ಬಳ್ಳಾರಿ / ಕಂಪ್ಲಿ : ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಕಂಪ್ಲಿ ಪಟ್ಟಣ ಮತ್ತು ಹಳ್ಳಿಗಳಲ್ಲಿ ಸಂಭ್ರಮ, ಸಡಗರದಿಂದ ಭಾನುವಾರ ಆಚರಿಸಲಾಯಿತು.
ಹಬ್ಬದ ಪ್ರಯುಕ್ತ ಬೆಳಿಗ್ಗೆ ಮಹಿಳೆಯರು ಮನೆಯ ಮುಂದೆ ರಂಗೋಲಿಯಲ್ಲಿ ಬಣ್ಣ ಬಣ್ಣದ ನಾಗನ ಚಿತ್ರ ಬಿಡಿಸಿದರು. ಹೊಸ ಬಟ್ಟೆ ತೊಟ್ಟು ದೇವಸ್ಥಾನ, ನಾಗಪ್ಪನ ಕಟ್ಟೆಗಳಿಗೆ ತೆರಳಿ ಹಾಲೆರೆಯುವ ಮೂಲಕ ಭಕ್ತಿ ಮೆರೆದರು.
ನಾಗರ ಪಂಚಮಿ ನಿಮಿತ್ತ ಎಳ್ಳು, ರವಾ ಉಂಡಿ ಕಟ್ಟಿ, ನಂತರ ಮನೆಯಲ್ಲಿ ಮೊದಲಿಗೆ ದೇವರಿಗೆ ಪೂಜೆ ಸಲ್ಲಿಸಿದ ನಂತರ ಹೂ, ಕಾಯಿ, ಹಣ್ಣು ಹೀಗೆ ಹಲವು ಪೂಜಾ ಸಾಮಗ್ರಿಗಳೊಂದಿಗೆ ಕಲ್ಲು ನಾಗಪ್ಪ ಇರುವ ದೇವಸ್ಥಾನಗಳಿಗೆ ತೆರಳಿ ಹಾಲು ಎರೆದರು. ಹಾಲೆರೆದ ನಂತರ ಓಣಿಗಳ ಗಿಡಗಳಿಗೆ ಜೋಕಾಲಿ ಕಟ್ಟಿ ದೊಡ್ಡವರು, ಚಿಕ್ಕವರು ಎನ್ನದೆ ಆಡಿದರು.
ಮಹಿಳೆಯರ ಹಬ್ಬ ಎಂದೇ ಕರೆಯಲ್ಪಡುವ ನಾಗರ ಪಂಚಮಿ ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿರುವ ನಾಗಪ್ಪ, ಕಂಪ್ಲಿ-ಕೋಟೆಯ ಐತಿಹಾಸಿಕ ಪಂಪಾಪತಿ ದೇವಸ್ಥಾನ ಬಳಿ, 17ನೇ ವಾರ್ಡಿನ ನಾಗಪ್ಪ ಕಟ್ಟೆ ಸೇರಿದಂತೆ ನಗರದ ದೇವಸ್ಥಾನಗಳಲ್ಲಿನ ಕಲ್ಲು ನಾಗರ ದೇವರಿಗೆ ಮತ್ತು ಹುತ್ತುಗಳಿಗೆ ಹಾಲು, ಬೆಲ್ಲದೊಂದಿಗೆ ವೈವಿಧ್ಯಮಯ ಸಿಹಿ ತಿಂಡಿಗಳನ್ನು ಎಡೆ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















