ಬಳ್ಳಾರಿ / ಕಂಪ್ಲಿ : ಕಂಪ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ ಜನರ ಮನೆ ಮಾತಾಗಿರುವ ಶಾಸಕ ಜೆ.ಎನ್.ಗಣೇಶ್ಗೆ ಎರಡನೇ ಹಂತದ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ಸೌಹಾರ್ದ ವೇದಿಕೆ ವೇದಿಕೆಯ ರಾಜ್ಯ ಉಪಾಧ್ಯಕ್ಷ ಶಬ್ಬೀರ್ ಹೆಚ್ ಒತ್ತಾಯಿಸಿದರು.
ಅವರು ಪಟ್ಟಣದಲ್ಲಿ ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿ, ವಿಜಯನಗರ (ಹೊಸಪೇಟೆ) ಸೇರಿದಂತೆ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ ಅತಿ ಹೆಚ್ಚಿನ ಅಭಿವೃದ್ಧಿ ಮಾಡುವ ಜೊತೆಗೆ ಜಿಲ್ಲೆಯ ಜನರ ಮನದಲ್ಲಿ ನೆಲೆಸಿದ್ದಾರೆ. ಮೊದಲಿಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಜೊತೆಗೆ ರೈತಾಪಿ ವರ್ಗ ಮತ್ತು ಕಾರ್ಮಿಕರ ಬಗ್ಗೆ ಅತಿ ಹೆಚ್ಚಿನ ಒಲವು ತೋರಿದ್ದಾರೆ. ಒಟ್ಟಾರೆಯಾಗಿ ಯುವ ನಾಯಕ ಉತ್ತರ ಕರ್ನಾಟಕ ಭಾಗದ ಅಹಿಂದ ಸಮುದಾಯಗಳ ಸಮಾನತೆಗಾಗಿ ಶ್ರಮಿಸುತ್ತಿದ್ದಾರೆ. ಜಾತ್ಯಾತೀತ ಮನೋಭಾವನೆಯೊಂದಿಗೆ ಸರ್ವರಲ್ಲೂ ಪ್ರೀತಿ, ವಿಶ್ವಾಸದೊಂದಿಗೆ ಸರಳ ಸಜ್ಜನಿಕೆಯ ರಾಜ್ಯಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಈಗಾಗಲೇ ರಾಜ್ಯದ ನೂತನ ಸಿಎಂ ಆಗಿ ಡಿ.ಕೆ.ಶಿವಕುಮಾರ ಪಟ್ಟಾಭಿಷೇಕ ಮಾಡಿಕೊಳ್ಳುವ ಜೊತೆಗೆ ಕೆಲವರಿಗೆ ಮೊದಲ ಹಂತದ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಕಲ್ಪಿಸಿದ್ದಾರೆ. ಅದರಂತೆಯೇ ಎರಡನೇ ಹಂತದ ಸಚಿವ ಸಂಪುಟದಲ್ಲಿ ಕಡ್ಡಾಯವಾಗಿ ಶಾಸಕ ಜೆ.ಎನ್.ಗಣೇಶ್ಗೆ ಸಚಿವ ಸ್ಥಾನ ನೀಡಬೇಕು. ಒಂದು ವೇಳೆ ಕಾಂಗ್ರೆಸ್ ಪಕ್ಷವು ಇವರನ್ನು ಗುರುತಿಸದೇ ಇದ್ದಲ್ಲಿ, ಬಳ್ಳಾರಿ, ವಿಜಯನಗರ ಜಿಲ್ಲೆ ಒಳಗೊಂಡಂತೆ ಉತ್ತರ ಕರ್ನಾಟಕದ ಬಹು ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಮತಗಳನ್ನು ಹೊಂದಿರುವ ವಾಲ್ಮೀಕಿ ನಾಯಕ, ಮುಸ್ಲಿಂ, ಹಿಂದುಳಿದ ವರ್ಗಗಳ ಮತಗಳನ್ನು ಪಕ್ಷ ಕಳೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















