ಬಯಸಿದ ಭಾಗ್ಯ ಬಾಳಲ್ಲಿ
ಕಾಲಚಕ್ರ ಉರುಳುತ್ತಿದೆ ಜಗದಲ್ಲಿ
ನಗೆಯ ಬುಗ್ಗೆ ಚಿಮ್ಮಲಿ ತುಟಿಯಂಚಲ್ಲಿ.
ಬಡತನವಿದ್ದರೂ ಬದುಕಲ್ಲಿ
ನೆಮ್ಮದಿಯಿರಲಿ ಬಾಳ ಪಯಣದಲ್ಲಿ
ಹರುಷ ಹೊನಲಾಗಿ ಹರಿಯಲಿ ಜೀವನದಲ್ಲಿ.
ಸುಖವು ಬಾಳ ಬಂಡಿಯಲ್ಲಿ
ದುಗುಡ ದುಮ್ಮಾನ ಕಾಲಡಿಯಲ್ಲಿ
ಕರುಳ ಬಳ್ಳಿ ಕುಡಿಯೊಡೆಯಲಿ ಸಂಸಾರದಲ್ಲಿ.
ಕಟ್ಟಿದ ಕನಸು ಕಣ್ಣಲ್ಲಿ
ಗುರಿ ಮುಟ್ಟಲಿ ಬಡ ಬದುಕಿನಲ್ಲಿ
ಹೊಸರಾಗ ಮೂಡಲಿ ಹೊಸ ಹಾಡಲ್ಲಿ.
ಹೊಸ ಚಿಗುರು ಹಳೆ ಬೇರಿನಲ್ಲಿ
ಹಸಿವು ಹಿಂಗದು ಹಸಿದ ಹೊಟ್ಟೆಯಲ್ಲಿ
ದುಡಿದು ತಿನ್ನುವ ಬಲವಿದ್ದರೂ ರಟ್ಟೆಯಲ್ಲಿ.
ಮನಸಿಲ್ಲದ ಮನಸ್ಸಿನಲ್ಲಿ
ತಿಂದುಂಬುವುದು ಹಗಲುಗನಸಿನಲ್ಲಿ
ನೇಸರನ ಕಾಣುವಾಸೆ ಕಾರ್ಗತ್ತಲಿರುಳಿನಲ್ಲಿ.
ವರವ ಬೇಡುವುದು ಮಹಾದೇವನಲ್ಲಿ
ಕಳವಿ ತುಂಬುವುದು ಹರಿದ ಗೋಣಿಯಲ್ಲಿ
ಬೀಜ ಬಿತ್ತುವುದು ಎದೆ ಬಿರಿದ ಭೂಮಿಯಲ್ಲಿ.
- ಡಾ. ಅಶೋಕ ಕುಮಾರ ಎಸ್. ಮಟ್ಟಿ ಮೀನಕೇರಿ.ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ.




















