
ಅದ್ಧೂರಿಯಾಗಿ ನಡೆದ ನೂತನ ಮೂರ್ತಿಗಳ ಭವ್ಯ ಮೆರವಣಿಗೆ
ಮೆರವಣಿಗೆಗೆ ಚಾಲನೆ ನೀಡಿದ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ
ಬಳ್ಳಾರಿ / ಕಂಪ್ಲಿ: ನೂತನ ಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನ ಉದ್ಘಾಟನೆ ಹಾಗೂ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಮಹೋತ್ಸವ ಹಿನ್ನಲೆ ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಕುಂಭ, ಕಳಸ, ಮಕ್ಕಳ ವೇಷಭೂಷ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ನಡುವೆ ನೂತನ ಮೂರ್ತಿಗಳ ಭವ್ಯ ಮೆರವಣಿಗೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
ಪ್ರಾಚೀನ ಕಾಲದಲ್ಲೇ ಸ್ಥಾಪಿತವಾದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತನ್ನದೇ ಆದ ಇತಿಹಾಸ ಇದ್ದು, ಇಂತಹ ಐತಿಹಾಸಿಕ ಗ್ರಾಮದಲ್ಲಿ ನೂತನ ಮೂರ್ತಿಗಳ ಪುರ ಪ್ರವೇಶ ಕಾರ್ಯಕ್ರಮದಲ್ಲಿ ಭಕ್ತರ ಉತ್ಸಾಹ, ಹುಮ್ಮಸ್ಸು ಕಂಡು ಬಂತು.
ಗ್ರಾಮದ ಎದುರು ಬಸವಣ್ಣ ದೇವಸ್ಥಾನದಿಂದ ಪುರ ಪ್ರವೇಶದ ಹಿನ್ನಲೆ ನೂತನ ಶಿವಲಿಂಗ, ಗಣೇಶ, ನಂದಿ, ನಾಗ ಮೂರ್ತಿಗಳ ಭವ್ಯ ಮೆರವಣಿಗೆ ವಿವಿಧ ಕಲಾ ಪ್ರಕಾರಗಳಲ್ಲಿ ಅದ್ಧೂರಿಯಾಗಿ ಜರುಗಿತು.
ಈ ಮೆರವಣಿಗೆಯಲ್ಲಿ ಸುಮಂಗಲಿಯರ ಕುಂಭ, ಕಳಸ, ಮಹಿಳೆಯರ ಕೋಲಾಟ, ಭಜನೆ, ಡೊಳ್ಳು ಕುಣಿತ, ತಾಷಾರಾಂಡೋಲ್, ನಂದಿ ಕೋಲು, ಕಹಳೆ ವಾದನ, ಪಾರ್ವತಿ, ಪರಮೆಶ್ವರ, ಮಹಾನೀಯರ ಛದ್ಮಾವೇಷ, ಹನುಮಾನ್ ಮಾಲಾಧಾರಿಗಳು ಸೇರಿದಂತೆ ವಿವಿಧ ಪ್ರಕಾರಗಳು ಪಾಲ್ಗೊಂಡಿದ್ದವು. ತದ ನಂತರ ದೇವಸ್ಥಾನಕ್ಕೆ ಆಗಮಿಸಿ, ಗೋಮಾತೆ, ವಾಸ್ತು, ವಿನಾಯಕ ಪೂಜೆಯೊಂದಿಗೆ ಶ್ರೀಗಳ ಸಮ್ಮುಖದಲ್ಲಿ ದೇವಸ್ಥಾನ ಪ್ರವೇಶ ಹಾಗೂ ಜಲಾಧಿವಾಸ ಶ್ರದ್ಧಾಭಕ್ತಿಯಿಂದ ಅಚ್ಚುಕಟ್ಟಾಗಿ ಜರುಗಿತು. ಸಂಜೆ ಕ್ಷೀರಾಧಿವಾಸ, ಉತ್ತರ ಪೂಜೆಗಳು ನಡೆದವು.
ಇಲ್ಲಿನ ಎದುರು ಬಸವಣ್ಣ ದೇವಸ್ಥಾನ ಬಳಿಯಲ್ಲಿ ಸ್ಥಳೀಯ ಹಂಪಿ ಸಾವಿರ ದೇವರ ಮಹಾಂತ ಮಠದ ಪರಮಪೂಜ್ಯ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ಇವರ ದಿವ್ಯ ಸಾನಿಧ್ಯದಲ್ಲಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದ ನಂತರ ಮಾತನಾಡಿ, ಗ್ರಾಮದಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ನೆಲೆಸಿದ ದಿನದಿಂದಲೂ ಪವಾಡ ಪುರುಷನಾಗಿ, ದಿನನಿತ್ಯ ಆರಾಧಿಸುವ ಭಕ್ತರ ಬೇಡಿಕೆಗಳಿಗೆ ಇಷ್ಟಾರ್ಥ ಪ್ರಾಪ್ತಿ ನೀಡುತ್ತಿದ್ದಾರೆ. ಇಲ್ಲಿನ ದೇವರ ಶಕ್ತಿ ಬಹಳ ದೊಡ್ಡದಿದೆ. ಐತಿಹಾಸಿಕ ಹಿನ್ನಲೆ ಅರಿತುಕೊಂಡಾಗ ಮಾತ್ರ ಮನುಷ್ಯನಲ್ಲಿ ಆಧ್ಯಾತ್ಮಕ ಚಿಂತನೆಗಳು ಮೂಡಲು ಸಾಧ್ಯ. ಗ್ರಾಮದಲ್ಲಿರುವ ಎಲ್ಲಾ ಸಮಾಜದವ ಭಕ್ತಿ ದೊಡ್ಡದಿದೆ. ಇಂದು ಈ ಮಟ್ಟದಲ್ಲಿ ನೂತನ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ದೇವಸ್ಥಾನ ಸ್ಥಾಪನೆಗೆ ಸಹಕಾರವಿದೆ. ಲೋಕಕಲ್ಯಾಣಕ್ಕಾಗಿ ದೇವರ ಆರಾಧನೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಅಗತ್ಯವಾಗಿವೆ. ಇಲ್ಲಿನ ಸದ್ಭಕ್ತರ ಸೇವೆಗೆ ಆ ದೇವರು ಸಕಾಲದಲ್ಲಿ ಮಳೆ, ಬೆಳೆ, ಸಮೃದ್ಧಿಯನ್ನು ದಯಪಾಲಿಸಲಿ ಎಂದರು. ಇಲ್ಲಿನ ದೇವಸ್ಥಾನದ ಗರ್ಭಗುಡಿಯ ಎದುರಿಗೆ ವಾಗಿ ಧ್ವಜಸ್ತಂಭ ಪ್ರತಿಷ್ಠಾಪಿಸಲಾಯಿತು. ಇಲ್ಲಿನ ಮೆರವಣಿಗೆಯಲ್ಲಿ ಹಾಲಿ ಶಾಸಕ ಜೆ.ಎನ್.ಗಣೇಶ್, ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಪಾಲ್ಗೊಂಡು, ದೇವರ ಕೃಪೆಗೆ ಪಾತ್ರರಾದರು. ಭವ್ಯ ಮೆರವಣಿಗೆಯ ಸಂಭ್ರಮದ ಸಂದರ್ಭದಲ್ಲಿ ಪಟಾಕಿಗಳ ಭರ್ಜರಿ ಸ್ದದು ಜೋರಾಗಿ ಮೊಳಗಿತು. ನಂತರ ಅನ್ನ ಸಂತರ್ಪಣೆ ಜರುಗಿತು.
ಈ ಸಂದರ್ಭದಲ್ಲಿ ಮಾಜಿ ತಾ. ಪಂ ಸದಸ್ಯ ಬಿ. ಸದಾಶಿವಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸದಸ್ಯ ಬಿ. ಮಹೇಶಗೌಡ, ವೀರಶೈವ ಸಮಾಜದ ಅಧ್ಯಕ್ಷ ಹಂಪಿ ಜಡಿಮೂರ್ತಿ, ಕವಿತಾಳ ಪ್ರವೀಣ್, ಎಸ್. ಶರಣ ಬಸವನಗೌಡ, ಮುಖಂಡರಾದ ವಕೀಲ ಕರಿಬಸಪ್ಪ, ವೇಣು ಗೋಪಾಲಾಚಾರ್ಯ, ಬೇರ್ಗಿ ಭೀಮನಗೌಡ, ಜಗದೀಶ, ವೈ. ರಾಘವೇಂದ್ರ ರೆಡ್ಡಿ, ಮೀನಕರೆ ಶೇಖಣ್ಣ, ಕೆ.ಶೇಖರರೆಡ್ಡಿ, ಜಿ.ಎಂ. ಶರಣಯ್ಯ, ಜನಪ್ರತಿನಿಧಿಗಳು, ಮುಖಂಡರು, ಸ್ಥಳೀಯ ಸೇರಿದಂತೆ ಸುತ್ತಲಿನ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















