ಬಳ್ಳಾರಿ / ಕಂಪ್ಲಿ : ಪಟ್ಟಣದ ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ ಸೋಮವಾರ ಸಂಜೆ ವಚನ ದಾಸೋಹಿ ನಿವೃತ್ತ ಶಿಕ್ಷಕ ಬಿ.ವೀರಣ್ಣ, ಬಿ. ಸುನಿಲ್ ರವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ವಚನ ಶ್ರಾವಣ ಕಾರ್ಯಕ್ರಮ ಸಡಗರ ಸಂಭ್ರಮಗಳಿಂದ ನಡೆಯಿತು.
ವಿಜಯನಗರ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಕೆ ರವೀಂದ್ರನಾಥ ಮಾತನಾಡಿ, ಲಿಂಗಾಯತ ಧರ್ಮಗ್ರಂಥವೆನಿಸಿದ ವಚನ ಸಾಹಿತ್ಯದ ಸಂಗ್ರಹ-ಸಂಕಲನ ಮತ್ತು ಸಂಪಾದನಾ ಪರಂಪರೆಗೆ ವಿಜಯನಗರದ ಪ್ರೌಢದೇವರಾಯ ಮತ್ತು ತೋಂಟದ ಸಿದ್ಧಲಿಂಗ ಯತಿಗಳ ಕಾಲದ ಸುದೀರ್ಘ ಇತಿಹಾಸವಿದೆ ಎಂದು ಹೇಳಿದರು.
ಸಿಂಧನೂರಿನ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಪಿ.ರುದ್ರಪ್ಪ ಮಾತನಾಡಿ, ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಸಿರಿವಂತವಾಯಿತು. ಬದುಕನ್ನು ಪರಿವರ್ತಿಸಿಕೊಳ್ಳಲು ಬಸವ ತತ್ವ ಬಳಕೆಗೊಳ್ಳಬೇಕು. ಬಸವ ಸಾಹಿತ್ಯ ಪ್ರಸ್ತುತ ಜಗತ್ತಿಗೆ ಅನಿವಾರ್ಯತೆಯಿದೆ. ಲಿಂಗಾಯತರು ವಿಶಾಲ ಹೃದಯಿಗಳಾಗಬೇಕು. ಶರಣರು ಮನುಕುಲದ ವಿಸ್ತಾರ ತಿಳಿಸಿಕೊಟ್ಟರು ಎಂದರು.
ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಡಾ.ಶಾರದಾ ಜಗನ್ನಾಥ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಕ್ಕನ ಬಳಗದ ಜಂಟಿ ಕಾರ್ಯದರ್ಶಿ ಬಿ.ಎಂ.ಪುಷ್ಪಾ ‘ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು’, ಅಕ್ಕನ ಬಳಗದ ನಿರ್ದೇಶಕಿ ರಶ್ಮಿ ಕಲ್ಗುಡಿ ‘ಕಾಯಕ ನಿಂದಿತ್ತು ಹೋಗಯ್ಯ’ ಕುರಿತು
ಮಾತನಾಡಿದರು. ಕೆ.ಎಂ.ರಕ್ಷಾ, ಮರಿಶೆಟ್ರು ಶಾಂತಾ, ಪಾಮಯ್ಯ ಶರಣರು ವಚನ ಗಾಯನ ಮಾಡಿದರು. ಜಾಗತಿಕ ಲಿಂಗಾಯತ ಮಹಾಸಭಾದ ವಿಜಯನಗರ ಜಿಲ್ಲೆ ಅಧ್ಯಕ್ಷ ಮಾವಿನಹಳ್ಳಿ ಬಸವರಾಜ, ಮಲಪನಗುಡಿಯ ಬಸವಾಶ್ರಮದ ಪೀಠಾಧ್ಯಕ್ಷ ಬಸವ ಕೃಪಾನಿಧಿ, ಶರಣ ಸಾಹಿತ್ಯ ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಬಿ.ವೀರಣ್ಣ, ಡಾ.ಬಿ.ಸುನಿಲ್, ಮುದಕಪ್ಪ ನೆಲಜೇರಿ, ಬಿ.ಎಂ.ರುದ್ರಯ್ಯ, ಅಶೋಕ ಕುಕನೂರು, ಮರಿಶೆಟ್ರು ಸುರೇಶ್, ಚಂದ್ರಯ್ಯ ಸೊಪ್ಪಿಮಠ ಸೇರಿ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















