ಬಳ್ಳಾರಿ / ಕಂಪ್ಲಿ : ಚುನಾವಣಾ ಆಯೋಗವು ಎಸ್ಐಆರ್ ಮೂಲಕ ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿಟ್ಟುಕೊಳ್ಳಲು ಮುಂದಾಗಿದೆ. ಆದರೆ, ನಕಲಿ ಮತಗಳನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಕಸರತ್ತು ಮಾಡುತ್ತಿದೆ ಎಂದು ಮಾಜಿ ಶಾಸಕ ಟಿ.ಎಚ್.ಸುರೇಶಬಾಬು ಆರೋಪಿಸಿದರು.
ಸ್ಥಳೀಯ ಕೊಟ್ಟಾಲ್ ರಸ್ತೆಯ ಮಾಜಿ ಶಾಸಕರ ತುಂಗಭದ್ರ ಕಾರ್ಯಾಲಯದಲ್ಲಿ ಬಿಜೆಪಿ ಜಿಲ್ಲಾ, ಕಂಪ್ಲಿ ಮಂಡಲದ ಕಂಪ್ಲಿ ಕ್ಷೇತ್ರದ ಬಿಎಲ್ಎ-2 ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಬಿಜೆಪಿ ಬೆಂಬಲ ನೀಡುವ ಜೊತೆಗೆ ಕಂಪ್ಲಿ ಕ್ಷೇತ್ರದ ಪ್ರತಿ ಬೂತ್ ಮತ್ತು ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಮತದಾರರ ಪಟ್ಟಿಗಳನ್ನು ಪರಿಶೀಲಿಸುವ ಕಾರ್ಯವನ್ನು ಬಿಎಲ್ಎ1 ಘಟಕದ ಕಾರ್ಯರ್ತರು ಮಾಡಬೇಕು. ಈಗಾಗಲೇ ಸಾಕಷ್ಟು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಬಹುತೇಕವಾಗಿ ಬಿಜೆಪಿ ಬಾವುಟ ಹಾರಿದೆ. ಈಗ ಕರ್ನಾಟದ ಸರದಿಯಲ್ಲಿದ್ದು, ಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಪಟ್ಟಕ್ಕೇರುವುದು ನಿಶ್ಚಿತ. ಕಳೆದ ಅವಧಿಯಲ್ಲಿ ಸುಳ್ಳು ಭರವಸೆ, ಆಶ್ವಾಸನೆ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹಿಂದಿನ ಬಿಜೆಪಿ ಅಧಿಕಾರದಲ್ಲಿ ಸೇತುವೆ ಮಂಜೂರು ಮಾಡಿಸಲಾಗಿತ್ತು. ಆದರೆ, ಸ್ಥಳೀಯ ಶಾಸಕ ಆರ್ಥಿಕ ಇಲಾಖೆಯಿಂದ ಬಿಲ್ ಕ್ಲಿಯರ್ ಮಾಡಿ, ಸೇತುವೆ ಮಾಡುವುದಕ್ಕೆ ಆಗುತ್ತಿಲ್ಲ. ಕಳೆದ ಮೂರು ವರ್ಷದಲ್ಲಿ ಬಹುದಿನದ ಬೇಡಿಕೆಯಾಗಿರುವ ಕಂಪ್ಲಿ ಸೇತುವೆಗೆ ಅನುದಾನ ಮಂಜೂರು ಮಾಡಿಸುವುದಕ್ಕೆ ಆಗಿಲ್ಲ. ಕಮಿಷನ್ ದಂಧೆ ನಡೆಯುತ್ತಿದ್ದು, ಅಭಿವೃದ್ಧಿ ಮರಿಚಿಕೆಯಾಗಿದೆ. ಈಗಾಗಲೇ ಕಾಂಗ್ರೆಸ್ ದುರಾಳಿತಕ್ಕೆ ಜನ ರೋಸಿ ಹೋಗಿದ್ದು, ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ಬಹುಜನರ ಆಸೆಯಾಗಿದೆ. ಆದ್ದರಿಂದ ಈಗಲಿಂದಲೇ ಬೂತ್ ಮಟ್ಟದಿಂದ ಪಕ್ಷ ಸಂಘಟಿಸಬೇಕು. ಕಂಪ್ಲಿ ಕ್ಷೇತ್ರದ ಮೀಸಲಾತಿ ಬದಲಾಗುತ್ತದೆ ಎಂಬ ಮಾತುಗಳು ಹರಿದಾಡುತ್ತಿದ್ದು, ಇದರ ಕಡೆಗೆ ಕಾರ್ಯಕರ್ತರು ಕಿವಿಗೊಡಬಾರದು. ನೂರಕ್ಕೆ ನೂರರಷ್ಟು ನಾನೇ ಮುಂದಿನ ಚುನಾವಣೆಯಲ್ಲಿ ನಿಲ್ಲುತ್ತೇನೆ. ಒಂದು ವೇಳೆ ಮೀಸಲಾತಿ ಬದಲಾದರೆ, ನಿಷ್ಠಾವಂತ ಕಾರ್ಯಕರ್ತರನ್ನು ನಿಲ್ಲಿಸಿ, ಗೆಲ್ಲಿಸಿಕೊಂಡು ಬರುವೆ ಎಂದರು.
ನಂತರ ಜಿಲ್ಲಾಧ್ಯಕ್ಷ ಅನೀಲ್ಕುಮಾರ ಮೋಕಾ ಮಾತನಾಡಿ, 24 ವರ್ಷದ ನಂತರ ದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಆದರೆ, ಬಿಜೆಪಿಯವರು ಎಸ್ಐಆರ್ ತಂದಿದ್ದಾರೆಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಇದು ಬಿಜೆಪಿ ತಂದಿದ್ದಲ್ಲ ಚುನಾವಣಾ ಆಯೋಗವು ಪರಿಷ್ಕರಣೆ ಮಾಡುತ್ತಿದೆ. ರಾಜ್ಯದಲ್ಲಿ 86 ಲಕ್ಷ ನಕಲಿ ಮತಗಳಿವೆ. ಜಿಲ್ಲೆಯಲ್ಲಿ 92 ಸಾವಿರ, ಕಂಪ್ಲಿ ಕ್ಷೇತ್ರದಲ್ಲಿ 18 ಸಾವಿರಕ್ಕೂ ಹೆಚ್ಚು ನಕಲಿ ಮತಗಳಿವೆ. ಆದ್ದರಿಂದ ಈ ಫೇಕ್ ವೋಟ್ಗಳನ್ನು ತೆಗೆದು ಹಾಕಬೇಕಾಗಿದೆ. ಈ ನಿಟ್ಟಿನಲ್ಲಿ ಬಿಎಲ್ಎ1 ಸೇರಿದಂತೆ ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಿ, ನಕಲಿ ಮತದಾರರನ್ನು ಹೊರ ಹಾಕುವಂತಹ ಕೆಲಸ ಮಾಡಬೇಕು ಎಂದರು.
ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷೇತ್ರದ ಪ್ರತಿ ಬೂತ್ ಮಟ್ಟದಲ್ಲಿ ಪಾರದರ್ಶಕ ಮತದಾರರ ಪರಿಷ್ಕರಣೆಗೆ ಬೆಂಬಲ ನೀಡಲಾಗುವುದು. ಇದರಿಂದ ನಕಲಿ ವೋಟ್ಗಳನ್ನು ತಡೆಯಲು ಸಾಧ್ಯ ಎಂದರು.
ಕಂಪ್ಲಿ ಕ್ಷೇತ್ರದ ಬಿಎಲ್ಎ1 ಜಿ.ಶ್ರೀನಿವಾಸ ಪ್ರಾಸ್ತಾವಿಕವಾಗಿ ಮಾತನಾಡಿ, ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ನಡೆಯುತ್ತಿದ್ದು, ಇದರಿಂದ ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿಟ್ಟುಕೊಳ್ಳುವುದು ಮತ್ತು ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರವಹಿಸುವ ಉದ್ದೇಶದ ಜೊತೆಗೆ ಕಳ್ಳ ಮತಗಳಿಗೆ ಸಂಪೂರ್ಣವಾಗಿ ಕಡಿವಾಣ ಬೀಳಲಿದೆ ಎಂದರು.
ನಂತರ ನೂತನವಾಗಿ ನೇಮಕಗೊಂಡ ವಿವಿಧ ಮೋರ್ಚದ ಪದಾಧಿಕಾರಿಗಳಿಗೆ ಆದೇಶ ಪ್ರತಿ ನೀಡಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ರೆಡ್ಡಿ, ಎಸ್ಐಆರ್ ಸಂಚಾಲಕ ಗಾಳಿ ಶಂಕ್ರಪ್ಪ, ರಾಜ್ಯ ಕಾರ್ಯಕಾರಣಿ ಸದಸ್ಯ ರ್ರಂಗಳ್ಳಿ ತಿಮ್ಮಾರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಅಳ್ಳಳ್ಳಿ ವಿರೇಶ, ಕುರುಗೋಡು ಮಂಡಲ ಅಧ್ಯಕ್ಷ ಮದಿರೆ ಕುಮಾರಸ್ವಾಮಿ, ಜಿಲ್ಲಾ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ರಬಿಯಾ ನಿಸಾರ್, ಮಂಡಲ ಯುವ ಮೋರ್ಚ ಉಪಾಧ್ಯಕ್ಷ ಎನ್.ಮನೋಜಗೌಡ, ನಗರ ಘಟಕ ಅಧ್ಯಕ್ಷ ಮುರಳಿ ಮೋಹನ್ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಕಟ್ಟೆ ವಿಶ್ವನಾಥ, ಬಸವಪ್ರಭು ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















