
ಹುನಗುಂದ: ಕನ್ನಡ ವೃತ್ತಿ ರಂಗಭೂಮಿ ನಾಟಕಕಾರ ಪಿ.ಬಿ.ಧುತ್ತರಗಿ ಅವರ ನಾಟಕಗಳು ಮಾದರಿ. ಅವರು ತಮ್ಮ ನಾಟಕಗಳ ಮೂಲಕ ಸಮಾಜ ಸ್ವಾಸ್ಥ್ಯ ಬಯಸಿದವರು. ಅವರ ರಂಗ ವ್ಯಕ್ತಿತ್ವ ಬಹು ಎತ್ತರದ್ದು ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.
ಅವರು ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಪಿ.ಬಿ.ಧುತ್ತರಗಿ ಟ್ರಸ್ಟ್ ಬುಧವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಟ್ರಸ್ಟ್ ಅಧ್ಯಕ್ಷ ಎಸ್ಕೆ ಕೊನೆಸಾಗರ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮುತ್ತಣ್ಣ ಕಲಗೋಡಿ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ಧುತ್ತರಗಿ ಪರಿಚಯ ಪುಸ್ತಕ ಮತ್ತು ಟ್ರಸ್ಟ್ ಕಾರ್ಯ ಚಟುವಟಿಕೆಗಳ ಪ್ರತಿಬಿಂಬ ಸಂಚಿಕೆ ಬಿಡುಗಡೆ ಮಾಡಿದರು.
ಟ್ರಸ್ಟ್ ಸದಸ್ಯರು ಹಾಜರಿದ್ದರು. ರಾಜ್ಯದ ೯ ಜನ ರಂಗ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಗದಗ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘ ಇವರಿಂದ ಧುತ್ತರಗಿ ರಚಿತ ಮಲಮಗಳು ನಾಟಕ ಪ್ರದರ್ಶನ ವಾಯಿತು.
ಸಿದ್ದಲಿಂಗಪ್ಪ ಬೀಳಗಿ ಸ್ವಾಗತಿಸಿದರು. ಗುರುಪಾದ ಡೂಗನವರ ವಂದಿಸಿದರು.




















