ಕಳೆದು ಹೋಗುವ ಮುನ್ನ
ಉಳಿಸಿಕೊಳ್ಳು
ಅಳಿದು ಹೋಗುವ ಮುನ್ನ ಬಳಸಿ ಕೊಳ್ಳು
ಸವೆದು ಹೋಗುವ ಮುನ್ನ ಸಹಿಸಿ ಕೊಳ್ಳು
ಬಾಳಲ್ಲಿ ಕಳೆದು ಕೊಳ್ಳುವುದೇ ಹೆಚ್ಚು
ಸಿರಿತನ ಬರುವ ಮುನ್ನ ಬಡತನ ಅನುಭವಿಸು
ಹಿರಿತನ ಬರುವ ಮುನ್ನ ಕಿರಿತನ ಪ್ರೀತಿಸು
ಮಾತುಗಳ ಎದುರು ಮೌನ ಪ್ರೀತಿಸು
ಅಡಚಣೆಗಳ ದಾರಿಯಲ್ಲಿ ಆಚರಣೆಯ ಪಾಲಿಸು
ಬದುಕಿನ ಬಣ್ಣಗಳನು ಬಲು ಇಷ್ಟ ಪಡ ಬೇಡ
ಬಣ್ಣ ಹಾಕಿದ ವೇಷವಿದು ಹುಟ್ಟಿನಿಂದ ಬಂದದ್ದು
ಗಾಳಕ್ಕೆ ಬೀಳುವ ಮೊದಲು ಗಾಣಕ್ಕೆ ಮೈನೀಡಿ ಹಣ್ಣಾಗು
ಚುಚ್ಚಿ ನುಡಿಯುವವರ ಮುಂದೆ ಬಿಚ್ಚಿ ನೀ ಮಾತಾಡು.
ಸಮಯಕ್ಕೆ ಬೆಲೆ ಕೊಡದ ಬಾಳ ನೌಕೆಯ ಪಯಣ ಬೇಡ
ದೆಸೆಯಿಲ್ಲದ, ಮನಸಿಲ್ಲದ ಕನಸಿಲ್ಲದ ಸಂಸಾರ ಬೇಡ
ಅತಿಯಾದ ಊಟ, ಅತಿಯಾದ ಸಂಪತ್ತು ಮಾಡುವುದು ಬೇಡ
ಉರುಳುತ್ತಿರುವ ಸಂಸಾರದಲ್ಲಿ ಎದ್ದು ನಿಲ್ಲುವ ಛಲ ಬಿಡ ಬೇಡ
- ಶ್ರೀನಿವಾಸ ಜಿ. ಗಂಗೂರ, ಬೆಂಗಳೂರು.




















