ಗಂಗಾವತಿ: ನಗರದ ಆನೆಗುಂದಿ ರಸ್ತೆಯಲ್ಲಿರುವ ಸಾಯಿನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 26ನೇ ವರ್ಷದ ಗುರು ಪೂರ್ಣಿಮಾ ಮಹೋತ್ಸವವು ಬುಧವಾರ ವಿಜೃಂಭಣೆಯಿಂದ ನಡೆಯಲಿದೆ ಎಂದು ಶ್ರೀ ಶಿರಡಿ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಟಿ. ರಾಮಕೃಷ್ಣ ತಿಳಿಸಿದ್ದಾರೆ.
ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಕಲ್ಯಾಣ, ರಾಜ್ಯದಲ್ಲಿ ಸಕಾಲಕ್ಕೆ ಮಳೆ-ಬೆಳೆ ಸಮೃದ್ಧಿ ಮತ್ತು ಜನರ ಸುಖ-ಶಾಂತಿಗಾಗಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ವಿವರ:
ಬೆಳಿಗ್ಗೆ 5:15: ಕಾಕಡ ಆರತಿಯೊಂದಿಗೆ ದಿನದ ಧಾರ್ಮಿಕ ಕಾರ್ಯಕ್ರಮಗಳು ಆರಂಭ.
ಪ್ರಮುಖ ಪೂಜೆಗಳು: ಪಂಚಾಮೃತಾಭಿಷೇಕ, ವಿಶೇಷ ಪುಷ್ಪಾರ್ಚನೆ, ಮತ್ತು ದೇವರಿಗೆ ವೈವಿಧ್ಯಮಯ ಹೂವಿನ ಅಲಂಕಾರ.
ವಿಶೇಷ ಸೇವೆಗಳು:
ನವಗ್ರಹ ದೋಷ ಪರಿಹಾರ ಪಾರಾಯಣ, ಪಲ್ಲಕ್ಕಿ ಉತ್ಸವ, ಮತ್ತು ಭಜನಾ ಕಾರ್ಯಕ್ರಮ.
ಮಹಾ ಮಂಗಳಾರತಿ ಹಾಗೂ ಪ್ರಸಾದ: ದಿನಪೂರ್ತಿ ಐದು ಮಹಾ ಆರತಿಗಳು ನಡೆಯಲಿದ್ದು, ಮಧ್ಯಾಹ್ನ ತೀರ್ಥ ಪ್ರಸಾದ ಹಾಗೂ ಸುಮಾರು 10,000 ಭಕ್ತರಿಗೆ ಮಹಾಪ್ರಸಾದ (ಅನ್ನಸಂತರ್ಪಣೆ) ವ್ಯವಸ್ಥೆ ಮಾಡಲಾಗಿದೆ.
’ಶ್ರೀ ಸಾಯಿರಾಮ್ ಕೋಟಿ ಜಪ ಬರಹ’ ಮಹಾಸಂಕಲ್ಪ:
ದೇವಸ್ಥಾನದ ಅರ್ಚಕ ವೆಂಕಟೇಶ್ ಜೋಶಿ ಮಾತನಾಡಿ, “ಕಲಿಯುಗದಲ್ಲಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಿರಡಿ ಸಾಯಿಬಾಬಾ, ಶ್ರೀ ದತ್ತಾತ್ರೇಯರ ಅವತಾರವೆಂದು ಭಕ್ತರು ನಂಬಿದ್ದಾರೆ. ದೇವಸ್ಥಾನದಲ್ಲಿ ಪ್ರಸ್ತುತ ‘ಶ್ರೀ ಸಾಯಿರಾಮ್ ಕೋಟಿ ಜಪ ಬರಹ’ ಮಹಾಸಂಕಲ್ಪ ನಡೆಯುತ್ತಿದ್ದು, ಮುಂದಿನ ಗುರು ಪೂರ್ಣಿಮೆಯೊಳಗೆ ಈ ಜಪ ಬರಹವನ್ನು ಪೂರ್ಣಗೊಳಿಸಿ ಹೋಮದಲ್ಲಿ ಸಮರ್ಪಿಸಲಾಗುತ್ತದೆ” ಎಂದು ಮಾಹಿತಿ ನೀಡಿದರು. ಗುರು ಪೂರ್ಣಿಮೆಯ ಈ ಪವಿತ್ರ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಸಾಯಿಬಾಬಾರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಸಮಿತಿಯವರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಪ್ರಮುಖರಾದ ಹನುಮಂತಯ್ಯ ಶ್ರೇಷ್ಠಿ , ಪ್ರಹ್ಲಾದ, ಸುರೇಶ, ಕಿರಣ್, ಗುರುರಾಜ, ರಾಮಚಂದ್ರ ಶ್ರೇಷ್ಠಿ , ಕಲ್ಕಿ ಮೂರ್ತಿ, ನಮಃ ಶಿವಾಯ, ಕೃಷ್ಣಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
- ಕರುನಾಡ ಕಂದ



















