
ಬಳ್ಳಾರಿ / ಕಂಪ್ಲಿ : ಪತ್ರಕರ್ತರು ಸಮಾಜ ಮತ್ತು ಆಡಳಿತ ವರ್ಗದ ನಡುವೆ ಪರಿಣಾಮಕಾರಿ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಸೇವೆ ಸಮಾಜಕ್ಕೆ ಅತ್ಯಮೂಲ್ಯವಾಗಿದೆ ಎಂದು ಪುರತಗೇರಿಯ ಕೈಲಾಸ ಲಿಂಗ ಶಿವಾಚಾರ್ಯರು ಹೇಳಿದರು.
ತಾಲೂಕಿನ ಎಮ್ಮಿಗನೂರು ಸಮೀಪದ ಎಚ್. ವೀರಾಪುರ ಗ್ರಾಮದ ಜ್ಞಾನಜ್ಯೋತಿ ಶಿವಲಿಂಗ ಮಂದಿರದಲ್ಲಿ ಗುರುವಾರ ಕುರುಗೋಡು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಕರ್ತರ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಪತ್ರಕರ್ತರು ಹಗಲು, ರಾತ್ರಿ ಎನ್ನದೆ ಜನಸಾಮಾನ್ಯರ ಸಮಸ್ಯೆಗಳನ್ನು ಬೆಳಕಿಗೆ ತಂದು ಸಮಾಜ ತಿದ್ದುವ ಜವಾಬ್ದಾರಿಯುತ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸುವ ಜೊತೆಗೆ ಪ್ರಜಾಪ್ರಭುತ್ವದ ಬಲವರ್ಧನೆಗೆ ಪ್ರಮುಖ ಅಸ್ತ್ರವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಜ್ಞಾನಜ್ಯೋತಿ ಶಿವಲಿಂಗ ಮಂದಿರದ ಜಡೇಶ ತಾತ ಅವರು ದಿವ್ಯಸಾನಿಧ್ಯ ವಹಿಸಿ ಮಾತನಾಡಿ, ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪತ್ರಕರ್ತರು ವೃತ್ತಿಪರ ಒತ್ತಡ, ಸುಳ್ಳು ಸುದ್ದಿಗಳ ಹಾವಳಿ ಹಾಗೂ ವಿವಿಧ ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದರೂ ಸಮಾಜದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕಾ ಸ್ವಾತಂತ್ರ್ಯ, ಸಾಮಾಜಿಕ ಜವಾಬ್ದಾರಿ ಹಾಗೂ ನೈತಿಕ ಮೌಲ್ಯಗಳನ್ನು ಉಳಿಸಿಕೊಂಡು ಜನಪರ ಪತ್ರಿಕೋದ್ಯಮವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾನಿಪ ತಾಲೂಕು ಅಧ್ಯಕ್ಷ ಜಿ.ಎಂ.ಬಸಯ್ಯಸ್ವಾಮಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಿಕೋದ್ಯಮದ ಮೌಲ್ಯ, ನಿಷ್ಪಕ್ಷಪಾತ ವರದಿ ಹಾಗೂ ಸಮಾಜಮುಖಿ ಜವಾಬ್ದಾರಿಯ ಕುರಿತು ವಿವರಿಸಿದರು.
ಕಾನಿಪ ಸಂಘದ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಜಿ.ಚಂದ್ರಶೇಖರಗೌಡ ಪ್ರಾಸ್ತವಿಕವಾಗಿ ಮಾತನಾಡಿ, ಪತ್ರಕರ್ತರು ಸಮಾಜದ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಜವಾಬ್ದಾರಿಯುತ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ವರದಿಗಾರ ಶಿವಕುಮಾರ ಬೆನ್ನೂರು ಮಾತನಾಡಿ, ಪತ್ರಕರ್ತರು ಆಡಳಿತ ವ್ಯವಸ್ಥೆ ಹಾಗೂ ಜನಸಾಮಾನ್ಯರ ನಡುವಿನ ಪರಿಣಾಮಕಾರಿ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜದ ಸಮಸ್ಯೆಗಳನ್ನು ಬೆಳಕಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಎಚ್ ಎಮ್ ಮಂಜುನಾಥ್ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಚಾನಾಳ ರೋಹಿತ, ದೇವೇಂದ್ರಪ್ಪ ಮಣ್ಣೂರು ಇವರಿಗೆ ಪ್ರತಿಭಾರತ್ನ ಪ್ರಶಸ್ತಿ, ಬಯಲಾಟ ಕಲಾವಿದ ದೇವೇಂದ್ರಪ್ಪ, ಜೋಗತಿ ರೇಣುಕಾ, ಬಸವರಾಜ, ಪ್ರಕಾಶ್ ಯಲ್ಲಾಪುರ ಇವರಿಗೆ ಸೇವಾರತ್ನ ಪ್ರಶಸ್ತಿ, ಹಿರಿಯ ಪತ್ರಕರ್ತ ಅರಳಿ ಕುಮಾರಸ್ವಾಮಿ,ಪತ್ರಿಕಾ ವಿತರಕರಾದ ಭರತ್ ಕುಮಾರ, ಹುಸೇನ್ ಸಾಬ್ ಅವರಿಗೆ ಕಾಯಕರತ್ನ ಪ್ರಶಸ್ತಿಯೊಂದಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ದ್ಯಾಮನಗೌಡ ಪಾಟೀಲ್, ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯ ಉಪ್ಪಾರ ರಮೇಶ, ಮುಖ್ಯಗುರು ಕೊಟ್ರಪ್ಪ, ಮುಖಂಡರಾದ ಬಿ ಸದಾಶಿವಪ್ಪ ಧಣಿ, ಶಿಕ್ಷಕರಾದ ರಾಮು, ಮಲ್ಲೇಶ, ಪೀರಾವಲಿ ಸೇರಿದಂತೆ ವಿದ್ಯಾರ್ಥಿಗಳು, ಸ್ಥಳೀಯರು, ಭಕ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















