
ಬಳ್ಳಾರಿ / ಕಂಪ್ಲಿ (ಕುಡತಿನಿ): ಕಳೆದ ವರ್ಷದಲ್ಲಿ ಕುಡಿಯುವ ನೀರಿನ ಸಂತೃಪ್ತಿಯಲ್ಲಿ ಜನರಿದ್ದರು. ಆದರೆ, ಪ್ರಸಕ್ತ ವರ್ಷದ ಮುಂಗಾರಿನ ಮಳೆ ಕೈಕೊಟ್ಟ ಪರಿಣಾಮ ಜನ ಜಾನುವಾರುಗಳು, ಪಕ್ಷಿ, ಪ್ರಾಣಿಗಳ ಸಂಕುಲಕ್ಕೆ ಆಧಾರಸ್ತಂಬವಾಗಿದ್ದ, ಕೆರೆ, ಕಟ್ಟೆ, ಹಳ್ಳ-ಕೊಳ್ಳಗಳ ನೀರಿನ ಜಲ ಬತ್ತಿದ್ದು, ಕುಡಿಯುವ ನೀರಿನ ಕಂಟಕ ಎದುರಾಗಿದೆ.
ಸಮೀಪದ ಕುಡತಿನಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರತೆ ಪಡೆದುಕೊಂಡಿದೆ. ಹನಿ ನೀರಿಗಾಗಿ ತಿರುಗಾಡು ವಂತಾಗಿದೆ. ಮಳೆಗಾಲ ಬಂದರೂ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ತಪ್ಪಿಲ್ಲ. ಮಹಿಳೆಯರು, ಮಕ್ಕಳು ಕೊಡ ಅಲೆದಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗಾಢ ನಿದ್ರೆಗೆ ಜಾರಿದಂತಾಗಿದೆ. ಇಲ್ಲಿ ಸುಮಾರು 19 ವಾರ್ಡ್ಗಳಿದ್ದು, 35 ಸಾವಿರ ಜನಸಂಖ್ಯೆ ಇದೆ. 45 ಸಾವಿರ ನಲ್ಲಿಗಳಿದ್ದು, ಇದರಲ್ಲಿ ಕೆಲವೊಂದು ಮಾತ್ರ ಚಾಲ್ತಿಯಲ್ಲಿವೆ. ಇನ್ನು 9 ಶುದ್ಧ ನಿರ್ವಹಿಸುತ್ತಿವೆ. 85 ಬೋರ್‌ವೆಲ್‌ಗಳನ್ನು ಕೊರೆಸಲಾಗಿದ್ದು, ಇದರಲ್ಲಿ ಕೆಲವೊಂದುಮಾತ್ರ ಚಾಲ್ತಿಯಲ್ಲಿದ್ದು, ಇನ್ನುಳಿದವು ಅಂತರ್ಜಲ ಕುಸಿತದಿಂದ ನಿರುಪಯುಕ್ತ ಗೊಂಡಿವೆ. ಇಲ್ಲಿನ ಜನತೆ ಜಿಂದಾಲ್ ಮತ್ತು ಕೃಷಿ ಹಾಗೂ ಕೂಲಿ ಕಾಯಕವನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಕುಡತಿನಿ ಪಟ್ಟಣಕ್ಕೆ ಒಂದೇ ಕುಡಿಯುವ ನೀರಿನ ಕೆರೆ ನಿರ್ಮಾಣಗೊಂಡಿದ್ದು, ತಿಮ್ಮಲಾಪುರ ಕಾಲುವೆಗೆ ನೀರು ಹರಿದರೆ ಮಾತ್ರ ಕೆರೆಗೆ ನೀರು ಹರಿಯುತ್ತದೆ. ಇಲ್ಲವಾದರೆ ತಿಮ್ಮಲಾಪುರ ಗ್ರಾಮದಿಂದ ನೇರವಾಗಿ ಬೋರ್‌ವೆಲ್ ಗಳಿಂದ ಕುಡುತಿನಿ ಪಟ್ಟಣಕ್ಕೆ ನೀರು ಒದಗಿಸಲಾಗುತ್ತದೆ. ಸರಿಯಾದ ಸಮಯಕ್ಕೆ ಪಟ್ಟಣದ ವಾರ್ಡ್ಗಳಿಗೆ ನೀರು ಸರಬರಾಜಾಗದ ಪರಿಣಾಮ ಶಾಲಾ ಮಕ್ಕಳು ಹಾಗೂ ಹಿರಿಯರು ಕೆಲಸ ಕಾರ್ಯ ಬಿಟ್ಟು ನೀರಿಗಾಗಿ ಕಾಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಸುತ್ತಮುತ್ತ ವಿವಿಧ ಕೈಗಾರಿಕಾ ಕಂಪನಿ ಗಳಿದ್ದು, ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬಿರುವುದರ ಜೊತೆಗೆ ಅಂತರ್ಜಲ ಕುಸಿತದಿಂದ ಪಟ್ಟಣ ಸೇರಿ ಸುತ್ತಮುತ್ತ ಗ್ರಾಮದಲ್ಲಿ ಕೂಡ ನಲ್ಲಿಗಳು ಹಾಗೂ ಜನರು ಅನೇಕ ಸಮಸ್ಯೆ ಅನುಭವಿಸುತ್ತಿದ್ದಾರೆ.
ಪಟ್ಟಣಕ್ಕೆ ಸರಿಯಾದ ಸಮಯಕ್ಕೆ ನೀರು ಒದಗಿಸುವಂತೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಸಂಘ ಸಂಸ್ಥೆಗಳು ಹಾಗೂ ನಾಗರಿಕರು ಮನವಿ ಸಲ್ಲಿಸಿದರೂ ಪ್ರಯೋಜನ ಇಲ್ಲದಂತಾಗಿದೆ.
ಪಟ್ಟಣದಲ್ಲಿ ಪಟ್ಟಣ ಪಂಚಾಯ್ತಿ ಇದ್ದು, ವರ್ಷಕ್ಕೆ ನೂರಾರು ಕೋಟಿ ಅನುದಾನ ಸರ್ಕಾರದಿಂದ ಬರುತ್ತಿದ್ದರೂ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವಲ್ಲಿ ವಿಫಲಗೊಂಡಿರುವುದು ವಿಪರ್ಯಾಸವಾಗಿದೆ.
ಕಳೆದ ವರ್ಷದಲ್ಲಿ ಮಳೆಯಿಂದಾಗಿ ಕೆರೆಗಳಿಗೆ ಕಳೆ ಬಂದಿತ್ತು. ಆದರೆ, ಈ ಬಾರಿ ಮಳೆ ಇಲ್ಲದೇ ಇರುವುದರಿಂದ ಕುಡತಿನಿಗೆ ನೀರೊದಗಿಸುವ ಕೆರೆಯೂ ಸಂಪೂರ್ಣವಾಗಿ ಬರಿದಾಗಿದೆ. ಇದರಿಂದ ಕುಡತಿನಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನತೆಗೆ ನೀರಿ ಸಮಸ್ಯೆ ವಿಪರೀತವಾಗಿದ್ದು ಮತ್ತು ಪ್ರಾಣಿ, ಪಕ್ಷಿಗಳ ಸಂಕುಲಕ್ಕೆ ಹನಿ ನೀರಿಗೂ ಕಂಟಕ ಎದುರಾಗಿದೆ. ಸಾಕಷ್ಟು ಜನರು ದಿನಕೂಲಿಯಲ್ಲೇ ದಿನಿತ್ಯದ ಜೀವನ ಸಾಗಿಸುವ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಲೆ ದೋರಿದೆ. ಆದ್ದರಿಂದ ಅಧಿಕಾರಿಗಳು ಎಚ್ಚರವಹಿಸಿ, ಕುಡಿಯುವ ನೀರಿನ ವ್ಯವಸ್ಥೆಗೆ ಸೂಕ್ತ ಕ್ರಮವಹಿಸಬೇಕು.
- ಟಿ.ಕೆ. ಕಾಮೇಶ್, ವಕೀಲರು ಕುಡತಿನಿ.
ಈ ಬಾರಿಯ ಮಳೆಗಳು ಕೈಕೊಟ್ಟ ಹಿನ್ನಲೆ ಕೆರೆಗೆ ನೀರಿಲ್ಲದಂತಾಗಿದೆ. ಪಟ್ಟಣದಲ್ಲಿ ಜನತೆಗೆ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಿ, ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕೆ.ಇ.ಡಿ. ಬೋರ್ಡ್ನಿಂದ ತಿಮ್ಮಲಾಪುರ ಮತ್ತು ಕುಡುತಿನಿ ಪಟ್ಟಣ ಸೇರಿ 25 ಬೋರ್‌ವೆಲ್ ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ, ನೀರಿನ ಸಮಸ್ಯೆ ಆಗದಂತೆ ನಿಗಾ ವಹಿಸಲಾಗುವುದು.
- ಎನ್. ಶಿವಲಿಂಗಪ್ಪ, ಮುಖ್ಯಾಧಿಕಾರಿ, ಪಪಂ, ಕುಡತಿನಿ.
ವರದಿ : ಜಿಲಾನಸಾಬ್ ಬಡಿಗೇರ್




















