
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇಶಾದ್ಯಂತ 64 ಸ್ಥಳಗಳಲ್ಲಿ ‘ಗುರುಪೂರ್ಣಿಮೆ ಮಹೋತ್ಸವ’ವು ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ !
ಧರ್ಮಾಚರಣೆ, ಸ್ವಬೋಧ-ಶತ್ರುಬೋಧ ಜಾಗೃತಿ ಮತ್ತು ರಾಷ್ಟ್ರರಕ್ಷಣೆಗೆ ಆಹ್ವಾನ ! – ಡಾ. ಪ್ರಣವ್ ಮಲ್ಯ, ಹಿಂದೂ ಜನಜಾಗೃತಿ ಸಮಿತಿ
ಮಂಗಳೂರು : ಡಾ. ಪ್ರಣವ್ ಮಲ್ಯ ಇವರು ಮಾತನಾಡುತ್ತಾ, “ಇಂದಿನ ಜಾಗತಿಕ ಅಸ್ಥಿರತೆ, ಆರ್ಥಿಕ ಸಂಕಷ್ಟ ಹಾಗೂ ಮಾನಸಿಕ ಒತ್ತಡದ ವಾತಾವರಣದಲ್ಲಿ ಶಾಂತಿ ಮತ್ತು ಧೈರ್ಯವನ್ನು ಪಡೆಯಲು ಗುರುಗಳ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಸಾಧನೆ ಹಾಗೂ ಧರ್ಮಾಚರಣೆ ಮಾಡುವುದು ಅತ್ಯಗತ್ಯವಾಗಿದೆ. ಹಿಂದೂ ಸಮಾಜವು ತನ್ನ ಧರ್ಮ-ಸಂಸ್ಕೃತಿಯ ಜ್ಞಾನವಾದ ‘ಸ್ವಬೋಧ’ವನ್ನು ಬೆಳೆಸಿಕೊಳ್ಳುವುದರ ಜೊತೆಗೆ, ಲವ್ ಜಿಹಾದ್, ಮತಾಂತರ ಹಾಗೂ ವೈಚಾರಿಕ ಆಘಾತಗಳಂತಹ ಷಡ್ಯಂತ್ರಗಳ ಕುರಿತು ‘ಶತ್ರುಬೋಧ’ವನ್ನು ಜಾಗೃತವಾಗಿಟ್ಟುಕೊಂಡು ಸಂಘಟಿತರಾಗಬೇಕಿದೆ. ಧರ್ಮಶಿಕ್ಷಣವನ್ನು ಪಡೆದು ಧರ್ಮರಕ್ಷಣೆಯಲ್ಲಿ ಸಕ್ರಿಯರಾಗುವುದು, ಪ್ರಥಮ ಚಿಕಿತ್ಸೆ ಹಾಗೂ ಸ್ವರಕ್ಷಣೆಯಂತಹ ಆಪತ್ಕಾಲೀನ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಮತ್ತು ದಿನನಿತ್ಯ ಕುಲದೇವತೆ-ದತ್ತರ ನಾಮಜಪ ಹಾಗೂ ಸ್ತೋತ್ರ ಪಠಣದ ಮೂಲಕ ರಾಷ್ಟ್ರ ಮತ್ತು ಧರ್ಮ ಸೇವೆಗೆ ಸಮರ್ಪಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ,” ಎಂದರು.
ಅವರು ಮಂಗಳೂರಿನ ಕೊಡಿಯಾಲ್ ಬೈಲ್ನಲ್ಲಿರುವ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಕೂಟಕ್ಕಳ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ಗುರುಪೂರ್ಣಿಮೆಯಲ್ಲಿ ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಘರ್ಷ ಮತ್ತು ಸಾಧನೆಯ ದಿಶೆ’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜುಲೈ 29 ರಂದು ದೇಶಾದ್ಯಂತ 64 ಸ್ಥಳಗಳಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’ಗಳನ್ನು ಆಯೋಜನೆ ಮಾಡಲಾಯಿತು.
ಜಪ-ಸಾಧನೆಯ ಮೂಲಕ ಗುರುತತ್ತ್ವವನ್ನು ಮೈಗೂಡಿಸಿಕೊಳ್ಳಿ – ಶ್ರೀ ರಾಜೇಶ್ ಶೆಟ್ಟಿ.
“ಗುರು-ಶಿಷ್ಯ ಪರಂಪರೆಯು ಭಾರತೀಯ ಸಂಸ್ಕೃತಿ, ಜ್ಞಾನ ಮತ್ತು ಅಧ್ಯಾತ್ಮದ ಅತ್ಯಂತ ಪವಿತ್ರ ಹಾಗೂ ಪ್ರಾಚೀನ ಪರಂಪರೆಯಾಗಿದೆ. ತುಳುನಾಡಿನ ನಾಥ ಪರಂಪರೆಯ ಮತ್ಸ್ಯೇಂದ್ರನಾಥ ಮತ್ತು ಗೋರಖನಾಥರ ಬಾಂಧವ್ಯವು ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಗುರುತತ್ತ್ವ ಎಂಬುದು ಕೇವಲ ಒಬ್ಬ ವ್ಯಕ್ತಿ ಅಥವಾ ದೇಹಕ್ಕೆ ಸೀಮಿತವಾಗಿರದೆ, ಅದೊಂದು ಸನಾತನ ಚೈತನ್ಯ ಶಕ್ತಿಯಾಗಿದೆ. ಈ ಗುರುತತ್ತ್ವವನ್ನು ನಮ್ಮತ್ತ ಆಕರ್ಷಿಸಲು ಮತ್ತು ಗುರುಕೃಪೆ ಪಡೆಯಲು ಪ್ರತಿಯೊಬ್ಬರೂ ಜಪ-ಸಾಧನೆಯನ್ನು ಮಾಡಬೇಕು. ಗುರುವಿನ ಅನುಗ್ರಹವಿದ್ದರೆ ಜೀವನದಲ್ಲಿ ಎಲ್ಲವನ್ನೂ ಸಾಧಿಸಲು ಸಾಧ್ಯ,” ಎಂದು ಶ್ರೀ ರಾಜೇಶ್ ಶೆಟ್ಟಿ (LLB) ಅವರು ಪ್ರೇರಣಾದಾಯಿ ಕಥೆಗಳ ಮೂಲಕ ಉಪಸ್ಥಿತರಿಗೆ ಧರ್ಮಾಚರಣೆಯನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು.
ಈ ಮಹೋತ್ಸವದ ಆರಂಭದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮಾ ಪೂಜೆ (ಗುರುಪೂಜೆ), ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಸಂದೇಶ ವಾಚನ, ರಾಮರಾಜ್ಯದ ಸ್ಥಾಪನೆಗಾಗಿ ಸಂಕಲ್ಪ ಮತ್ತು ನಾಮಜಪ, ಧರ್ಮರಕ್ಷಕರು ಹಾಗೂ ಹಿಂದುತ್ವನಿಷ್ಠರ ಸತ್ಕಾರ, ರಾಷ್ಟ್ರಭಕ್ತ ಮತ್ತು ಧರ್ಮನಿಷ್ಠ ಗಣ್ಯರ ಮಾರ್ಗದರ್ಶನ ಹಾಗೂ ‘ಸಮಿತಿ’ಯ ಪ್ರೇರಣಾಸ್ಥಾನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಕಾರ್ಯವನ್ನಾಧರಿಸಿದ ಕಿರುಚಿತ್ರ (ಡಾಕ್ಯುಮೆಂಟರಿ) ಪ್ರದರ್ಶಿಸಲಾಯಿತು.
ಈ ಮಹೋತ್ಸವದಲ್ಲಿ ವಿವಿಧ ವಿಷಯಗಳ ಮೇಲಿನ ಗ್ರಂಥ-ಪ್ರದರ್ಶನ ಹಾಗೂ ರಾಷ್ಟ್ರ-ಧರ್ಮ ವಿಷಯದ ಫಲಕ-ಪ್ರದರ್ಶನ (ಫ್ಲೆಕ್ಸ್ ಬೋರ್ಡ್) ಕೂಡ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಹಿಂದೂ ಮಹಾಸಭಾದ ಅಧ್ಯಕ್ಷರಾದ ಶ್ರೀ ಲೋಹಿತ್ ಸುವರ್ಣ, ಹಿಂದೂ ಸೇವಾ ಸಮಿತಿ (ರಿ.) ಜಪ್ಪಿನಮೊಗರು ಇದರ ಅಧ್ಯಕ್ಷರಾದ ಶ್ರೀ ಯೋಗೀಶ್ ರೈ, ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಜಪ್ಪಿನಮೊಗರಿನ ಮಾಜಿ ಕಾರ್ಪೊರೇಟರ್ ಶ್ರೀ ಸುರೇಂದ್ರ, ಬಜಾಲ್ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಶ್ರೀ ರಾಮಚಂದ್ರ ಆಳ್ವ, ವಕೀಲರಾದ ಶ್ರೀ ಸುಜಯ್ ಶೆಟ್ಟಿ ಹಾಗೂ ಸುರತ್ಕಲ್ ಸಾರ್ವಜನಿಕ ಶಾರದಾ ಮಹೋತ್ಸವದ ಮಾಜಿ ಅಧ್ಯಕ್ಷರಾದ ಶ್ರೀ ಕೃಷ್ಣ ಶೆಟ್ಟಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
400ಕ್ಕೂ ಅಧಿಕ ಧರ್ಮಾಭಿಮಾನಿಗಳು ಇದರ ಲಾಭ ಪಡೆದುಕೊಂಡರು.
- ಕರುನಾಡ ಕಂದ ಸುದ್ದಿ




















