ಆಂಗ್ಲ ಭಾಷೆ ಬೋಧನೆಗೆ ಐಚ್ಚಿಕ ಆಂಗ್ಲ ಭಾಷೆ ಓದಿದವರೇ ಬೇಕು ಎಂಬ ನಿಯಮವಿರುವಾಗ, ಕನ್ನಡ ಬೋಧನೆಗೆ ಐಚ್ಚಿಕ ಕನ್ನಡ ಪದವೀಧರರು ಏಕೆ ಬೇಡ?
ಸಮಾಜ ವಿಜ್ಞಾನ ಶಿಕ್ಷಕರಿಂದಲೇ ಅಥವಾ ಇತರ ವಿಷಯದ ಶಿಕ್ಷಕರಿಂದಲೇ ಕನ್ನಡ ಬೋಧನೆ ಮಾಡಿಸುವುದು ಕನ್ನಡ ಭಾಷೆಗೂ ಹಾಗೂ ಕನ್ನಡವನ್ನೇ ನಂಬಿ ಉನ್ನತ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೂ ಮಾಡುವ ಘೋರ ಅನ್ಯಾಯವಾಗಿದೆ. ದುರಾದೃಷ್ಟವಶಾತ್, ಇಂದಿಗೂ ಇದೇ ಪರಿಸ್ಥಿತಿ ಮುಂದುವರೆದಿದ್ದು, ಹೊಸ ನೇಮಕಾತಿಗಳಲ್ಲೂ ಪ್ರತ್ಯೇಕವಾಗಿ ಕನ್ನಡ ಶಿಕ್ಷಕರ ಹುದ್ದೆಗಳನ್ನು ಕರೆಯುತ್ತಿಲ್ಲ. ಇದರಿಂದಾಗಿ ಉನ್ನತ ವ್ಯಾಸಂಗ ಮಾಡಿ, ಶಿಕ್ಷಕ ವೃತ್ತಿಯ ಕನಸು ಕಾಣುತ್ತಿರುವ ನಮ್ಮಂತಹ ಸಾವಿರಾರು ಅರ್ಹ ಯುವಕ, ಯುವತಿಯರಿಗೆ ತೀವ್ರ ನಿರಾಶೆಯಾಗಿದೆ.
ಆದುದರಿಂದ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿರುವ ತಾವು ತಕ್ಷಣವೇ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ, ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಗಮನ ಸೆಳೆಯಬೇಕು. ಜಿ.ಪಿ.ಟಿ ನೇಮಕಾತಿಯಲ್ಲಿ ಪ್ರತ್ಯೇಕವಾಗಿ “ಕನ್ನಡ ಭಾಷಾ ಶಿಕ್ಷಕರ” ಹುದ್ದೆಗಳನ್ನು ಸೃಷ್ಟಿಸಿ, ಐಚ್ಚಿಕ ಕನ್ನಡ ಪದವೀಧರರಿಗೆ ಮಾತ್ರ ಬೋಧಿಸಲು ಅವಕಾಶ ಕಲ್ಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಅತ್ಯಂತ ಕಳಕಳಿಯಿಂದ ವಿನಂತಿಸುತ್ತೇನೆ.
ವಂದನೆಗಳೊಂದಿಗೆ,
- ಸುಚಿತ್ರ ,ಕನ್ನಡ ಅತಿಥಿ ಉಪನ್ಯಾಸಕಿ
ದಕ್ಷಿಣ ಕನ್ನಡ.




















