
ಕೊರಟಗೆರೆ ಕ್ಷೇತ್ರದ ಮಾಜಿ ಸಚಿವ, ಅಭಿವೃದ್ಧಿಯ ತತ್ವ ಬದ್ಧ ಹಿರಿಯ ರಾಜಕಾರಣಿ, ಸರಳ ಸಜ್ಜನಿಕೆಯ, ಪ್ರಾಮಾಣಿಕ ಹಾಗೂ ಜನನಾಯಕ ಸಿ. ವೀರಣ್ಣ ಅವರಿಗೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿತು.

ಕೊರಟಗೆರೆ ತಾಲೂಕಿನ ಬುಕ್ಕಪಟ್ಟಣ ಗ್ರಾಮಕ್ಕೆ ಅಂತಿಮ ದರ್ಶನ ಪಡೆಯಲು ರಾಜ್ಯದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಗಣ್ಯರು, ಅಧಿಕಾರಿಗಳು ಹಾಗೂ ಸಾವಿರಾರು ಅಭಿಮಾನಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಿ. ವೀರಣ್ಣ ಅವರ ಬದುಕು ಇಂದಿನ ರಾಜಕೀಯಕ್ಕೆ ಆದರ್ಶವಾಗಿದ್ದು, ಅವರ ಸೇವೆ ಸದಾ ಸ್ಮರಣೀಯವಾಗಿರಲಿದೆ ಎಂದು ಹೇಳಿದರು.
1941ರಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಬಡ ಕೃಷಿಕ ಕುಟುಂಬದಲ್ಲಿ ಜನಿಸಿದ ಸಿ. ವೀರಣ್ಣ ಅವರು, ಬಡತನದ ನಡುವೆಯೂ ಶಿಕ್ಷಣದ ಮೂಲಕ ಬದುಕು ಕಟ್ಟಿಕೊಂಡು, ಕಾನೂನು ಪದವಿ ಪಡೆದು ವಕೀಲ ವೃತ್ತಿಗೆ ಕಾಲಿಟ್ಟರು. ನಂತರ ಜನಸೇವೆಯನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು ರಾಜಕೀಯ ಪ್ರವೇಶಿಸಿದರು.
ಆರಂಭದಲ್ಲಿ ಸೋಲುಗಳನ್ನು ಕಂಡರೂ ಹಿಂಜರಿಯದೆ ಜನರ ವಿಶ್ವಾಸ ಗಳಿಸಿದ ಅವರು, 1983ರಲ್ಲಿ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದರು. ಅವರ ಪ್ರಾಮಾಣಿಕತೆ ಮತ್ತು ನೈತಿಕ ರಾಜಕಾರಣವನ್ನು ಮೆಚ್ಚಿದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ವಿಧಾನಸಭೆಯ ಉಪಸಭಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಬಳಿಕ ಏಳು ಖಾತೆಗಳ ಸಚಿವರಾಗಿಯೂ ಹಲವು ಮಹತ್ವದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.
ವಾಲ್ಮೀಕಿ, ನಾಯಕ, ನಾಯ್ಕ, ಬೇಡ ಹಾಗೂ ಬೇಡರ ಸಮುದಾಯಗಳನ್ನು ಒಂದೇ ಪರಿಶಿಷ್ಟ ಪಂಗಡದ ಪರ್ಯಾಯ ಹೆಸರುಗಳಾಗಿ ಕೇಂದ್ರ ಸರ್ಕಾರದಿಂದ ಮಾನ್ಯತೆ ದೊರಕಿಸಲು ಅವರು ನಡೆಸಿದ ಹೋರಾಟ ಐತಿಹಾಸಿಕವಾಗಿದ್ದು, ಲಕ್ಷಾಂತರ ಕುಟುಂಬಗಳ ಬದುಕಿಗೆ ಹೊಸ ಆಶಾಕಿರಣ ಮೂಡಿಸಿತು.
ಮೌಲ್ಯಾಧಾರಿತ ರಾಜಕಾರಣ, ಸರಳ ಜೀವನ, ಸ್ವಾಭಿಮಾನ ಹಾಗೂ ಜನಪರ ಚಿಂತನೆಯ ಮೂಲಕ ರಾಜ್ಯ ರಾಜಕೀಯದಲ್ಲಿ ವಿಶಿಷ್ಟ ಗುರುತಿಸಿಕೊಂಡಿದ್ದ ಸಿ. ವೀರಣ್ಣ ಅವರ ನಿಧನದಿಂದ ರಾಜ್ಯವು ಒಬ್ಬ ಆದರ್ಶ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ.
ಇಂದು ನಡೆದ ಅಂತ್ಯಸಂಸ್ಕಾರದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ವಿವಿಧ ಪಕ್ಷಗಳ ನಾಯಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಮಾಜದ ಮುಖಂಡರು ಹಾಗೂ ಸಾವಿರಾರು ಅಭಿಮಾನಿಗಳು ಪಾಲ್ಗೊಂಡು ಭಾವುಕರಾಗಿ ಅಂತಿಮ ನಮನ ಸಲ್ಲಿಸಿದರು. ಸರ್ಕಾರದ ವತಿಯಿಂದ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಜನಸೇವೆ, ಪ್ರಾಮಾಣಿಕತೆ ಮತ್ತು ಮೌಲ್ಯಾಧಾರಿತ ರಾಜಕಾರಣಕ್ಕೆ ಜೀವಂತ ಉದಾಹರಣೆಯಾಗಿದ್ದ ಮಾಜಿ ಸಚಿವ ಸಿ. ವೀರಣ್ಣ ಅವರ ಅಗಲಿಕೆ ಕೊರಟಗೆರೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆದರ್ಶಗಳು ಮುಂದಿನ ಪೀಳಿಗೆಗೆ ಸದಾ ದಾರಿದೀಪವಾಗಲಿವೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಸಾವಿರಾರು ಜನರ ಕಂಬನಿಯ ನಡುವೆ ಸಕಲ ಸರ್ಕಾರಿ ಗೌರವಗಳೊಂದಿಗೆ ಜನನಾಯಕ ಸಿ. ವೀರಣ್ಣ ಅವರಿಗೆ ಅಂತಿಮ ವಿದಾಯ ಹೇಳಲಾಯಿತು.
- ಪ್ರಸನ್ನಕುಮಾರ್




















