ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೆಕೆಪುರ ಗ್ರಾಮದವರಾದ ಯಲ್ಲಪ್ಪ ಅವರು, 1-06-1958ರಂದು
ಶ್ರೀ ಯಲ್ಲಪ್ಪ ಮತ್ತು ಶ್ರೀಮತಿ ದುರುಗಮ್ಮ ದಂಪತಿಗಳ ಮಗನಾಗಿ ಜನಿಸಿದರು.
ಒಂದನೇ ತರಗತಿಯಿಂದ ಹತ್ತನೆಯ ತರಗತಿಯವರೆಗೆ
ಕನ್ನಡ ಮಾಧ್ಯಮದಲ್ಲಿಯೇ ಅಭ್ಯಾಸ ಮಾಡಿದ ಇವರು, ಕಾಲೇಜು ಶಿಕ್ಷಣವನ್ನು ಸ್ವ ಗ್ರಾಮ ಕೆಕೆಪುರ ಮತ್ತು ಮೊಳಕಾಲ್ಮೂರಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ದ್ವಿತೀಯ ಶ್ರೇಣಿಯಲ್ಲಿ ಪೂರೈಸಿದ ಹೆಗ್ಗಳಿಕೆ ಇವರದು.
ಯಲ್ಲಪ್ಪ ಅವರದು ದೊಡ್ಡ ಕೂಡು ಕುಟುಂಬ, ಒಟ್ಟು ಒಂಬತ್ತು ಜನ ಮಕ್ಕಳಲ್ಲಿ ನಾಲ್ಕು ಜನ ಅಕ್ಕಂದಿರು, ಒಬ್ಬ ತಂಗಿ ಹಾಗೂ ಮೂವರು ತಮ್ಮಂದಿರು, ಇವರು ಐದನೆಯವರು. ಬಡತನದ ಮನೆತನ, ಮನೆ ತುಂಬ ಮಕ್ಕಳು, ಇವರ ತಂದೆ, ತಾಯಿಯರ ದುಡಿಮೆಯಿಂದ
ಮನೆಯ ನಿರ್ವಹಣೆ ಒಟ್ಟಿನಲ್ಲಿ ಪರಿಶ್ರಮದ ಜೀವಿಗಳು.
ಬೆಂಗಳೂರಿನ ಜ್ಞಾನ ಭಾರತಿ ವಿಶ್ವವಿದ್ಯಾಲಯದಲ್ಲಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯುವ ಮೂಲಕ, ಬಿ. ಎ. ಮೇಜರ್ ಪದವಿಯನ್ನು ರಾಜ್ಯಕ್ಕೆ ಎರಡನೆಯವರಾಗಿ ಶ್ರೇಷ್ಠ ದರ್ಜೆಯಲ್ಲಿ ತೇರ್ಗಡೆಯಾಗಿದ್ದು, ವಿದ್ಯಾರ್ಥಿ ದೆಸೆಯಿಂದಲೇ ಸಾಂಸ್ಕೃತಿಕ ಆಸಕ್ತಿಯನ್ನು ಬೆಳೆಸಿಕೊಂಡು,
ಅನೇಕ ನಾಟಕಗಳಲ್ಲಿ ಅಭಿನಯ ಮಾಡಿ, ಕಲಾವಿದನಾಗಿ ಹೊರಹೊಮ್ಮಿದರು.
ಇವರ ಮತ್ತೊಂದು ವಿಶೇಷತೆ ಎಂದರೆ ಕನ್ನಡದ ವರಕವಿ ಎಂದೇ ಖ್ಯಾತರಾಗಿದ್ದ ಅಂಬಿಕಾ ತನಯದತ್ತ ಕಾವ್ಯನಾಮದ ದ. ರಾ. ಬೇಂದ್ರೆಯವರ ಶಿಷ್ಯರಾಗಿ,
ಸಾಧನಕೇರಿಯಲ್ಲಿ ಅವರ ಒಡನಾಟದಲ್ಲಿದ್ದದುನ್ನು, ಇವರು ಸದಾ ಸ್ಮರಿಸುತ್ತಾರೆ.
ಇನ್ನೊಂದು ಮಹತ್ವದ ಹೆಮ್ಮೆಯ ವಿಷಯವೆಂದರೆ,
ಇವರು ರಾಷ್ಟ್ರಕವಿ ಕುವೆಂಪು ಅವರ ಶಿಷ್ಯರೂ ಆಗಿದ್ದರೆಂಬುದು. ಇಬ್ಬರೂ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರು ಎಂಬುದು, ಅಂಥವರ ಶಿಷ್ಯನಾಗುವ ಸೌಭಾಗ್ಯ ನನ್ನದು ಎಂದು ಹೃದಯತುಂಬಿ ಹೇಳುತ್ತಾರೆ.
ಇವರ ಸಾಹಿತ್ಯದ ಕುರಿತು ಹೇಳಬೇಕೆಂದರೆ ಕಥೆ, ಕವನ, ಮಕ್ಕಳ ಸಾಹಿತ್ಯ, ಕಾದಂಬರಿ, ನಾಟಕ, ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅಸಾಮಾನ್ಯವೆನಿಸುವ ಕೃಷಿ ಮಾಡಿರುವ ಇವರ ಕುರಿತು ಹೇಳಿದರೆ, ಅದು ಅತಿಶಯವೆನಿಸಿದರೂ ನಿಜವಾದ ಮಾತಾಗಿದೆ.
ಸುಮಾರು 240ಕ್ಕೂ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿರುವುದು ಖಂಡಿತವಾಗಿಯೂ ಸಣ್ಣ ಸಾಧನೆಯಲ್ಲ ಅವರ ಕೆಲವು ಕೃತಿಗಳನ್ನು ಮಾತ್ರ ಇಲ್ಲಿ ಹೆಸರಿಸಿರುವೆ.
ಯಲ್ಲಪ್ಪ ಕೆಕೆಪುರ ಅವರ ಕವನ ಸಂಕಲನಗಳು.
1) ಕೆಂಪು ಬಸ್ಸಿನ ಕಪ್ಪು ಕವಿತೆಗಳು.
2) ನಾ ನಗುತ್ತೇನೆ.
3) ಯಾನ.
4) ನನ್ನೂರ ಹಾದಿಲಿ.
5) ಊರು ಕೇರಿಯ ಪದ್ಯಗಳು.
6) ನನ್ನ ಮಾದರಿ.
7) ಹಾಡಿವೆ ನನ್ನ ಎದೆಯಲ್ಲಿ.
8) ವೇದಾಂತ ಚಿಂತಾಮಣಿ.
9) ಬಾಲ್ಯ. ಮುಂತಾದವು.. ಇವರ ಕಥಾ ಸಂಕಲನಗಳು.
1) ಸಾರಿಗೆಯಲ್ಲಿ ಎಂಕ.
2 ) ಕಂಡಕ್ಟರ್ ನ ಸುತ್ತ ಹಬ್ಬಿದ ಹುತ್ತ.
3) ರಾವಣರ ಮಧ್ಯೆ.
4) ಮಾನ.
5) ಟಾಪ್ ಟೆನ್ ಕಥೆಗಳು.
6) ಕ್ರಾಂತಿ,
7)ವರ್ಗಿನವರ ಕಥೆಗಳು.
8) ಛಾಯೆ.
9)ಕೂಟ.
10)ವೀರವನಿತೆ ಒನಕೆ ಓಬವ್ವ, ಮುಂತಾದ 26 ಕಥಾ ಸಂಕಲನಗಳು.
ಇವರ ಕಾದಂಬರಿಗಳು ಹೀಗಿವೆ.
1) ಆಂತರ್ಯ
2) ಚಿಗುರಿದ ಬದುಕು
3) ನನ್ನವ್ವ ದುರುಗವ್ವ
4) ಆತ್ಮ
5) ನೋಟ.
6) ಗುಟ್ಟು
7) ಕಟ್ಟಕಡೆಯವರು
8) ಸಜ್ಲು ಸಂಸ್ಥಾನ.
9) ನೆಲದವ್ವ
10) ಹಡೆದವ್ವ ಇನ್ನೂ ಮುಂತಾದ ಕಾದಂಬರಿಗಳು
ಇವರ ಲೇಖನಿಯಿಂದ ಹೊರಹೊಮ್ಮಿರುವುದು, ಸಹೃದಯರ ಮನಸೂರೆಗೊಂಡು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಇವರ ಸಾಹಿತ್ಯ ಸೇವೆಯಿಂದ ಕನ್ನಡ ಸಾಹಿತ್ಯ
ಶ್ರೀಮಂತವಾಗಿದೆ.
ಡಾ. ಯಲ್ಲಪ್ಪ ಕೆಕೆಪುರ ಅವರು, ಕೇವಲ ಸಾಹಿತ್ಯ
ಕ್ಷೇತ್ರಕ್ಕಷ್ಟೇ ಸೀಮಿತವಾಗದೆ, ಸಾಮಾಜಿಕವಾಗಿಯೂ ಅಪಾರ ಸೇವೆ ಸಲ್ಲಿಸಿದ್ದಾರೆ,
ಕನ್ನಡ ನಾಡು ನುಡಿಯ ವಿಷಯದ ಬಗ್ಗೆ ಗೋಕಾಕ್ ಚಳುವಳಿಯಂತಹ ಹೋರಾಟಗಳಲ್ಲಿ ಭಾಗವಹಿಸಿ,
ಸೆರೆಮನೆ ವಾಸವನ್ನೂ ಸಹ ಅನುಭವಿಸಿದವರಾಗಿದ್ದಾರೆ.
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗುವಲ್ಲಿ, ಇವರ ಪಾತ್ರವೂ ಇದೆ.
ಡಾ. ಯಲ್ಲಪ್ಪ ಕೆಕೆಪುರ ಅವರು ಮಕ್ಕಳ ಸಾಹಿತ್ಯದಲ್ಲೂ ಸುಮಾರು ಸಾವಿರಕ್ಕಿಂತ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಇವರು ಆತ್ಮಕಥೆ, ಪ್ರವಾಸ ಕಥನ, ನಾಟಕ, ಹಾಗೂ ಸಂಪಾದಿತ ಪುಸ್ತಕ, ಪ್ರಂಬಂಧಗಳನ್ನೂ ಬರೆದು, ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವುದು ಕನ್ನಡಿಗರಾದ ನಮಗೆಲ್ಲಾ ಹೆಮ್ಮೆಯ ವಿಷಯವೇ ಆಗಿದೆ, ಇವರ ಕುರಿತು ಎಷ್ಟು ಬರೆದರೂ ಕಡಿಮೆ ಅನಿಸುತ್ತದೆ, ಹಾಗಾಗಿಯೇ ನಾನು ಇವರನ್ನು ಅಪ್ರತಿಮ ಸಾಹಿತ್ಯ ದಿಗ್ಗಜ ಎಂದು ಕರೆದಿರುವೆ,
ಡಾ. ಯಲ್ಲಪ್ಪ ಕೆಕೆಪುರ ಅವರ ಸಾಹಿತ್ಯ ಸೇವೆ ಹೀಗೆಯೇ ಮುಂದುವರಿಯಲಿ, ಅವರಿಗೆ
ಆಯುರಾರೋಗ್ಯ ಭಾಗ್ಯ ಕರುಣಿಸಲಿ ಎಂದು ಆಶಿಸುತ್ತಾ ನನ್ನ ಬರಹಕ್ಕೆ ವಿರಾಮ ನೀಡುವೆ..

- ಶಿವಪ್ರಸಾದ್ ಹಾದಿಮನಿ. ಕನ್ನಡ ಉಪನ್ಯಾಸಕರು.
ಸ. ಪ್ರ. ದರ್ಜೆ ಮಹಿಳಾ ಕಾಲೇಜು, ಕೊಪ್ಪಳ.
ಮೊ. ಸಂಖ್ಯೆ. 7996790189.




















