
ಬಳ್ಳಾರಿ / ಕಂಪ್ಲಿ : 2026-27ರ ಪ್ರಸಕ್ತ ಜಲವರ್ಷದಲ್ಲಿ ತುಂಗಭದ್ರಾ ಯೋಜನೆಯ ಕೆಳಮಟ್ಟದ ಕಾಲುವೆ (TBP LLC) ಕೋಟಾದಡಿ ತಕ್ಷಣವೇ ನೀರು ಬಿಡುಗಡೆ ಮಾಡುವಂತೆ ಹಾಗೂ ಬರೀ ಹತ್ತು ದಿನ ನೀರೊಯ್ಯುವುದಲ್ಲ 90 ದಿನಗಳ ಕಾಲ ಆಂಧ್ರದವರು ನೀರೊಯ್ಯಬೇಕು. ಅಂದಾಗ ಮಾತ್ರ ಕರ್ನಾಟಕದ ಎಲ್‌ಎಲ್‌ಸಿ ಕಾಲುವೆ ಭಾಗದ ಡಿಸ್ಟ್ರಿಬ್ಯೂಟರ್, ತೂಬುಗಳಿಗೆ ಸಮರ್ಪಕವಾಗಿ ರೈತರಿಗೆ ನೀರೊದಿಗಿಸಲು ಸಾಧ್ಯ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಅವರು ಶನಿವಾರ ಪಟ್ಟಣದ ಶಾಸಕರ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಇತ್ತೀಚೆಗೆ ಬೆಂಗಳೂರಿನ ವಿಧಾನಸಭಾ ಅಧಿವೇಶನದಲ್ಲಿ ತುಂಗಭದ್ರ ಜಲಾಶಯದ ಬಲದಂಡೆಯ ಎಲ್‌ಎಲ್‌ಸಿ ಕಾಲುವೆಗೆ ಆಂಧ್ರ ಮತ್ತು ಕರ್ನಾಟಕ ಕೋಟಾದಡಿ ನೀರು ಹರಿಸಿ, ರೈತರ ಬೆಳೆಗಳಿಗೆ ಅನುವು ಮಾಡಿಕೊಡುವಂತೆ ಧ್ವನಿ ಎತ್ತುವ ಮೂಲಕ ಮನವಿ ಮಾಡಲಾಗಿತ್ತು. ಅದರಂತೆ ಆಂಧ್ರದವರು ಆ. 22ರಿಂದ 31ವರೆಗೆ 10ದಿನ 600 ಕ್ಯೂಸೆಕ್ ನೀರು ತೆಗೆದುಕೊಳ್ಳುವ ನಿರ್ಧಾರ ಮಾಡಿರುವುದು ಖುಷಿ ವಿಚಾರವಾದರೂ, 10 ದಿನದ ಬದಲು 90 ದಿನವರೆಗೆ ಆಂಧ್ರದವರು ಎರಡು ಕೋಟಾದಡಿ ನೀರು ಹರಿಸಿಕೊಳ್ಳಬೇಕಾಗಿದೆ. ಇದರಿಂದ ಮಾತ್ರ ನಮ್ಮ ಭಾಗದ ರೈತರಿಗೆ ಸಂಪೂರ್ಣವಾಗಿ ಬೆಳೆಗಳಿಗೆ ನೀರು ಹರಿಸಿಕೊಳ್ಳಲು ಸಾಧ್ಯ. ಈಗಾಗಲೇ ಈ ಭಾಗದ ರೈತರು ಬೆಳೆ ಬೆಳೆಯುವುದಕ್ಕೆ ಆಗದೇ, ಸಂಕಷ್ಟಕ್ಕೀಡಾಗಿದ್ದಾರೆ. ರೈತರು ಹಾಕಿದಂತಹ ಸಸಿ ಮಡಿಗಳು ಬಹುತೇಕವಾಗಿ ಅವಧಿ ಮುಗಿಸಿ, ಭತ್ತದ ನಾಟಿಗೆ ಬಾರದಂತಾಗಿವೆ. ಜಲಾಶಯದಲ್ಲಿ ನೀರಿದ್ದರೂ, ಆಂಧ್ರದವರು ಈ ಬಾರೀ ತಮ್ಮ ಕೋಟಾದಡಿ ನೀರು ತೆಗೆದುಕೊಳ್ಳದ ಹಿನ್ನಲೆ ಕರ್ನಾಟಕದ ಕೋಟಾದಡಿ ಬಿಟ್ಟಂತಹ ನೀರು, ಕಾಲುವೆ ಮೂಲಕ ಉಪ ಕಾಲುವೆಗಳಿಗೆ ಏರುತ್ತಿಲ್ಲ. ಇದರಿಂದ ರೈತರು ಬೆಳೆ ಇಲ್ಲದೇ ಕಂಗಾಲಾಗಿದ್ದಾರೆ. ಆದ್ದರಿಂದ ಎರಡು ರಾಜ್ಯದ ಕೋಟಾದಡಿ ನೀರು ಹರಿಸಿಕೊಂಡಾಗ ಮಾತ್ರ ಕೆಳ ಮಟ್ಟದ ಉಪ ಕಾಲುವೆಗಳ ರೈತರು ಜಮೀನುಗಳಿಗೆ ನೀರು ಹರಿಯಲು ಸಾಧ್ಯ. ಈ ನಿಟ್ಟಿನಲ್ಲಿ ಆಂಧ್ರದವರು ಸತತ 90 ದಿನಗಳ ಕಾಲ ಮಂಡಳಿಯ ಸ್ಲೂಯಿಸ್‌ಗಳಿಗೆ (Sluices) 90 ಕ್ಯೂಸೆಕ್ಸ್ ಹಾಗೂ ಆಂಧ್ರಪ್ರದೇಶ ವ್ಯಾಪ್ತಿಯ ಟಿ.ಬಿ.ಪಿ. ಎಲ್.ಎಲ್.ಸಿ. ಪ್ರದೇಶಕ್ಕೆ 580 ಕ್ಯೂಸೆಕ್ಸ್ ಸೇರಿದಂತೆ ಒಟ್ಟು ನೀರನ್ನು ಹರಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ನೀರೊಯ್ಯುವ ನಿರ್ಧಾರಕ್ಕೆ ಬರಬೇಕು ಎಂದರು.
ವರದಿ : ಜಿಲಾನಸಾಬ್ ಬಡಿಗೇರ್




















