ರಾಯಚೂರು : ಕರ್ನಾಟಕ ಸರ್ಕಾರವು ಶಾಲಾ ಹಾಗೂ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಆದೇಶವನ್ನು ರದ್ದುಪಡಿಸಿರುವ ನಿರ್ಧಾರವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಯಚೂರು ಜಿಲ್ಲಾ ಘಟಕ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ.
ಹಿಂದಿನ ಬಿಜೆಪಿ ಸರ್ಕಾರವು ರಾಜಕೀಯ ಲಾಭಕ್ಕಾಗಿ ಶಿಕ್ಷಣ ಕ್ಷೇತ್ರವನ್ನು ಬಳಸಿಕೊಂಡು ಹಿಜಾಬ್ ವಿಷಯವನ್ನು ಅನಗತ್ಯ ವಿವಾದವನ್ನಾಗಿ ಮಾಡಿತ್ತು. ಇದು ಸಂವಿಧಾನಾತ್ಮಕ ಹಕ್ಕುಗಳಿಗೆ ವಿರುದ್ಧವಾಗಿರುವುದರ ಜೊತೆಗೆ ಸಮಾಜದಲ್ಲಿ ಧಾರ್ಮಿಕ ಧ್ರುವೀಕರಣ ಸೃಷ್ಟಿಸುವ ಪ್ರಯತ್ನವಾಗಿತ್ತು. ವಿದ್ಯಾರ್ಥಿನಿಯರ ಶಿಕ್ಷಣ, ಭವಿಷ್ಯ ಮತ್ತು ಮಾನಸಿಕ ಸ್ಥಿತಿಯನ್ನು ಲೆಕ್ಕಿಸದೇ ತೆಗೆದುಕೊಂಡ ಹಿಜಾಬ್ ನಿಷೇಧದಂತಹ ನಿರ್ಧಾರವು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆತ್ಮಕ್ಕೆ ವಿರುದ್ಧವಾಗಿತ್ತು.
ಹಿಜಾಬ್ ಎನ್ನುವುದು ಕೇವಲ ಉಡುಪಿನ ವಿಚಾರವಲ್ಲ; ಅದು ಭಾರತದ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಹಕ್ಕಿನ ಭಾಗವಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನೇಕ ವಿದ್ಯಾರ್ಥಿನಿಯರು ತರಗತಿಗಳಿಂದ ದೂರ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲವು ವಿದ್ಯಾರ್ಥಿನಿಯರು ಶಿಕ್ಷಣವೇ ಕೈಬಿಡಬೇಕಾದ ನೋವಿನ ಸ್ಥಿತಿಗೂ ತಲುಪಿದ್ದರು. ಇದು ಶಿಕ್ಷಣ ಹಕ್ಕಿನ ಮೇಲಿನ ನೇರ ದಾಳಿ ಆಗಿತ್ತು.
ಈಗ ಕರ್ನಾಟಕ ಸರ್ಕಾರವು ಹಿಜಾಬ್ ನಿಷೇಧ ಆದೇಶವನ್ನು ರದ್ದುಪಡಿಸಿರುವುದು ಸಂವಿಧಾನ ಮೌಲ್ಯಗಳ ಪುನರ್ ಸ್ಥಾಪನೆಯಾಗಿದೆ. ರಾಜ್ಯದಲ್ಲಿ ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳಿಗೆ ಸಮಾನ ಗೌರವ ಮತ್ತು ಹಕ್ಕು ಸಿಗಬೇಕು ಎಂಬ ಸಂದೇಶವನ್ನು ಈ ನಿರ್ಧಾರ ನೀಡಿದೆ.
ಶಿಕ್ಷಣ ಸಂಸ್ಥೆಗಳು ಜ್ಞಾನ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳ ಕೇಂದ್ರಗಳಾಗಬೇಕು ಹೊರತು ದ್ವೇಷ ರಾಜಕಾರಣದ ಪ್ರಯೋಗಾಲಯಗಳಾಗಬಾರದು. ಧರ್ಮ, ಉಡುಪು ಅಥವಾ ಗುರುತಿನ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ವಿಭಜಿಸುವ ರಾಜಕಾರಣವನ್ನು ರಾಜ್ಯದ ಜನತೆ ಈಗಾಗಲೇ ತಿರಸ್ಕರಿಸಿದ್ದಾರೆ.
Welfare Party of India ಸದಾ ಸಂವಿಧಾನ, ಸಾಮಾಜಿಕ ನ್ಯಾಯ, ಅಲ್ಪಸಂಖ್ಯಾತರ ಹಕ್ಕುಗಳು ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿ ಹೋರಾಟ ಮುಂದುವರಿಸಲಿದೆ.
- ಶೇಕ್ ಫರೀದ್ ಉಮರಿ
ಜಿಲ್ಲಾ ಅಧ್ಯಕ್ಷರು,
ವೆಲ್ ಪಾರ್ಟಿ ಆಫ್ ಇಂಡಿಯಾ, ರಾಯಚೂರು. - ಕರುನಾಡ ಕಂದ ಸುದ್ದಿ




















