
ವರದಿ : ಜಿಲಾನಸಾಬ್ ಬಡಿಗೇರ್
ಮುಖ್ಯಾಂಶಗಳು : ಪಾದಯಾತ್ರೆಯಲ್ಲಿ ಭ್ರಷ್ಟ ಕಾಂಗ್ರೆಸ್ ವೈಫಲ್ಯ ವಿರುದ್ಧ ವಿಜಯಾಸ್ತ್ರ ಬೀರಿದರು. ಕಾಂಗ್ರೆಸ್ ಮೇಲೆ ಹರಿಹಾಯ್ದ ಬಿಜೆಪಿಗರು
ಬಳ್ಳಾರಿ ಚಲೋ ಪಾದಯಾತ್ರೆ
ಕಂಪ್ಲಿ-ಕೋಟೆಯಲ್ಲಿ ನದಿಗೆ ಬಾಗಿನ ಅರ್ಪಣೆ
ಮೆರವಣಿಗೆಗೆ ಕಲಾ ತಂಡಗಳ ಮೆರಗು
ಹರಿದು ಬಂದ ಜನ ಸಾಗರ
ಎಲ್ಲೆಂದರಲ್ಲಿ ರಾರಾಜಿಸಿದ ಬಿಜೆಪಿ ಧ್ವಜ
ಕ್ರೇನ್ ಮೂಲಕ ಪುಷ್ಪವೃಷ್ಠಿ ಸುರಿಸಿ ಸ್ವಾಗತಿಸಲಾಯಿತು.
ಬಳ್ಳಾರಿ / ಕಂಪ್ಲಿ: ಗ್ಯಾರಂಟಿ ಪ್ರಚಾರದಲ್ಲೇ ರಾಜ್ಯದ ಕಾಂಗ್ರೆಸ್ ಸರ್ಕಾರ ಕಾಲಹರಣ ಮಾಡುತ್ತಿದ್ದು, ಇದರಿಂದ ರೈತ ಮತ್ತು ಜನ ಸಾಮಾನ್ಯರ ಬದುಕಿಗೆ ಕಂಟಕವಾಗಿದ್ದು, ಬರುವ ದಿನಗಳಲ್ಲಿ ಜನರೇ ಕಾಂಗ್ರೆಸ್ ನಿರ್ಮೂಲನೆ ಮಾಡಲು ಪಣ ತೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಡುಗಿದರು.
ಪಟ್ಟಣದಲ್ಲಿ ಕಾಂಗ್ರೆಸ್ ದುರಾಡಳಿತದ ವಿರುದ್ಧ ಭಾನುವಾರಂದು 6ನೇ ದಿನದ ಬಳ್ಳಾರಿ ಚಲೋ ಬೃಹತ್ ಪಾದಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡಿ, ರೈತರ ಜೀವನಾಡಿ ತುಂಗಭದ್ರ ಜಲಾಶಯ ಭರ್ತಿಯಾದರೂ ಈ ಭಾಗದ ರೈತರಿಗೆ ಸಮಪರ್ಕವಾಗಿ ನೀರು ಕೊಡುವಲ್ಲಿ ಸ್ಥಳೀಯ ಶಾಸಕ ಸೇರಿದಂತೆ ರಾಜ್ಯ ಸರ್ಕಾರ ವಿಫಲವಾಗಿದೆ. ರೈತರು ಮತ್ತು ಜನರು ಸಂಕಷ್ಟದಲ್ಲಿದ್ದರೂ ಸಿಎಂ ಡಿ.ಕೆ.ಶಿವಕುಮಾರ ಅವರು ಬೆಂಗಳೂರು ಅಪ್ಪಿಕೊಂಡು ಕೂತಿದ್ದಾರೆ. ಮತ್ತು ರಿಯಲ್ ಎಷ್ಟೇಟ್‌ನಲ್ಲಿದ್ದಾರೆ. ಬಡವರ ಬಿಪಿಎಲ್ ಕಾರ್ಡ್ ಕಿತ್ತಿಕೊಂಡಿದ್ದಾರೆ. ಗ್ಯಾರಂಟಿಗೆ ಹಣ ಕ್ರೂಢೀಕರಣಕ್ಕಾಗಿ ಮದ್ಯದ ದರ ಹೆಚ್ಚಿಸಿ ಕುಡುಕರ ಸಾಮ್ರಾಜ್ಯವನ್ನಾಗಿ ಮಾಡಿದ್ದಾರೆ. ಗ್ಯಾರಂಟಿಗಳೊಂದಿಗೆ ಸಾಕಷ್ಟು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಸರ್ಕಾರ ಭಷ್ಟಾಚಾರದ ಮೂಲಕ ರೈತ, ಜನ ವಿರೋಧಿ ದುರಾಡಳಿತ ನಡೆಸುತ್ತಿರುವ ಡಿ.ಕೆ.ಶಿವುಕುಮಾರ ಸರ್ಕಾರವನ್ನು ಮುಂದಿನ ದಿನದಲ್ಲಿ ಮತ ಬಾಂಧವರೇ ಬುಡ ಸಮೇತವಾಗಿ ಕಿತ್ತಿ ಹಾಕಲು ಸಜ್ಜಾಗಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಗಂಗಾವತಿ ಹಾಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಮಾತನಾಡುವಾಗ ಕಂಪ್ಲಿ ಜನರ ಪ್ರೀತಿ, ವಿಶ್ವಾಸಕ್ಕೆ ಬಾವುಕರಾಗಿ ನಿಮ್ಮ ಋಣ ತೀರಿಸುತ್ತೇನೆ. ವಾಲ್ಮೀಕಿ ಹಣ ಲೂಟಿ ಮಾಡಿ, ಸಂಸದರ ಚುನಾವಣೆಗೆ ಬಳಿಸಿದ್ದೀರಿ. ಇದರ ಪಾಪ, ಕೆಟ್ಟ ಕರ್ಮ ನಿಮಗೆ ಸುತ್ತಿಕೊಂಡಿದೆ. ಕಂಪ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿವೆ. 14 ವರ್ಷದ ಬಳ್ಳಾರಿ ಜನರಿಂದ ದೂರ ಮಾಡಿ, ನಮ್ಮಲ್ಲಿರುವ ಕೆಲವು ಸಣ್ಣಪುಟ್ಟ ವ್ಯತ್ಯಸಗಳಿಂದ ಅಧಿಕಾರಕ್ಕೆ ಬಂದಿದ್ದೀರಿ. ಶಾಸಕ ಗಣೇಶ, ನಾಚಿಗೆ ಇಲ್ಲದ ಗಣೇಶ. ರಿಯಾಲ್ ಎಷ್ಟೇಟ್ ದಂಧೆ ಮಾಡಿಯಲ್ಲ. ನಮ್ಮ ಅನುಪಸ್ಥಿತಿಯಲ್ಲಿ ಗೆದ್ದು, ನನ್ನ ಬೆಂಬಲವಿದೆ ಎಂದೇಳಿ ಗೆಲ್ಲಿದ್ಧೀಯಾ ನೀನು. ಇನ್ಮೇಲೆ ನೋಡಿ ಮುಂದಿನ ಚುನಾವಣೆಯಲ್ಲಿ ಸೋಲಿಸಿಯೇ ತೀರುತ್ತೇನೆ. ಬರುವ ದಿನಗಳಲ್ಲಿ 10 ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಕಂಪ್ಲಿ ಕ್ಷೇತ್ರದಲ್ಲಿ ಸುರೇಶ್ ಬಾಬು ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಗುಡುಗಿದರು.
ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ದಲಿತ ಮತ್ತು ಹಿಂದುಳಿದ ಸಮುದಾಯವನ್ನು ಕಾಂಗ್ರೆಸ್ ಸಂಪೂರ್ಣವಾಗಿ ಕಡೆಗಣಿಸಿದೆ. ದುರಂಕಾರದ ಸಿಎಂ ಆಗಿದ್ದಾರೆ. ಸದನ ವ್ಯರ್ಥ ಮಾಡಿದ್ದಾರೆ. ಹಿಂದುಳಿದ ನಾಯಕ ಸಿದ್ದರಾಮಯ್ಯನವರನ್ನು ಮೂಲೆಗುಂಪು ಮಾಡಿದ್ದಾರೆ. ಸಿದ್ದರಾಮಯ್ಯನವ ಬೆನ್ನಿಗೆ ಚೂರಿ ಹಾಕಿದ್ದಾರೆ. ಎರಡು ಬೆಳೆ ನಷ್ಟವಾಗಿದೆ. ರೈತರು ನೀರಿಗಾಗಿ ಕಣ್ಸೀರು ಹಾಕುತ್ತಿದ್ಸಾರೆ. ಡಿ.ಕೆ.ಶಿವುಕುಮಾರ ಹೆಜ್ಜೆ ಗುರುತೇನಪ್ಪಾ. ಸಮಾನಾಂತರ ಜಲಾಶಯದೊಂದಿಗೆ ಈ ಭಾಗದ ರೈತರಿಗೆ ಎರಡು ಬೆಳೆಗೆ ನೀರು ಕೊಡಬೇಕೆಂಬ ಸಂಕಲ್ಪವಾಗಿದೆ ಎಂದರು.
ಮಾಜಿ ಶಾಸಕ ಟಿ.ಎಚ್.ಸುರೇಶ ಬಾಬು ಮಾತನಾಡಿ, ಪಾದಯಾತ್ರೆಯಿಂದ ಕಾಂಗ್ರೆಸ್‌ಗೆ ನಡುಕ ಹುಟ್ಟಿದೆ. ಕರೇಂಟ್ ತಗೆದು ರಾಜಕಾರಣ ಮಾಡುತ್ತಿದ್ದಾರೆ. ಎಸ್ಸಿ, ಎಸ್ಟಿ ಹಣ ನುಂಗಿದ್ದಾರೆ. ಹಗರಣದಲ್ಲಿ ಶಾಸಕರು ಭಾಗಿಯಾಗಿದ್ದಾರೆ. ನಿಷ್ಟವಂತ ಕಾರ್ಯಕರ್ತರ ಮೇಲೆ ಜಾತಿ ನಿಂದನೆ ಕೇಸು ಹಾಕಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಬಾಗಿನ ಅರ್ಪಣೆ :
ಕಂಪ್ಲಿಗೆ ಆಗಮಿಸುತ್ತಿದ್ದಂತೆ ಜನಪ್ರಿಯ ನಾಯಕ ಟಿ.ಎಚ್.ಸುರೇಶ ಬಾಬು ನೇತೃತ್ವದಲ್ಲಿ ಬಿಜೆಪಿ ನಾಯಕರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ನಂತರ ಇಲ್ಲಿನ ತುಂಗಭದ್ರಾ ನದಿಯಲ್ಲಿ ಮೊದಲಿಗೆ ಹರಿಯುವ ನೀರಿಗೆ ಬಾಗಿಲ ಅರ್ಪಿಸಿ, ಪಾದಯಾತ್ರೆ ಆರಂಭಿಸಿದರು.
ಭವ್ಯ ಸ್ವಾಗತ :
ಕಾಂಗ್ರೆಸ್ ವಿರುದ್ಧ ತೊಡೆಗಟ್ಟಿರುವ ಬಿಜೆಪಿ ಲಿಂಗಸೂಗೂರಿನಿಂದ ಆರಂಭಗೊಂಡ ಬಳ್ಳಾರಿ ಚಲೋ ಬೃಹತ್ ಪಾದಯಾತ್ರೆ ಗಂಗಾವತಿಯ ಕನಕಗಿರಿ ಕ್ಷೇತ್ರ ವ್ಯಾಪ್ತಿಯ ಚಿಕ್ಕಜಂತಕಲ್ ಗ್ರಾಮದ ಮೂಲಕ ತುಂಗಭದ್ರಾ ನದಿ ಸೇತುವೆಯಲ್ಲಿ ಹೆಜ್ಜೆ ಹಾಕುತ್ತಾ, ಭಾನುವಾರ ಸಂಜೆ ಗಣಿ ಜಿಲ್ಲೆಯ ಹೆಬ್ಬಾಗಿಲು ಕಂಪ್ಲಿಗೆ ಪ್ರವೇಸಿಸಿತು. ಇಲ್ಲಿನ ಕಂಪ್ಲಿ-ಕೋಟೆಯಲ್ಲಿ ವಿವಿಧ ಕಲಾ ತಂಡಗಳ ಮುಖೇನ ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ನೇತೃತ್ವದಲ್ಲಿ ಕಾರ್ಯಕರ್ತರು ಬಿಜೆಪಿ ನಾಯಕರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ನಂತರ ತೆರೆದ ವಾಹನದಲ್ಲಿ ಗಂಡುಗಲಿ ಕುಮಾರ ರಾಮನ ಕೋಟೆ ಮೂಲಕ ಜೋಗಿ ಕಾಲುವೆ, ಹಳೇ ಪೊಲೀಸ್ ಠಾಣೆ, ನಡುವಲ ಮಸೀದಿ, ಡಾ.ರಾಜಕುಮಾರ ರಸ್ತೆ, ಮಾರೆಮ್ಮ ಗುಡಿ, ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡು, ನಂತರ ಬೃಹತ್ ಬಹಿರಂಗ ಸಭೆ ನಡೆಸಿದರು. ಪಾದಯಾತ್ರೆಯುದ್ದಕ್ಕೂ ಕಾಂಗ್ರೆಸ್ ವಿರುದ್ಧದ ಘೋಷಣೆಗಳೊಂದಿಗೆ ಹೆಜ್ಜೆ ಹಾಕಿದರು.
ರಾರಾಜಿಸಿದ ಬ್ಯಾನರ್, ಧ್ವಜಗಳು :
ರಾಜ್ಯ ಕಾಂಗ್ರೆಸ್ ವಿರುದ್ಧದ ಬೃಹತ್ ಪಾದಯಾತ್ರೆ ಹಿನ್ನಲೆ ಪಟ್ಟಣದ ಪ್ರವೇಶ ದ್ವಾರದಿಂದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್, ಧ್ವಜಗಳು ಬಿಜೆಪಿ ನಾಯಕರನ್ನು ಭವ್ಯವಾಗಿ ಸ್ವಾಗತಿಸುವ ಜೊತೆಗೆ ಎಲ್ಲೆಂದರಲ್ಲಿ ರಾರಾಜಿಸಿ, ಇದು ವಿಜಯಯಾತ್ರೆಯೋ ಎಂಬಂತೆ ಕಂಡು ಬಂತು. ಗಂಗಾವತಿಯ ಚಿಕ್ಕಜಂತಕಲ್ ಮೂಲಕ ಬರುವ ತುಂಗಭದ್ರಾ ನದಿಯ ಎರಡು ಬದಿಯ ರಕ್ಷಣಾ ಕಂಬಿಗಳಲ್ಲಿ ಧ್ವಜಗಳು ಅಲಂಕೃತವಾಗಿದ್ದವು. ಬರುವ ಜನರ, ವಾಹನ ಸವಾರರ ಗಮನ ಸೆಳೆಯುತಿದ್ದವು. ಕಂಪ್ಲಿಯಲ್ಲಿ ಬಳ್ಳಾರಿ ಚಲೋ ಹಿನ್ನಲೆ ಅಂಬೇಡ್ಕರ್ ವೃತ್ತದಲ್ಲಿ ಸ್ವಾಗತದ ಬ್ಯಾನರಗಳ ಸದ್ದು ಕಂಡು ಬಂತು.
ಹರಿದು ಬಂದ ಜನಸಾಗರ :
ಪಾದಯಾತ್ರೆ ಹಿನ್ನಲೆ ಕಂಪ್ಲಿಗೆ ಕ್ಷೇತ್ರ ಸೇರಿದಂತೆ ನಾನಾ ಕಡೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನಸಾಗರವೇ ಹರಿದು ಬಂದಿತು. ಮುಖಂಡರು, ಕಾರ್ಯಕರ್ತರು, ಜನರು ಪಾಲ್ಗೊಂಡು ಪಾದಯಾತ್ರೆಗೆ ಉತ್ಸಾಹ ನೀಡಿದರು.
ಟ್ರಾಫಿಕ್ ಜಾಮ್ ಜನ ಹೈರಾಣ : 6ನೇ ದಿನವಾದ ಭಾನುವಾರದಂದು ಸಂಜೆ ಹೊತ್ತಿಗೆ ಪಾದಯಾತ್ರೆ ಕಂಪ್ಲಿಗೆ ಆಗಮಿಸಿತು. ಬೃಹತ್ ಪಾದಯಾತ್ರೆ ಹಿನ್ನಲೆ ಸಾಕಷ್ಟು ವಾಹನಗಳು, ಜನರು ಕಿಕ್ಕಿರಿದು ಒಂದೆಡೆ ಸೇರಿದ ಪರಿಣಾಮ ಸುಮಾರು ಒಂದೆರಡು ಕಿ.ಮೀ.ವರೆಗೂ ಟ್ರಾಫಿಕ್ ಜಾಮ್ ಕಂಡು ಬಂತು. ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆಯು ಸಂಚಾರ ಬದಲಿಸಿದ ಹಿನ್ನಲೆ ಬಸ್ಸು, ಲಾರಿ ಸೇರಿದಂತೆ ಇನ್ನಿತರ ವಾಹನಗಳು ಬುಕ್ಕಸಾಗರ ಮಾರ್ಗದ ಸೇತುವೆ ಮೂಲಕ ಸಂಚಾರಕ್ಕೆ ಅನುವು ಮಾಡಿಟ್ಟಿದೆ. ಆದರೂ ಸಹ ಇಲ್ಲಿನ ವಾಹನ ದಟ್ಟಣೆ ಮಾತ್ರ ಹೆಚ್ಚಾಗಿ, ಕೆಲವೊತ್ತು ಸುಗಮ ಸಂಚಾರಕ್ಕೆ ಕಷ್ಟಕರವಾಗಿತ್ತು.
ಕಲಾ ತಂಡಗಳು ಮೆರಗು : ಹಗಲು ವೇಷ, ಕಹಳೆ ವಾದ್ಯ, ತಾಷಾರಾಂಡೋಲ್ ಸೇರಿದಂತೆ ವಿವಿಧ ಕಲಾ ಪ್ರಕಾರಗಳೊಂದಿಗೆ ಭವ್ಯ ಸ್ವಾಗತದ ಜೊತೆಗೆ ರಸ್ತೆಯುದ್ದಕ್ಕೂ ಪಾದಯಾತ್ರೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಗಾಲಿ ಜನಾರ್ದನರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ, ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ, ಮುಖಂಡರಾದ ರಾಮಲಿಂಗಾರೆಡ್ಡಿ, ಆನೆಕಲ್ ನಾರಾಯಣಸ್ವಾಮಿ, ಮುರಾರಿಗೌಡ, ಗುತ್ತಿಗೆನೂರು ವಿರುಪಾಕ್ಷಿಗೌಡ, ಪಕ್ಕೀರಪ್ಪ, ಅಳ್ಳಳ್ಳಿ ವಿರೇಶ, ಡಾ.ವಿ.ಎಲ್.ಬಾಬು, ರಾಮಾಂಜಿನೇಯಲು, ಕಡೆಮನೆ ಪಂಪಾಪತಿ, ಸುದರ್ಶನರೆಡ್ಡಿ, ಮನೋಜಗೌಡ, ಬಂಡಿ ಜಡಪ್ಪ, ಬಿ. ರಮೇಶ್, ಪಾಲಾಕ್ಷ, ಗೋರ್ತಿ ಶ್ರೀನಿವಾಸ್, ಡಾಕ್ಟರ್ ವೆಂಕಟೇಶ್ ಭರಮಕ್ಕನವರ್, ಕಟ್ಟೆ ವಿಶ್ವನಾಥ್ ಬುಜ್ಜಿ ಕುಮಾರ್, ರಾಮಾಂಜನೇಯಲು ಎಸ್. ಎಂ. ನಾಗರಾಜ, ಹೊನ್ನೂರ್ ಸಾಬ್, ಬಡಿಗೇರ್ ವಿರೇಶ ಸೇರಿದಂತೆ ವಿವಿಧ ವಿಭಾಗದ ಅಧ್ಯಕ್ಷರು ಪದಾಧಿಕಾರಿಗಳು ಮುಖಂಡರು, ಕಾರ್ಯಕರ್ತರು ಇದ್ದರು.
ಪೊಲೀಸ್ ಸರ್ಪಗಾವಲು :
ಬಳ್ಳಾರಿ ಚಲೋ ಪಾದಯಾತ್ರೆ ಹಿನ್ನಲೆ ಜಿಲ್ಲಾ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸುವ ಜೊತೆಗೆ ಪ್ರತಿ ಹಂತದಲ್ಲಿ ಪೋಲಿಸ್ ಸರ್ಪಗಾವಲು ಕಂಡು ಬಂತು.




















