ಈಗಿನ ಕಾಸರಗೋಡಿನ ಕೋಳ್ಯೂರಿನಲ್ಲಿ ಜನಿಸಿದ
ಶ್ರೀ ಗಣೇಶ ಹೊಳ್ಳರ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಅಲ್ಲೇ ಮುಗಿಸಿ, ಮಂಗಳೂರಿನ ಹಂಪನಕಟ್ಟೆ ಸರಕಾರಿ ಕಾಲೇಜಿನಲ್ಲಿ 1977 ರಲ್ಲಿ ಬಿ .ಎ ಪದವಿ ಪಡೆದರು. 1978 ರಿಂದ ಕೊಲ್ಯ ಚೇಳಾರಿನ ಅಕ್ಕನ ಊರಿನಲ್ಲಿದ್ದು, ಉಡುಪಿಯಲ್ಲಿ ಹೋಟೆಲ್ ವ್ಯಾಪಾರ , ಎನ್ .ಐ .ಟಿ .ಕೆ ಯಲ್ಲಿ ಸಮುದ್ರ ದರ್ಶನ ಕ್ಯಾಂಟೀನ್ ನಡೆಸಿ , ಮುಂದೆ 1986 ರಿಂದ 2015 ರ ವರೆಗೆ ಎನ್ .ಐ .ಟಿ .ಕೆ ಯ ಪ್ರವೇಶಾತಿ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು.
ಸಮಾಜದ ಮೇಲೆ ತುಂಬಾ ಕಾಳಜಿ ಹೊಂದಿದವರಾಗಿದ್ದ ಇವರು, ಚೇಳಾರಿನ ಯುವಕರನ್ನು ಜೊತೆಗೆ ಸೇರಿಸಿಕೊಂಡು, ಫ್ರೆಂಡ್ಸ್ ಕ್ಲಬ್ ಸ್ಥಾಪಿಸಿ ಶ್ರಮದಾನದ ಮುಖೇನ ಚೇಳಾರಿನ ರಸ್ತೆ ರಿಪೇರಿ, ಸದಸ್ಯರ ಮನೆ ರಿಪೇರಿ, ಗೋಡೆ ಕಟ್ಟುವುದು, ಹಂಚು ಹಾಕುವುದು ಮೊದಲಾದ ಸೇವೆಗಳನ್ನು ಸಕ್ರಿಯವಾಗಿ ಸದಸ್ಯರ ಜೊತೆ ಸೇರಿ ಮಾಡಿದ್ದರು.
ದಿ. ಕೊಲ್ಯ ಗಣಪತಿ ಅಧಿಕಾರಿಯವರ ಸ್ಮರಣಾರ್ಥ ಪ್ರಯಾಣಿಕರಿಗಾಗಿ ಬಸ್ ತಂಗುದಾಣ ನಿರ್ಮಾಣ, ಎನ್ .ಐ .ಟಿ .ಕೆ ನೌಕರರ ಯಕ್ಷಗಾನ ಬಯಲಾಟ ಸೇವಾ ವೃಂದ ಸ್ಥಾಪಿಸಿ, ಅಧ್ಯಕ್ಷರಾಗಿದ್ದು, ಪ್ರತಿವರ್ಷ ಶ್ರೀನಿವಾಸ ನಗರದಲ್ಲಿ ಬಯಲಾಟ ಆಡಿಸುತ್ತಿದ್ದರು. 2015 ರಲ್ಲಿ ನಿವೃತ್ತಿಯ ಬಳಿಕ ಪಕ್ಷಿಕೆರೆಯ ಹೊಸಕಾಡುವಿನಲ್ಲಿ ವಾಸವಾಗಿದ್ದು, ಸುತ್ತಮುತ್ತಲಿನ ಪರಿಸರದ ಹಲವಾರು ದೇವಸ್ಥಾನಗಳಲ್ಲಿ ಉದಾರ ಸೇವೆಯಾಗಿ ಕಚೇರಿಯ ಕೆಲಸ, ರಶೀದಿ ಬರೆಯುವುದು ಮೊದಲಾದ ಸೇವೆ ಮಾಡುತ್ತಿದ್ದರು. ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ನಿವೃತ್ತಿ ಜೀವನದ ಹೆಚ್ಚಿನ ಸಮಯವನ್ನು ಸೇವೆಗಾಗಿ ಮೀಸಲಿಟ್ಟಿದ್ದರು.
ಉದಾರ ದಾನಿಯಾದ ಶ್ರೀ ಗಣೇಶ ಹೊಳ್ಳರು ಬಡವರಿಗೆ , ಕಷ್ಟದಲ್ಲಿದ್ದವರಿಗೆ , ವಿದ್ಯಾರ್ಥಿಗಳ ಶುಲ್ಕಕ್ಕೆ ತಮ್ಮಿಂದಾದ ಸಹಾಯ ಮಾಡುತ್ತಿದ್ದರು. ತಮ್ಮಲ್ಲಿ ಬಂದು ಸಹಾಯ ಕೇಳಿದವರಿಗೆ ಕೈಲಾದ ಸಹಾಯ ಮಾಡಿದ್ದು, ಹಣ ಹಿಂದೆ ಪಡೆಯುವ, ಪ್ರಚಾರ ಬಯಸುವ ಅಪೇಕ್ಷೆ ಇರಲಿಲ್ಲ.
ಚೇಳಾರಿನ ಇತಿಹಾಸದ ಗತ ಕಾಲದ ಪುಟಗಳನ್ನು ನೆನಪಿಸುವ ಸಮಯ :
1980 ದ ದಶಕದಲ್ಲಿ ಚೇಳಾರಿಗೆ ಸಂಪರ್ಕಿಸಲು ನೆಲ ಮತ್ತು ಜಲ ಮಾರ್ಗ ಮಾತ್ರ ಸೀಮಿತವಾಗಿತ್ತು. ಗತ ಕೆ. ಆರ್. ಇ. ಸಿ ಹಿಂಬದಿಯ ಏಕ ಮಾತ್ರ ರಸ್ತೆ ಚೇಳಾರನ್ನು ಸಂಪರ್ಕಿಸುತ್ತಿತ್ತು. ಅದು ತಪ್ಪಿದರೆ ಕರಿಕಟ್ಟ ಮೂಲಕ ಕಾಲುದಾರಿ ಪಡ್ರೆ ಹಾದು ಹೈವೇ ಸಂಪರ್ಕ. ಮತ್ತೆ ಹಳೆಯಂಗಡಿ ತಲುಪಲು ನಂದಿನಿ ಮಿತ್ರ ಮಂಡಳಿ ಬಳಿ ಇದ್ದ ಆಗಿನ ಕಾಲ್ಸಂಕ, ದೋಣಿ ಇತ್ಯಾದಿ ಮಾತ್ರ.
ಕೆ. ಆರ್. ಇ. ಸಿ ಯ ಹಿಂಬದಿಯ ರಸ್ತೆ ಮಧ್ಯದವರೆಗೆ ಮಾತ್ರ ಡಾಂಬರಾಗಿತ್ತು. ಮಧ್ಯ ಜಂಕ್ಷನ್ ನಿಂದ ಚೇಳಾರ್ ಪದವ್ ವರೆಗೆ ಮಣ್ಣಿನ ರಸ್ತೆ ಇದ್ದು, ನಿತ್ಯಾದರ ಹೆಸರಿನ ಒಂದೇ ಒಂದು ಬಸ್ ಲಭ್ಯವಿತ್ತು. ಮಣ್ಣಿನ ರಸ್ತೆ ಮಳೆಗಾಲದಲ್ಲಿ ನೀರಲ್ಲಿ ಸವೆದು ಚರಂಡಿಯಂತಾಗಿ ಬಸ್ ಚಾಲಕರು ಚೇಳಾರಿಗೆ ಬಸ್ ಚಲಾಯಿಸಲು ಹಿಂಜರಿದು ವಿಪರೀತ ಮಳೆ ಸುರಿಯುವಾಗ ಪ್ರಯಾಣಿಕರನ್ನು ಮಧ್ಯದಲ್ಲೇ ಇಳಿಸುತ್ತಿದ್ದರು. ಪ್ರಯಾಣಿಕರು ಒಟ್ಟಾಗಿ ಬಸ್ ನವರಲ್ಲಿ ಜಗಳ ಮಾಡಿದಾಗ, ನೀವು ಸಾರ್ವಜನಿಕರು ಒಟ್ಟಾಗಿ ರಸ್ತೆ ರಿಪೇರಿ ಮಾಡಿ, ನಾವು ಬಸ್ ಚಲಾಯಿಸಿ ಚೇಳಾರ್ ಪದವ್ ಗೆ ಬಸ್ ತರುತ್ತೇವೆ ಎಂಬ ಷರತ್ತು ಹಾಕುತ್ತಿದ್ದರು. ಆಗ ಈಗಿನ ಪಂಚಾಯತ್ ವ್ಯವಸ್ಥೆ ಇನ್ನೂ ಅಸ್ತಿತ್ವಕ್ಕೆ ಬಂದಿರಲಿಲ್ಲ.
ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಆಗಿನ ಯುವಕರು ತಮ್ಮ ಊರಿನಲ್ಲಿ ಆಗಲೇ ಅಸ್ತಿತ್ವದಲ್ಲಿದ್ದ ಸಂಘಟನೆಯ ಸದಸ್ಯರ ಸಭೆ ಸೇರಿ ಈ ರಸ್ತೆಯ ಜ್ವಲಂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಸ್ತೆ ದುರಸ್ಥಿಗಾಗಿ ಸದಸ್ಯರೆಲ್ಲಾ ಸೇರಿ ಸಮಯ ಸಮಯಕ್ಕೆ “ಶ್ರಮದಾನ” ದಿಂದ ರಸ್ತೆ ರಿಪೇರಿ ಮಾಡಿ ಬಸ್ ಚೇಳಾರ್ ಪದವು ತಲುಪಲು ಯೋಗ್ಯ ಮಾಡುತ್ತಿದ್ದರು. ಮುಂದೆ ಈ ಶ್ರಮದಾನದ ಹವ್ಯಾಸ ಕೇವಲ ರಸ್ತೆಗೆ ಸೀಮಿತ ಆಗಿರದೆ, ಸದಸ್ಯರ ಮನೆ ಮಾಡು ರಿಪೇರಿ, ಗೋಡೆಗೆ ಬೇಕಾದ ಇಟ್ಟಿಗೆ ಬಿಡುವುದು, ಗೋಡೆ ಕಟ್ಟುವುದು, ಹಂಚು ಹಾಕುವುದು ಮೊದಲಾದ ಹಲವಾರು ಶ್ರಮದಾನಗಳನ್ನು ಹಮ್ಮಿಕೊಂಡು ಜನ ಸೇವೆಯೇ ಜನಾರ್ಧನನ ಸೇವೆ ಎಂಬ ಧ್ಯೇಯ ವಾಕ್ಯಕ್ಕೆ ಸರಿಯಾಗಿ ನಡೆದುಕೊಳ್ಳುತ್ತಿದ್ದರು. ಆ “ಶ್ರಮದಾನ” ದ ರೂವಾರಿಯಾಗಿ ಮುಂಚೂಣಿಯಲ್ಲಿದ್ದ ಶ್ರೀಗಣೇಶ ಹೊಳ್ಳರು ದಿ.20/04/2026 ರಂದು ರಾತ್ರಿ 11:56ಕ್ಕೆ ಶ್ರೀನಿವಾಸ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ಜೀವಿತದಲ್ಲಿ ಮಾಡಿದ “ಶ್ರಮದಾನ ” ವನ್ನು ಚೇಳಾರಿನ ಈ ನೆಲದ ವಾಸಿಗಳಾದ ನಾವು ಸದಾ ಸ್ಮರಿಸೋಣ. ಸಾರ್ಥಕ ಬದುಕು ಸಾಗಿಸಿದ ಶ್ರೀ ಗಣೇಶ ಹೊಳ್ಳ ಕೋಳ್ಯೂರು ಅವರ ದಿವ್ಯ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲೆಂದು ಅವರ ಅಭಿಮಾನಿಗಳ ಪ್ರಾರ್ಥನೆ.
ಅವರ ಪತ್ನಿ ಮೋಹಿನಿ ಹೊಳ್ಳರಿಗೆ ದುಖಃ ಸಹಿಸುವ ಶಕ್ತಿ ಕೊಡಲಿ, ಮುಂದಿನ ಜೀವನ ಸುಭದ್ರವಾಗಿರಲೆಂದು ಅಪಾರ ಅಭಿಮಾನಿಗಳು ಹಾರೈಸಿದ್ದಾರೆ.
ಲೇಖನ: ಚಂದ್ರಶೇಖರ ಹೆಬ್ಬಾರ್ ಕೊಲ್ಯ



















