ಬಳ್ಳಾರಿ / ಕಂಪ್ಲಿ : ಏ.21ರಂದು ವಿಜಯಪುರ ನಗರದಲ್ಲಿ ನಡೆದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಕಂಪ್ಲಿ ಪ್ರತಿಷ್ಠಿತ ವಿವಿಎಸ್ಎಸ್ ಟ್ರಸ್ಟ್ನ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಎಮ್ಮಿಗನೂರಿನ ಇಂದ್ರಜಾ ಇವರಿಗೆ ರಾಜ್ಯಪಾಲ ಥಾವರ್ ಚಂಮದ್ ಗೆಹ್ಲೋಟ್ ಅವರು ಚಿನ್ನದ ಪದಕ ಪ್ರದಾನ ಮಾಡಿ ಗೌರವಿಸಿದರು.
ಚಿನ್ನದ ಪದಕ ಸ್ವೀಕರಿಸಿದ ನಂತರ ವಿದ್ಯಾರ್ಥಿನಿ ಇಂದ್ರಜಾ ಮಾತನಾಡಿ, ಕಂಪ್ಲಿ ನಗರದ ಪ್ರತಿಷ್ಠಿತ ವಿವಿಎಸ್ಎಸ್ ಟ್ರಸ್ಟ್ನ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿ, ಅರ್ಥಶಾಸ್ತ್ರ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದಿದ್ದು, ಇದರಿಂದ ವಿಜಯಪುರದ ಘಟಿಕೋತ್ಸವದಲ್ಲಿ ಚಿನ್ನದ ಪದಕದ ಗೌರವದಿಂದ ಶಿಕ್ಷಣ ರಂಗದಲ್ಲಿ ಮತ್ತಷ್ಟು ಸಾಧನೆ ಮಾಡಬೇಕೆಂಬ ಉತ್ಸುಕತೆ ಹೆಚ್ಚಿಸಿದೆ. ಕಾಲೇಜಿನ ಪ್ರಾಂಶುಪಾಲ ಮದ್ದಾನೆಪ್ಪ ಬಿಡನಾಳ ಸೇರಿದಂತೆ ಉಪನ್ಯಾಸಕರ ಪಾಠ, ಪ್ರವಚನ ಆಲಿಸಿ ಮತ್ತು ಮಾರ್ಗದರ್ಶನದಂತೆ ವಿದ್ಯಾಭ್ಯಾಸದಲ್ಲಿ ನಿರಂತರವಾಗಿ ಪಟ್ಟಂತಹ ಪರಿಶ್ರಮದಿಂದಾಗಿ ಉನ್ನತ ಸಾಧನೆ ಮಾಡಲು ಸಾಧ್ಯವಾಗಿದೆ. ವಿದ್ಯಾರ್ಥಿನಿಯರು ಶಿಕ್ಷಣದಲ್ಲಿ ಗುರಿ ಜೊತೆಗೆ ಛಲ ಹೊಂದಿದರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾಭ್ಯಾಸ ಮಾಡಬೇಕು. ಪೋಷಕರ ಇಷ್ಟದಂತೆ ಉನ್ನತ ಮಟ್ಟದಲ್ಲಿ ಶಿಕ್ಷಣ ಪಡೆದುಕೊಂಡು ಉತ್ತಮ ಭವಿಷ್ಯದ ಕಡೆಗೆ ಸಾಗಬೇಕಾಗಿದೆ. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಶಿಕ್ಷಣಕ್ಕೆ ಉನ್ನತ ಸ್ಥಾನವಿದೆ. ಆದ್ದರಿಂದ ಈಗ ಪದವಿ ವ್ಯಾಸಾಂಗಕ್ಕೆ ಬಂದಂತಹ ವಿದ್ಯಾರ್ಥಿನಿಯರ ಗಮನ ಅತಿ ಹೆಚ್ಚು ಶಿಕ್ಷಣದ ಕಡೆಗೆ ಇರಲಿ ಎಂದರು.
ಈ ಸಂದರ್ಭದಲ್ಲಿ ಮುಂಬಯಿನ ಎಸ್ಎನ್ಡಿಟಿ ಮಹಿಳಾ ವಿವಿ ಕುಲಪತಿ ಪ್ರೋ.ಉಜ್ವಲಾ ಚಕ್ರದೇವ್, ಮಹಿಳಾ ವಿವಿ ಕುಲಪತಿ ಪ್ರೋ.ವಿಜಯಾ ಕೋರಿಶೆಟ್ಟಿ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















