ಬೆಳಗಾವಿ/ಕೊಕಟನೂರ: “ಗ್ರಾಮೀಣ ಭಾಗದ ರೈತರ ಮತ್ತು ಬಡ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ಹಿಂದೆ ಬೀಳಬಾರದು. ನಗರಗಳಿಗೆ ತೆರಳದೇ ತಮ್ಮದೇ ಊರುಗಳಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯುವ ಅವಕಾಶ ಸಿಗಬೇಕು ಎನ್ನುವುದು ನನ್ನ ಪ್ರಮುಖ ಆಶಯವಾಗಿದೆ,” ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಕೊಕಟನೂರ ಗ್ರಾಮದ ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ರೆಡ್‌ಕ್ರಾಸ್, ಸ್ಕೌಟ್ ಮತ್ತು ಗೈಡ್ಸ್ ಚಟುವಟಿಕೆಗಳ ಸಮಾರೋಪ, ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ನೂತನ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು.
“ಗ್ರಾಮೀಣ ಭಾಗದಲ್ಲೇ ಶಿಕ್ಷಣದ ಹಬ್ಬ ನಡೆಯಬೇಕು”
ನೂತನ ಸಭಾಂಗಣವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, “ಈ ಭಾಗದಲ್ಲಿ ಶಿಕ್ಷಣದ ಹಬ್ಬವೇ ನಡೆಯಬೇಕು ಎಂಬುದು ನನ್ನ ಕನಸು. ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಶಿಕ್ಷಣಕ್ಕಾಗಿ ನಗರಗಳತ್ತ ವಲಸೆ ಹೋಗುವ ಪರಿಸ್ಥಿತಿ ಬದಲಾಗಬೇಕು. ಅದಕ್ಕಾಗಿ ಅಗತ್ಯ ಮೂಲಸೌಲಭ್ಯಗಳನ್ನು ಗ್ರಾಮ ಮಟ್ಟದಲ್ಲೇ ಕಲ್ಪಿಸಲು ನಾನು ಬದ್ಧನಾಗಿದ್ದೇನೆ,” ಎಂದರು.
“ಒಂದು ಶಿಕ್ಷಣ ಸಂಸ್ಥೆ ಅಭಿವೃದ್ಧಿ ಹೊಂದಬೇಕಾದರೆ ಜನಪ್ರತಿನಿಧಿಗಳು ಮಾತ್ರವಲ್ಲ, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ. ಎಲ್ಲರೂ ಕೈಜೋಡಿಸಿದಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಸಾಧ್ಯ,” ಎಂದು ಹೇಳಿದರು.
ಕಾಲೇಜಿಗೆ ಅಗತ್ಯ ಸೌಲಭ್ಯಗಳ ಭರವಸೆ
ಕಾಲೇಜಿನ ಮುಂದಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, “ಈ ಕಾಲೇಜಿಗೆ ಬೇಕಾಗುವ ಎಲ್ಲಾ ಮೂಲಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸುವ ಕೆಲಸವನ್ನು ಶೀಘ್ರದಲ್ಲಿ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅಗತ್ಯ ಅನುದಾನ ತರಲು ಪ್ರಯತ್ನಿಸುತ್ತೇನೆ,” ಎಂದು ಭರವಸೆ ನೀಡಿದರು.
ಪರಿಸರ ಸಂರಕ್ಷಣೆ ಕುರಿತೂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಶಾಸಕ ಸವದಿ, “ಕಾಲೇಜಿನ ಆವರಣ ಹಸಿರಿನಿಂದ ಕಂಗೊಳಿಸಬೇಕು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ನೆಟ್ಟು ಪರಿಸರ ರಕ್ಷಣೆಯಲ್ಲಿ ಭಾಗವಹಿಸಬೇಕು,” ಎಂದರು.
ತಾಲೂಕಿನಾದ್ಯಂತ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು
ಕ್ಷೇತ್ರದಲ್ಲಿ ನಡೆಯುತ್ತಿರುವ ಶಿಕ್ಷಣ ವಿಸ್ತರಣಾ ಕಾರ್ಯಗಳ ಕುರಿತು ವಿವರಿಸಿದ ಅವರು, “ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಾಲೂಕಿನಲ್ಲಿ ಈಗಾಗಲೇ 11 ಹೊಸ ಹೈಸ್ಕೂಲ್‌ಗಳನ್ನು ಆರಂಭಿಸಲಾಗಿದೆ. ಶಿಕ್ಷಣವನ್ನು ಪ್ರತಿಯೊಂದು ಹಳ್ಳಿಗೂ ತಲುಪಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ,” ಎಂದು ಹೇಳಿದರು.
ತಾಲೂಕಿಗೆ ಒಟ್ಟು ಮೂರು ಕರ್ನಾಟಕ ಪಬ್ಲಿಕ್ ಶಾಲೆಗಳು (KPS) ಮಂಜೂರಾಗಿದ್ದು, ಅದರಲ್ಲಿ ಒಂದು ಶಾಲೆಯನ್ನು ಕೊಕಟನೂರ ಗ್ರಾಮಕ್ಕೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಹಿಳೆಯರಿಗಾಗಿ ಪ್ರತ್ಯೇಕ ವಸತಿ ಶಾಲೆ ಸ್ಥಾಪನೆಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
” ಡಿಜಿಟಲ್ ಶಿಕ್ಷಣಕ್ಕೆ ಆದ್ಯತೆ “
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳೂ ತಂತ್ರಜ್ಞಾನದಲ್ಲಿ ಹಿಂದೆ ಬೀಳಬಾರದು ಎಂದು ಹೇಳಿದ ಶಾಸಕ ಸವದಿ, “ತಾಲೂಕಿನ ಶಾಲಾ-ಕಾಲೇಜುಗಳಲ್ಲಿ ಡಿಜಿಟಲ್ ಕ್ಲಾಸ್‌ರೂಂ, ಸುಸಜ್ಜಿತ ಪ್ರಯೋಗಾಲಯ ಹಾಗೂ ಗ್ರಂಥಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲು ಕ್ರಮ ಕೈಗೊಳ್ಳಲಾಗುವುದು,” ಎಂದು ಹೇಳಿದರು.
“ಮೇ 24 ರಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ”
ಕಾರ್ಯಕ್ರಮದಲ್ಲಿ ಶಾಸಕ ಲಕ್ಷ್ಮಣ ಸವದಿ ಮಹತ್ವದ ಘೋಷಣೆ ಮಾಡಿದರು. “ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಶೇಕಡಾ 85 ಕ್ಕಿಂತ ಹೆಚ್ಚು ಅಂಕ ಗಳಿಸಿದ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೇ ತಿಂಗಳ 24 ರಂದು ‘ಕೃಷ್ಣಾ ರೈತ ಭವನ’ದಲ್ಲಿ ಸತ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು,” ಎಂದು ಮನವಿ ಮಾಡಿದರು.
ಪ್ರತಿಭಾವಂತರಿಗೆ ಗೌರವ
ಕಾರ್ಯಕ್ರಮದಲ್ಲಿ ಕಾಲೇಜು ಮಟ್ಟದ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಅಂತಿಮ ವರ್ಷದ ವಿದ್ಯಾರ್ಥಿಗಳು ಶಾಸಕ ಲಕ್ಷ್ಮಣ ಸವದಿ ಅವರಿಗೆ ಆತ್ಮೀಯವಾಗಿ ಸತ್ಕರಿಸಿ ಗೌರವ ಸಲ್ಲಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಶಾಮ್ ಪೂಜಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾಲೇಜಿನ ಬೆಳವಣಿಗೆ ಹಾಗೂ ಸಾಧನೆಗಳ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಭಾಕರ ಆರ್. ಖ್ಯಾಡಿ, ವಿಶಾಲ ದೇಸಾಯಿ, ಶಾಮ್ ಪೂಜಾರಿ, ಶಿವಾನಂದ ದಿವಾನಮಳ, ಅಬ್ದುಲ್ ಹಮೀದ್, ಡಾ. ಉಮಾಶ್ರೀ ಕುಲಕರ್ಣಿ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹುಸೇನ ಗಡ್ಡೆಕರ ನಿರೂಪಿಸಿದರು. ವಿಜಯಕುಮಾರ್ ಬಡಿಗೇರ ಸ್ವಾಗತಿಸಿದರು ಹಾಗೂ ರಮೇಶ್ ಸಕ್ರಿ ವಂದನಾರ್ಪಣೆ ಸಲ್ಲಿಸಿದರು.
ವರದಿ ವಿಠ್ಠಲ ಖೋಕಾಟೆ




















