ಬಳ್ಳಾರಿ / ಕಂಪ್ಲಿ: ತಾಲ್ಲೂಕಿನ ದೇವಸಮುದ್ರ ಗ್ರಾಮದ ಹೊರವಲಯದಲ್ಲಿರುವ ಶ್ರೀಕಲ್ಯಾಣಚೌಕಿ ಮಠ ಕಾಮಧೇನು ಗೋಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಮಧೇನು ಗೋಶಾಲೆ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ, ವಿವಿಧ ತಳಿಗಳ ಆರ್ಯುವೇದ ಔಷಧಿಗಳ ಬೀಜಗಳ ಬಿತ್ತನೆ ಕಾರ್ಯಕ್ರಮ ಮತ್ತು ಶ್ರೀಕಲ್ಯಾಣಚೌಕಿ ಮಠ ಜೀವವೈವಿಧ್ಯ ಮತ್ತು ಸಂಶೋಧನಾ ಕೇಂದ್ರ ಉದ್ಘಾಟನೆ ಕಾರ್ಯಕ್ರಮ ಸಡಗರ, ಸಂಭ್ರಮಗಳಿಂದ ಜರುಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೃಷಿ ತಜ್ಞ ಚಿತ್ರದುರ್ಗದ ರವಿತೇಜ ಮಾತನಾಡಿ, ನಾಡಿನಲ್ಲಿ ಗಿಡಮರಗಳ ನಾಶದಿಂದ ಪರಿಸರ ಹಾಳಾಗಿದ್ದು, ಕಾಲಕ್ಕೆ ಸರಿಯಾಗಿ ಮಳೆಯಾಗುತ್ತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಸ್ವಂತ ಸ್ಥಳಗಳಲ್ಲಿ, ಸರ್ಕಾರದ ಬಯಲು ಜಾಗಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಉಳಿವಿಗೆ ಪ್ರಯತ್ನಿಸಬೇಕು. ಇದರಿಂದ ಉತ್ತಮ ಪರಿಸರ ನಮ್ಮದಾಗುತ್ತದೆ ಎಂದರಲ್ಲದೆ, ಕೇವಲ ಗಿಡ ಮರಗಳನ್ನು ಬೆಳೆಸುವುದಲ್ಲದೆ, ಉತ್ತಮ ಆರ್ಯುವೇದ ಔಷಧ ಗುಣಗಳನ್ನು ಹೊಂದಿರುವ ಗಿಡಮರಗಳನ್ನು ಬೆಳೆಸುವಲ್ಲಿ ಮುಂದಾಗಬೇಕು ಎಂದರು.
ಸಾವಯವ ಕೃಷಿ ತಜ್ಞರಾದ ಬಸಲಿಂಗಯ್ಯಸ್ವಾಮಿ, ಶಿವಕುಮಾರ ಅವರು ರಸಾಯನಿಕ ಗೊಬ್ಬರ ಬಳಸಿ ಬೆಳೆಗಳನ್ನು ಬೆಳೆಯುವುದರಿಂದಾಗಿ ನಾವು ಬಳಸುವ ಆಹಾರ ಪದಾರ್ಥಗಳು ವಿಷಯುಕ್ತವಾಗಿರುವುದರ ಜೊತೆಗೆ ಫಲವತ್ತಾದ ಭೂಮಿಯೂ ಜವಳಾಗಿ ಬೆಳೆಗಳನ್ನು ಬೆಳೆಯದಂತ ಪರಿಸ್ಥಿತಿ ತಲೆದೋರಿದೆ ಇದರಿಂದಾಗಿ ರೈತರು ರಾಸಾಯನಿವಲ್ಲದ ಸಾವಯವ ಕೃಷಿಯತ್ತ ಗಮನ ಹರಿಸಬೇಕಾಗಿದೆ ಎಂದು ಸಾವಯವ ಕೃಷಿಗೆ ಬೇಕಾದ ವಿವಿಧ ವಸ್ತುಗಳ ತಯಾರಿಕೆ ಬಗ್ಗೆ ವಿವರಿಸಿದರು.
ದೇವಸಮುದ್ರ ಪಿಡಿಒ ಕೆ.ಎಚ್.ಶಶಿಕಾಂತ ಮಾತನಾಡಿ, ನಮ್ಮ ಗ್ರಾ.ಪಂ.ವ್ಯಾಪ್ತಿಯಲ್ಲಿ ಗೋಶಾಲೆ ಆರಂಭಿಸಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದ್ದು, ಗೋಶಾಲೆಗೆ ಅಗತ್ಯವಿರುವ ಸಹಕಾರವನ್ನು ಗ್ರಾ.ಪಂ. ನಿಂದ ನೀಡುವುದಾಗಿ ತಿಳಿಸಿದರು.
ಕಲ್ಯಾಣ ಚೌಕಿಮಠ ಕಾಮದೇನು ಗೋಶಾಲೆಯ ಸಂಸ್ಥಾಪಕ ಕೆ.ಎಂ.ಬಸವರಾಜ ಶಾಸ್ತ್ರಿಗಳು ಮಾತನಾಡಿ, ಕಂಪ್ಲಿ ತಾಲ್ಲೂಕಿನಲ್ಲಿ ಕೇವಲ ಗೋಶಾಲೆಯನ್ನು ಆರಂಭಿಸಿಲ್ಲ ಇಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಜೊತೆಗೆ ಗೋವುಗಳ ಬಗ್ಗೆ, ಗೋವುಗಳ ಉತ್ಪನ್ನದ ಬಗ್ಗೆ ಕಲಿಸುವು ಜೊತೆಗೆ ಶ್ರೀ ಕಲ್ಯಾಣ ಚೌಕಿಮಠ ಜೀವವೈವಿದ್ಯ ಮತ್ತು ಸಂಶೋಧನಾ ಕೇಂದ್ರವನ್ನು ಆರಂಭಿಸಿದ್ದು, ಇಲ್ಲಿ ಆರಂಭದಲ್ಲಿ ಜೂ.23 ರಿಂದ ಜೂ.25ರವರೆಗೆ ಮೂರು ದಿನಗಳ ಕಾಲ ಸಸ್ಯ ಅಂಧತ್ವ ಅಥವಾ ಸಸ್ಯ ಕರುಡುತನ ಮತ್ತು ರುತುಮಾನ ಆಧಾರಿತ ಸಸ್ಯ ಶಾಸ್ತ್ರ ಎರಡು ವಿಷಯಗಳನ್ನು ಒಳಗೊಂಡ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದರು.
ನಂತರ ಕಾಮಧೇನು ಗೋಶಾಲೆ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಕ್ಕೆ ಚಾಲನೆ ನೀಡಿದರಲ್ಲದೆ ವಿವಿಧ ರೀತಿಯ ಔಷಧೀತ ಗುಣಗಳಿರುವ ಬೀಜಗಳನ್ನು ಬಿತ್ತಿದರು.
ಕಾರ್ಯಕ್ರಮದಲ್ಲಿ ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯ ಘಣಮಠದಯ್ಯ ಶಾಸ್ತ್ರಿ, ಗಂಗಾವತಿಯ ಉದ್ಯಮಿಗಳಾದ ಉಗಮ್ ಚಂದ್ ಷೇಠ್, ಡಾ.ಜಗನ್ನಾಥ್ ಹಿರೇಮಠ, ಸಿಂಗನಾಳ್ ಕುಮಾರಪ್ಪ, ಹೊಸಕೋಟೆ ಜಗದೀಶ್, ಜಿ.ಆಮರೇಗೌಡ, ಅರವಿ ಅಮರೇಶಗೌಡ, ಎಲಿಗಾರ ವೆಂಕಟರೆಡ್ಡಿ ಹಾಗೂ ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















