ಕೊಡಗು/ ವಿರಾಜಪೇಟೆ : ಕಡುಬಡತನದಲ್ಲಿದ್ದ ಕೆದಮುಳ್ಳೂರಿನ ಜಯೇಂದ್ರ-ಚೋಮಕ್ಕಿ ದಂಪತಿಗಳ ಪೈಕಿ, ಜಯೇಂದ್ರ ಎಂಬುವವರು ತಮ್ಮ ಬಾಲ್ಯದಲ್ಲಿ ಕಾಯಿಲೆಗೆ ತುತ್ತಾಗಿ ಸಂಪೂರ್ಣ ದೃಷ್ಟಿ ಹೀನರಾಗಿದ್ದು, ಕಣ್ಣಿನ ಚಿಕಿತ್ಸೆಗೂ ಹಣ ಇಲ್ಲದ ಸಂದರ್ಭ, ಸುಮಾರು ಆರು ತಿಂಗಳ ಹಿಂದೆ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರನ್ನು ಸಂಪರ್ಕಿಸಿದಾಗ, ಅವರಿಗೆ ಭರವಸೆ ನೀಡಿದಂತೆ ಮಾನ್ಯ ಶಾಸಕರು, ತಮಗೆ ಪರಿಚಯವಿದ್ದ ಚೋಕಂಡ ಸಂಜು ಸುಬ್ಬಯ್ಯ ಅವರ ಮೂಲಕ ಜಯೇಂದ್ರ ರವರ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು. ಅಂದೇ ಮಾನ್ಯ ಶಾಸಕರು ಈ ದಂಪತಿಗಳಿಗೆ ತಮ್ಮ ವೈಯಕ್ತಿಕ ₹ 10 ಸಾವಿರ ಧನ ಸಹಾಯ ಮಾಡಿ, ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿ, ಸಂಜು ಸುಬ್ಬಯ್ಯ ರವರಿಗೆ ಇವರ ಜವಾಬ್ದಾರಿಯನ್ನು ವಹಿಸಿದ್ದರು. ಇದೀಗ ಜಯೇಂದ್ರ ತಮ್ಮ ಒಂದು ಕಣ್ಣಿನ ದೃಷ್ಟಿಯನ್ನು ಚಿಕಿತ್ಸೆಯ ಬಳಿಕ ಬಹುತೇಕ ಮರಳಿ ಪಡೆದು, ಧನ್ಯವಾದ ಅರ್ಪಿಸಲು ಮಾನ್ಯ ಶಾಸಕರ ಕಚೇರಿಗೆ ಆಗಮಿಸಿ, ಶಾಸಕರು ಹಾಗೂ ಸಂಜು ಸುಬ್ಬಯ್ಯ ರವರ ಸಹಾಯವನ್ನು ಸ್ಮರಿಸುತ್ತಾ ಧನ್ಯವಾದ ಹೇಳಿ ಭಾವುಕರಾದರು.
ಬಳಿಕ ಮಾತನಾಡಿದ ಮಾನ್ಯ ಶಾಸಕರು, ಈ ದಂಪತಿಗಳ ಆತ್ಮಸ್ಥೈರ್ಯ ಎಲ್ಲರಿಗೂ ಮಾದರಿಯಾಗಲಿ ಎಂದು ಹೇಳುತ್ತಾ, ಸರಕಾರಿ ಆಸ್ಪತ್ರೆಗಳಲ್ಲೂ ಉಚಿತವಾಗಿ ಅತ್ಯುತ್ತಮ ಚಿಕಿತ್ಸಾ ಸೌಲಭ್ಯಗಳು ಲಭಿಸುತ್ತಿದ್ದು, ನಾಡಿನ ಸಮಸ್ತ ಜನತೆ ಇಂತಹ ಸೌಲಭ್ಯಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಸರಕಾರ ನೀಡುವ ಸೌಲಭ್ಯ ಪ್ರತಿಯೊಬ್ಬರಿಗೂ ತಲುಪಿಸುವುದು ತಮ್ಮ ಹಾಗೂ ಸರಕಾರದ ಪ್ರಮುಖ ಆಶಯ ಎಂದು ವಿವರಿಸುತ್ತಾ, ಜಯೇಂದ್ರ ರವರ ಚಿಕಿತ್ಸೆಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹಾಗೂ ನಾಯಕರುಗಳ ಸಾಮಾಜಿಕ ಕಳಕಳಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಮಾನ್ಯ ಶಾಸಕರು, ಕ್ಷೇತ್ರದಲ್ಲಿನ ತನ್ನ ರಾಜಕೀಯ ಜೀವನದಲ್ಲಿ, ಕಳೆದ ಆರು ವರ್ಷಗಳಲ್ಲಿ ತಾನು ಕಂಡಂತೆ, ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಬಹುತೇಕ ಸಂದರ್ಭಗಳಲ್ಲಿ ತನ್ನ ಬಳಿ ಜನರ ಸಮಸ್ಯೆಗಳನ್ನು ಪರಿಹರಿಸಿಕೊಡುವಂತೆ ಮನವಿ ಮಾಡುವುದನ್ನು ನೆನೆದುಕೊಂಡು ಹೆಮ್ಮೆಯಿಂದ ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ : ಪ್ರಿತುನ್ ಪೂವಣ್ಣ




















