ಬಳ್ಳಾರಿ / ಕಂಪ್ಲಿ : ಪೇಟೆ ಬಸವೇಶ್ವರ ನೀಲಮ್ಮನವರ ದೇವಸ್ಥಾನ ಕಂಪ್ಲಿ ಪಟ್ಟಣದ ಪ್ರಮುಖ ಆರಾಧ್ಯ ದೈವವಾಗಿದ್ದು, ಇಲ್ಲಿನ ಜೋಡಿ ರಥೋತ್ಸವ ಅತ್ಯಂತ ಪ್ರಸಿದ್ಧಿಯಾಗಿದೆ.
ಪಟ್ಟಣದ ಆರಾಧ್ಯ ದೈವ ಪೇಟೆ ಬಸವೇಶ್ವರ ನೀಲಮ್ಮನವರ ಜೋಡಿ ರಥದ ಗೊಂಬೆ, ಬಾಗಿಲ್ವಾಡಗಳ ದುರಸ್ತಿ ಕಾರ್ಯದಲ್ಲಿ ಸ್ಥಳೀಯ ಪರಶುರಾಮಪ್ಪ ಚಿತ್ರಗಾರ ವಿಜಯನಗರ ಜನಪದ ಕರಕುಶಲ ಕಲಾವಿದರ ಕುಟುಂಬದ ಸದಸ್ಯರು ತೊಡಗಿಕೊಂಡಿದ್ದಾರೆ.
ಎರಡು ರಥಗಳ ಬಾಗಿಲ್ವಾಡ, (ರಥದ ಪ್ರವೇಶ ದ್ವಾರದ ಚೌಕಟ್ಟುಗಳು) ಗೊಂಬೆ, ಸಿಂಹ, ಪಟ, ಡುಬುರಿಗಳ ಜೊತೆಗೆ ನಂದಿ, ರಾವಣ, ಇಬ್ಬರು ದ್ವಾರಪಾಲಕರ ದುರಸ್ತಿ ಭರದಿಂದ ಸಾಗಿದೆ. ಕಟ್ಟಿಗೆ ಪುಡಿ, ಹುಣಸೆಬೀಜದ ಅಂಬಲಿ (ಸರಿ), ಗೋಣಿ ತಟ್ಟಿನ ನಾರು ಸೇರಿ ಅಂಟು ತಯಾರಿಸಿ ದುರಸ್ತಿ ಮಾಡಲಾಗುತ್ತಿದೆ.
ನಂತರ, ಗೊಂಬೆಗಳ ಆಕಾರ ತಿದ್ದಿಕೊಂಡು ಬಟ್ಟೆ ಲೇಪಿಸಿ ಬಳಿಕ ವಿಭೂತಿ, ಹುಣಸೆಬೀಜದ ಅಂಬಲಿ(ಸರಿ)ಯನ್ನು ಮೂರು ಸಲಲೇಪನ ಮಾಡಿ ಶುದ್ಧಗೊಳಿಸಲಾಗುವುದು. ತದನಂತರ ಬಣ್ಣಲೇಪನಗೊಳಿಸಲಾಗುತ್ತದೆ. ಈ ಎಲ್ಲಾ ಕಾರ್ಯಗಳು ನಾಲೈದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಪರಶುರಾಮಪ್ಪ ಚಿತ್ರಗಾರ ವಿಜಯನಗರ ಜನಪದ ಕರಕುಶಲ ಕಲೆಗಳ ಟ್ರಸ್ಟ್ ಅಧ್ಯಕ್ಷೆ ಸುಮಿತ್ರಮ್ಮಚಿತ್ರಗಾರ ವಿವರಿಸಿದರು.
ಗೊಂಬೆಗಳ ದುರಸ್ತಿಯಲ್ಲಿ ಪರಶುರಾಮಪ್ಪ ಚಿತ್ರಗಾರ ಕುಟುಂಬದ ರಾಮಕೃಷ್ಣ, ಲಕ್ಷ್ಮಿ, ಸಂಗೀತಾ, ಸ್ವಪ್ನಾ, ಶೃತಿ, ರಾಮಚಂದ್ರ, ರವಿ, ರಾಜಾರಾಮ್, ಪ್ರಕಾಶ್, ಸುಮಂತ್ ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















