ಜಿಲ್ಲೆಯ ಹಿರಿಯ ಸಾಹಿತಿ, ಪತ್ರಕರ್ತರು, ಪರಿಸರ ಚಿಂತಕ ಹಾಗೂ ಕನ್ನಡ ಪರ ಚಿಂತಕ ಡಾ.ಭೇರ್ಯ ರಾಮಕುಮಾರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಜುಲೈ 12 ರಂದು ನಡೆಯಲಿರುವ ಕನ್ನಡನುಡಿ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಕಳೆದ 40 ವರ್ಷಗಳಲ್ಲಿ ಗ್ರಾಮಾಂತರ ಬುದ್ಧಿಜೀವಿಗಳ ಅಧ್ಯಕ್ಷರಾಗಿ 365 ಸಾಹಿತ್ಯ ಕಾರ್ಯಕ್ರಮಗಳ ಸಂಘಟನೆ, ಉದಯೋನ್ಮುಖ ಕವಿಗಳ ಸುಮಾರು 235 ಕೃತಿಗಳ ಪ್ರಕಟಣೆ, 40 ವರ್ಷಗಳಲ್ಲಿ ಕನ್ನಡ ನಾಡುನುಡಿ ಕುರಿತು ವಿವಿಧ ಶಾಲಕಾಲೇಜುಗಳಲ್ಲಿ ಸುಮಾರು 600 ಉಪನ್ಯಾಸಗಳು, ಪರಿಸರ ಜಾಗೃತಿ ಕುರಿತಂತೆ ರಾಜ್ಯದ ವಿವಿಧ ಶಾಲಾ ಕಾಲೇಜುಗಳಲ್ಲಿ ಒಂದು ಸಾವಿರ ಉಪನ್ಯಾಸಗಳ ನೀಡಿಕೆ, ಕನ್ನಡ ಭಾಷೆ ಬಳಸದ ಸುಮಾರು ಐದು ನೂರಕ್ಕೂ ಹೆಚ್ಚು ನಾಮಫಲಕಗಳ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವೈಯಕ್ತಿಕವಾಗಿ ದೂರು ನೀಡಿ ಅವುಗಳಲ್ಲಿ ಕನ್ನಡ ಭಾಷೆ ಅಳವಡಿಸಲು ಕಾರಣರಾಗಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ನಾಡು ನುಡಿ ಕುರಿತಂತೆ ನೂರಾರು ಲೇಖನಗಳನ್ನು ಬರೆಯುವ ಮೂಲಕ ಇವರು ವಿಶಿಷ್ಟ ಸಾಧನೆ ಮಾಡಿದ್ದಾರೆ.
ಎರಡು ಕವನಸಂಕಲನ, 12 ಕ್ಕೂ ಹೆಚ್ಚು ಬೀದಿನಾಟಕಗಳನ್ನು ಇವರು ರಚಿಸಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿಯೇ ಕನ್ನಡಕ್ಕಾಗಿ ಗೋಕಾಕ್ ಹೋರಾಟದಲ್ಲಿ ಭಾಗವಹಿಸಿದ ಭೇರ್ಯ ರಾಮಕುಮಾರ್ ಅವರು ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಕವಿಗಳ ಭಾವಚಿತ್ರ ಹಾಕಬೇಕು, ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರಮುಖ ರಸ್ತೆಗಳಿಗೆ ಆಯಾ ಜಿಲ್ಲೆಯ ಕವಿಗಳ ಹೆಸರು ನಾಮಕರಣ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ನಿರಂತರ ಒತ್ತಡ ಹೇರುತ್ತಾ ಬಂದಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು,ಸಾಹಿತ್ಯ ಪ್ರೇಮಿಗಳಿಗೆ ತಮ್ಮ ಜನ್ಮದಿನದಂದು ,ತಮ್ಮ ತಂದೆ ತಾಯಿಯ ಜನ್ಮದಿನದಂದು,ಮದುವೆ ವಾರ್ಷಿಕೋತ್ಸವದ ದಿನದಂದು,ಹಿರಿಯರ ನೆನಪಿನಲ್ಲಿ ಪ್ರತಿ ವರ್ಷವೂ ಒಂದೊಂದು ಸಸಿ ನೆಟ್ಟು ಬೆಳೆಸಬೇಕೆಂದು ಪ್ರಮಾಣ ವಚನ ಭೋದಿಸುತ್ತಾ ಬಂದಿದ್ದಾರೆ. ಜೊತೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ತಮ್ಮ ನೇತ್ರಗಳನ್ನು, ಮೈಸೂರು ವೈದ್ಯಕೀಯ ಕಾಲೇಜಿಗೆ ತಮ್ಮ ದೇಹವನ್ನು ದಾನ ಮಾಡಲು ಭೇರ್ಯ ರಾಮಕುಮಾರ್ ದಂಪತಿಗಳು ಒಪ್ಪಿಗೆ ಪತ್ರ ನೀಡಿದ್ದಾರೆ.
ಭೇರ್ಯ ರಾಮಕುಮಾರ್ ಅವರ ಕನ್ನಡ ನಾಡು ನುಡಿ ಸೇವೆ,ಕನ್ನಡ ಸಾಹಿತ್ಯ ಸಂಘಟನೆ, ಸಾಹಿತ್ಯ ರಚನೆ,ಪರಿಸರ ಚಿಂತನೆ ಹಾಗೂ ದೇಹದಾನ ಹಾಗೂ ನೇತ್ರದಾನಕ್ಕೆ ಒಪ್ಪಿಗೆ ನೀಡುವ ಮೂಲಕ ಸಮಾಜಪರ ಕಾಳಜಿಯನ್ನು ಪರಿಗಣಿಸಿ ಅವರನ್ನು ಕನ್ನಡ ನುಡಿ ಸಮ್ಮೇಳನದ ಅಧ್ಯಕ್ಷರಾಗಿ ಮಾಡಲಾಗಿದೆ.
ಈ ಕನ್ನಡ ನುಡಿ ಸಮ್ಮೇಳನವನ್ನು ಧಾರವಾಡದ ಚೇತನ ಪ್ರತಿಷ್ಠಾನ, ಬೆಂಗಳೂರಿನ ಗಂಧದ ಗುಡಿ ಕನ್ನಡ ಸಂಘ ಹಾಗೂ ನವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತು ಸಂಯುಕ್ತವಾಗಿ ಹಮ್ಮಿಕೊಂಡಿವೆ.
- ಕರುನಾಡ ಕಂದ ಸುದ್ದಿ




















