ಮಡಿಕೇರಿ : ರಾಜ್ಯದ ಅತ್ಯಂತ ಪ್ರಸಿದ್ಧ ಮತ್ತು ಸುಂದರಪ್ರವಾಸಿ ತಾಣಗಳಲ್ಲಿ ಒಂದಾದ ಮಡಿಕೇರಿಯ ಮಾಂದಲಪಟ್ಟಿ (ಗಾಳಿಪಟ ಚಿತ್ರದ ಮುಗಿಲುಪೇಟೆ) ಗಿರಿಧಾಮಕ್ಕೆ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರ ನಿರ್ದೇಶನದ ಮೇರೆಗೆ ನಿರ್ಮಿಸಲಾದ 60 ಲಕ್ಷ ರೂ. ವೆಚ್ಚದ 4 ಕಿ.ಮೀ ರಸ್ತೆಯನ್ನು ಹೊದ್ದೂರು ಪಂಚಾಯತ್ ಮಾಜಿ ಅಧ್ಯಕ್ಷರಾದ ಎಚ್.ಎ.ಹಂಸ ರವರು ಸ್ಥಳೀಯ ಮುಖಂಡರೊಂದಿಗೆ ಶಾಸಕರ ಅನುಪಸ್ಥಿತಿಯಲ್ಲಿ ಉದ್ಘಾಟನೆ ಮಾಡಿದರು.
ಸ್ಥಳೀಯ ನಿವಾಸಿಗಳು, ಗ್ರಾಮಸ್ಥರು ಹಾಗೂ ಬಾಡಿಗೆ ಜೀಪ್ ಮಾಲಿಕರ ಕೋರಿಕೆ ಮೇರೆಗೆ ಶಾಸಕರು ಈ ರಸ್ತೆಯನ್ನು ನಿರ್ಮಾಣ ಮಾಡಲು ಅವಕಾಶ ಮಾಡಿದ್ದು ನಿಯಮ ಬಾಹಿರ ಚಟುವಟಿಕೆಗಳು ಪ್ರವಾಸಿ ತಾಣದಲ್ಲಿ ನಡೆಯದಂತೆ ಎಚ್ಚರವಹಿಸಬೇಕು ಎಂದು ಸ್ಥಳಿಯರಿಗೆ ಹಂಸ ರವರು ಮನವಿ ಮಾಡಿದರು.
ಕಾಲೂರು ಗ್ರಾಮಕ್ಕೆ ಬಸ್ ಬರುವ ರಸ್ತೆ ಹದಗೆಟ್ಟಿದ್ದು ತಕ್ಷಣಕ್ಕೆ ತಾತ್ಕಾಲಿಕ ದುರಸ್ತಿ ಕಾರ್ಯಕ್ಕೆ ಡಾ.ಮಂತರ್ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಅವರು ಪ್ರಾಸ್ತವಿಕವಾಗಿ ಮಾತನಾಡಿ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಕ್ಕೆ ಬಾಡಿಗೆ ಜೀಪ್ ಚಾಲನೆ ಮಾಡಿ ಬದುಕು ಕಟ್ಟಿಕೊಂಡಿರುವ ನೂರಾರು ಕುಟುಂಬಗಳ ಹಿತದೃಷ್ಟಿಯಿಂದ ಮತ್ತು ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರಾದ ಡಾ.ಮಂತರ್ ಗೌಡ ಅವರು ಕೊಡಗು ಫಾರೆಸ್ಟ್ ಫೌಂಡೇಶನ್ ನಿಧಿಯಿಂದ 50 ಲಕ್ಷ ರೂ. ರಾಜ್ಯ ಸರ್ಕಾರದ ವನ್ಯಜೀವಿ ವಿಭಾಗದ ಅನುದಾನದಲ್ಲಿ 10 ಲಕ್ಷ ರೂಗಳು ಸೇರಿದಂತೆ ಒಟ್ಟು 60 ಲಕ್ಷ ರೂ. ಗಳನ್ನು ಒದಗಿಸಿದ ಮೇರೆಗೆ ಇಲಾಖೆ ನಾಲ್ಕು ತಿಂಗಳುಗಳ ಕಾಲ ಕಾಮಗಾರಿ ನಡೆಸಿ ಈಗ ಲೋಕಾರ್ಪಣೆ ಮಾಡಲಾಗಿದೆ ಎಂದು ವಿವರಣೆ ನೀಡಿದರು.
ಹದಿನೈದು ದಿನಗಳಲ್ಲಿ ಶಾಸಕರು ಕಾಲೂರು ಗ್ರಾಮಕ್ಕೆ ಬಂದು ಗ್ರಾಮಸ್ಥರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.
ವರದಿ : ಪ್ರಿತುನ್ ಪೂವಣ್ಣ




















