ಶಿವಮೊಗ್ಗ: ಇರುವುಕ್ಕಿಯ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಆವರಣದಲ್ಲಿ “ನಿರಂತರ-2026” ಹೆಸರಿನಲ್ಲಿ ಸಾಂಪ್ರದಾಯಿಕ ದಿನ ಹಾಗೂ ಜಾನಪದ ಕಲಾ ಉತ್ಸವವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಶ್ರೀ ಕಣ್ಣೂರೇಶ್ವರ ಜಾನಪದ ಕಲಾಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಈ ಉತ್ಸವವು ವಿದ್ಯಾರ್ಥಿಗಳು ಹಾಗೂ ಕಲಾಭಿಮಾನಿಗಳ ಗಮನ ಸೆಳೆಯಿತು.
ಸಾಂಪ್ರದಾಯಿಕ ಉಡುಪುಗಳಲ್ಲಿ ಕಂಗೊಳಿಸಿದ ವಿದ್ಯಾರ್ಥಿಗಳು ವಿವಿಧ ಸಂಸ್ಕೃತಿಯ ವೈವಿಧ್ಯತೆಯನ್ನು ಅನಾವರಣಗೊಳಿಸಿದರು. ಕಾರ್ಯಕ್ರಮವನ್ನು ಶಿಕ್ಷಣ ನಿರ್ದೇಶಕರಾದ ಡಾ. ಹೇಮ್ಲಾ ನಾಯ್ಕ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಿಶೇಷಾಧಿಕಾರಿಗಳಾದ ಡಾ. ಕೆ.ಸಿ. ಶಶಿಧರ್ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಾನಪದ ಕಲಾವಿದ ಬಿ. ಟಾಕಪ್ಪ ಕಣ್ಣೂರು ಜಾನಪದ ಕಲೆಗಳ ಮಹತ್ವವನ್ನು ವಿವರಿಸಿ, ಯುವಜನರಲ್ಲಿ ಜನಪದ ಸಂಸ್ಕೃತಿಯ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು. ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಇದೇ ವೇಳೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಆರ್.ಸಿ. ಜಗದೀಶ್ ವಿವಿಧ ಕಲಾತಂಡಗಳನ್ನು ಅಭಿನಂದಿಸಿ, ಕಲಾವಿದರಿಗೆ ಸನ್ಮಾನ ಹಾಗೂ ನೆನಪಿನ ಕಾಣಿಕೆಗಳನ್ನು ವಿತರಿಸಿದರು. ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸಲು ವಿಶ್ವವಿದ್ಯಾಲಯ ಸದಾ ಬೆಂಬಲ ನೀಡಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















