಿಲಿಸಿ ಪ್ರಶಂಸೆ ವ್ಯಕ್ತಪಡಿಸಿದರು.
ಗ್ರಾಮೀಣ ಜನರೊಡನೆ ಸಾಮರಸ್ಯದ ಬದುಕು ಸಾದಿಸಲು ಈ ತರಹದ ಶಿಬಿರಗಳು ಅವಶ್ಯಕ ಎಂದು ಅವರು ಹೇಳಿದರು.
- ಕರುನಾಡ ಕಂದ ಪತ್ರಿಕೆ




















