ಬೆಳಗಾವಿ : ಬೆಂಗಳೂರು – ಬೆಳಗಾವಿ – ಮುಂಬೈ ನಡುವೆ ಸ್ಲೀಪರ್ ವಂದೇ ಭಾರತ ರೈಲು ಸಂಚಾರವನ್ನು ಪ್ರಾಂಭಿಸಲು ಒತ್ತಾಯಿಸಿ ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ ಸಂಸದ ಜಗದೀಶ ಶೆಟ್ಟರ್ ನವ ದೆಹಲಿಯಲ್ಲಿ ಭೇಟಿ ಮಾಡಿ ಒತ್ತಾಯಿಸಿದರು.
ಬೆಳಗಾವಿ ನಗರ ಅತೀ ವೇಗದಿಂದ ಬೆಳೆಯುತ್ತಿರುವ ನಗರ. ಮೇಲಾಗಿ ಬೆಂಗಳೂರು ನಂತರ ಎರಡನೇ ರಾಜಧಾನಿಯಂದು ಪರಿಗಣಿಸಲ್ಪಡುವ ನಗರ. ಶಿಕ್ಷಣ, ಉದ್ಯಮಿಕರಣ, ಆರೋಗ್ಯ ಸೇವೆ, ಕೃಷಿ ಇತ್ಯಾದಿ ರಂಗದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಲಿದೆ.
ಈ ಮಾರ್ಗದಲ್ಲಿ ಸ್ಲೀಪರ್ ವಂದೇ ಭಾರತ ರೈಲು ಸಂಚಾರ ಪ್ರಾರಂಭಿಸಿದಲ್ಲಿ ಬೆಳಗಾವಿ ಸುತ್ತಮುತ್ತಲಿನ ತಾಲೂಕುಗಳ ಹಾಗೂ ಇತರೆ ಜಿಲ್ಲೆಗಳ ಅಭಿವೃದ್ಧಿಗೆ ಸಹಾಯಕಾರಿಯಾಗಲಿದೆ. ಮುಂಬೈ ನಗರವನ್ನು ಅತ್ಯಂತ ಅಲ್ಪಾವಧಿ ಸಮಯದಲ್ಲಿ ತಲುಪುವುದರಿಂದ ಹಲವು ಪ್ರದೇಶಗಳ ಆರ್ಥಿಕ ಬೆಳವಣಿಗೆಗೆ ಅನುಕೂಲಕರವಾಗಲಿದೆ, ಅಲ್ಲದೇ ಈ ರೈಲು ಉತ್ತರ ಕರ್ನಾಟಕದ ಹೆಚ್ಚಿನ ಪ್ರದೇಶದಲ್ಲಿ ಸಂಚರಿಸುವುದರಿಂದ ಪ್ರಾದೇಶಿಕ ಸಮತೋಲನವನ್ನು ಸಹ ಕಾಪಾಡುವಲ್ಲಿ ಸಹಕಾರಿಯಾಗಲಿದೆ ಮತ್ತು ಉತ್ತರ ಕರ್ನಾಟಕದ ಬಹು ಜನರ ಬೇಡಿಕೆ ಸಹ ಇದಾಗಿದೆ ಎಂದು ತಿಳಿಸಲಾಯಿತು.
ಬೆಂಗಳೂರು – ಬೆಳಗಾವಿ – ಪುಣೆ – ಮುಂಬೈ ಈ ಮಾರ್ಗದಲ್ಲಿ ಸ್ಲೀಪರ್ ವಂದೇ ಭಾರತ ರೈಲು ಸಂಚರಿಸುವ ಬಗ್ಗೆ ವಿಷಯವನ್ನು ಮುಂಬರುವ ದಿನಗಳಲ್ಲಿ ಅಗತ್ಯ ಪರಿಗಣಿಸುವುದಾಗಿ ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ ಭರವಸೆ ನೀಡಿದರು.




















