
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸುಕ್ಷೇತ್ರ ಕೂಡಲಸಂಗಮ ಲಿಂಗಾಯತರ ಆರಾಧ್ಯದೈವ ಕೂಡಲಸಂಗಮನಾಥನು ಇರುವ ಪುಣ್ಯಕ್ಷೇತ್ರ ಮತ್ತು ಮನುಕುಲಕ್ಕೆ ವೈಚಾರಿಕ ಕ್ರಾಂತಿಯ ಬೀಜ ಬಿತ್ತಿದ ಬಸವಣ್ಣನ ವಿದ್ಯಾಭೂಮಿ. ಇಲ್ಲಿಗೆ ವರ್ಷವಿಡೀ ಲಕ್ಷಾಂತರ ಭಕ್ತರು ಈ ಕ್ಷೇತ್ರಕ್ಕೆ ಬರುತ್ತಾರೆ. ಅದರಲ್ಲೂ ಸಂಕ್ರಮಣ ಪುಣ್ಯಸ್ನಾನ, ಅಮಾವಾಸ್ಯೆ, ಶ್ರಾವಣ, ಭಕ್ತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಜಾತ್ರೆ ಸಂದರ್ಭದಲ್ಲಿ ಭಕ್ತರ ಆಗಮನಕ್ಕೆ ಲೆಕ್ಕವೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರ ತುಂಬಾ ಪ್ರಸಿದ್ಧಿಯಾಗಿದೆ. ಉತ್ತರ ಕರ್ನಾಟಕದ ಪ್ರವಾಸಿ ತಾಣವಾಗಿದೆ. ಇದು ಕೇವಲ ಲಿಂಗಾಯತರು ಮತ್ತು ಬಸವಾಭಿಮಾನಿಗಳ ಕ್ಷೇತ್ರವಾಗದೇ ರಾಜ್ಯದ ಎಲ್ಲ ಜನರ ಪ್ರವಾಸಿ ಕೇಂದ್ರವಾಗಿಯೂ ಜನಾಕರ್ಷಣೆಯಾಗಿ ಮಾರ್ಪಡುತ್ತಿದೆ.
ಇದು ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ಎಂಬ ಮೂರು ಪವಿತ್ರ ನದಿಗಳ ತ್ರಿವೇಣಿ ಸಂಗಮ. ಶೈವರು ಮತ್ತು ಲಿಂಗಾಯತರ ಶ್ರದ್ಧಾಕೇಂದ್ರ. ನಮ್ಮ ರಾಜ್ಯ ಕರ್ನಾಟಕ, ಮಹಾರಾಷ್ಟ್ರ, ಚೆನೈ , ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಕೇರಳ ರಾಜ್ಯಗಳು ಸೇರಿದಂತೆ ಅಪಾರ ಲಿಂಗಾಯತ ಭಕ್ತರು ನಿರಂತರ ಬರುತ್ತಲೇ ಇರುವರು. ಜನವರಿಯ ಶರಣ ಮೇಳ ಸಂದರ್ಭದಲ್ಲಿ ನಾಲ್ಕು ದಿನ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ.
ಅದರಂತೆ ಬಾಗಲಕೋಟೆ ಜಿಲ್ಲೆಗೆ ಹೊಂದಿಕೊಂಡ ರಾಯಚೂರು, ಯಾದಗಿರಿ, ವಿಜಯಪುರ, ಬೀದರ್, ಕಲಬುರಗಿ, ಕೊಪ್ಪಳ ಜಿಲ್ಲೆಗಳ ಭಕ್ತರು ಇಲ್ಲಿಗೆ ಬರಲು ಅನಾವಶ್ಯಕ ಸುತ್ತು ಹಾಕಬೇಕಾಗಿದೆ. ಅವರ ಹಣ ಮತ್ತು ಸಮಯ ಸುಮ್ಮನೆ ವ್ಯಯವಾಗುತ್ತದೆ. ಇದಕ್ಕೆ ಸೂಕ್ತ ಪರಿಹಾರ ಕಾಣಲು ಕೃಷ್ಣಾ ನದಿಗೆ ಕಟಗೂರ-ಕುಂಚಗನೂರ ಮತ್ತು ಇಂದವಾರ ಸಮೀಪದ ಬಸವಸಾಗರ ಹಿನ್ನೀರಿಗೆ ಸಮೀಪದ ಹಲಕಾವಟಗಿ ಹತ್ತಿರ ಎರಡೂ ಕಡೆಗಳಲ್ಲಿ ಸೇತುವೆ ನಿರ್ಮಾಣ ಆದರೆ ಈ ಭಾಗದ ಭಕ್ತರಿಗೆ ದೊಡ್ಡ ಅನುಕೂಲ. ಈಗಾಗಲೇ ಅಡಿಹಾಳ ಸಮೀಪ ರೂ.೭೨ ಕೋಟಿ ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಆಗಿ ಸಂಗಮನಾಥ ಒಂದಿಷ್ಟು ಸಮೀಪ ಆಗಿರುವುದು ತೃಪ್ತಿ ತಂದಿದೆ.
ಸುಮಾರು ಐವತ್ತು ವರ್ಷಗಳ ಹಿಂದೆ ಕಟಗೂರ-ಕುಂಚಗನೂರ ಸೇತುವೆ ನಿರ್ಮಿಸುವ ಪ್ರಸ್ತಾಪ ಆಗಿತ್ತು. ಆದರೆ ಅದು ಆಗಿಲ್ಲ. ಈ ಬಗ್ಗೆ ಸದ್ಯದ ಕ್ರಿಯಾಶೀಲ ಸಚಿವ ವಿಜಯಾನಂದ ಕಾಶಪ್ಪನವರ ಅವರು ಮುಂದಾಗಿ ಸೇತುವೆ ನಿರ್ಮಿಸಿ ಭಕ್ತರಿಗೆ ಸಂಗಮನಾಥನನ್ನು ಸಮೀಪ ಮಾಡಬೇಕು. ತಂದೆ ಎಸ್.ಆರ್.ಕಾಶಪ್ಪನಶರ ಅವರ ಸಂಕಲ್ಪ ಈಡೇರಬೇಕು ಎಂದು ಕೂಡಲಸಂಗಮದ ಹಿರಿಯ ಕಾಂಗ್ರೆಸ್ ಮುಖಂಡ ಗಂಗಣ್ಣ ಬಾಗೇವಾಡಿ ಆಗ್ರಹಿಸಿದ್ದಾರೆ. ದಿನದಿಂದ ದಿನಕ್ಕೆ ಇದು ಭಕ್ತರ ಶ್ರದ್ಧಾಕೇಂದ್ರವಾಗಿ ಮತ್ತು ಇಲ್ಲಿ ಪ್ರವಾಸೋದ್ಯಮ ಬೆಳೆಯಲು ನೆರವಾಗುವಂತೆ ಸರ್ಕಾರ ಮತ್ತು ಸಚಿವ ಕಾಶಪ್ಪನವರ ಅವರು ಗಂಭೀರವಾಗಿ ಆಲೋಚಿಸಬೇಕು ಎಂದು ಹುನಗುಂದದ ಹಿರಿಯ ಲೇಖಕ ಜಿ.ಬಿ.ಕಂಬಾಳಿಮಠ ಒತ್ತಾಯಿಸಿದ್ದಾರೆ.
ಮುಖ್ಯವಾಗಿ ಕೂಡಲಸಂಗಮ ಇಂದು ಬರೀ ಧಾರ್ಮಿಕ ಕೇಂದ್ರ ಉಳಿದಿಲ್ಲ. ಇತ್ತೀಚೆಗೆ ಇದು ವಿದ್ಯಾಕೇಂದ್ರವಾಗಿಯೂ ಬೆಳೆಯುತ್ತಿದೆ. ಇಲ್ಲಿಗೆ ರೇಲ್ವೆ ಮಾರ್ಗ ಆಗಬೇಕು. ವಿಮಾನ ನಿಲ್ದಾಣವೂ ಆಗಬೇಕು. ಶಾಲಾ ಕಾಲೇಜು ಕಲಿಯಲು ಸುತ್ತಲಿನ ಗ್ರಾಮಗಳ ಸಾವಿರಾರು ಮಕ್ಕಳು ಇಲ್ಲಿಗೆ ಬರುತ್ತಾರೆ. ಕೂಗಳತೆಯ ಸುತ್ತಲಿನ ಗ್ರಾಮಗಳ ಜನರಿಗೂ ಕೂಡಲಸಂಗಮ ಸಮೀಪ ಆಗಲಿ ಅಷ್ಟೇ.

ವಿಶೇಷ ವರದಿ : ಎಸ್ಕೆ ಕೊನೆಸಾಗರ




















