
ಮೆಟ್ರಿ ಕ್ಲಸ್ಟರ್ ಮಟ್ಟದ ‘ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ’ ಕಾರ್ಯಕ್ರಮ.
ಕಂಪ್ಲಿ: ‘ಪಾಲಕರು ಮತ್ತು ಶಿಕ್ಷಕರು ಮಕ್ಕಳ ಸಾಮರ್ಥ್ಯಕ್ಕೆ ಪೂರಕವಾದ ವಾತಾವರಣ ನಿರ್ಮಿಸಿದರೆ, ಅವರು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ’ ಎಂದು ಉಪ ಪ್ರಾಚಾರ್ಯೆ ಸುಜಾತರವರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮೆಟ್ರಿ ಗ್ರಾಮದ ಪಿಎಂಶ್ರೀ ಹೊನ್ನಳ್ಳಿ ಸಿದ್ದಪ್ಪನವರ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮೆಟ್ರಿ ಕ್ಲಸ್ಟರ್ ಮಟ್ಟದ ‘ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅತ್ಯಂತ ಕ್ರಿಯಾತ್ಮಕ ಹಾಗೂ ಚುರುಕಾಗಿರುತ್ತಾರೆ. ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆಯಿಲ್ಲದೆ ಸ್ಪರ್ಧೆಗಳಲ್ಲಿ ಮುಕ್ತವಾಗಿ ಪಾಲ್ಗೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಆರ್‌ಪಿ ಪ್ರಭಾಕರ, ‘ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸುವ ನಿಟ್ಟಿನಲ್ಲಿ ಪಾಲಕರು ಸಾಂಪ್ರದಾಯಿಕ ಮೌಲ್ಯಗಳ ಜೊತೆಗೆ ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗಬೇಕು. ಮಕ್ಕಳನ್ನು ಕೇವಲ ಮೊಬೈಲ್, ಇಂಟರ್‌ನೆಟ್ ಜ್ಞಾನಕ್ಕೆ ಸೀಮಿತಗೊಳಿಸದೆ, ಅವರಿಗೆ ಮುಕ್ತ ಸಮಾಜದ ವಾಸ್ತವಿಕ ಅನುಭವವನ್ನೂ ನೀಡಬೇಕು’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಹೆಚ್. ನಾಗರಾಜ ಮಾತನಾಡಿ, ‘ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣದ ಮಹತ್ವ ಮತ್ತು ಮೌಲ್ಯಗಳ ಅರಿವು ಮೂಡಿಸಬೇಕು. ಶಿಕ್ಷಕರು ಗುಣಮಟ್ಟದ ಬೋಧನೆಯ ಜೊತೆಗೆ ಮಕ್ಕಳ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು’ ಎಂದು ತಿಳಿಸಿದರು.
ಸಮಾರಂಭದಲ್ಲಿ ನಡೆದ ಛದ್ಮವೇಷ, ನಾಟಕ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನೆರೆದಿದ್ದವರ ಗಮನ ಸೆಳೆದವು.
ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರಚಾರ ಸಮಿತಿ ಸದಸ್ಯ ಎಚ್.ಪಿ. ಸೋಮಶೇಖರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ, ಜಿಪಿಟಿ ಅಧ್ಯಕ್ಷ ಮಂಜುನಾಥ, ಉಪ ಪ್ರಾಚಾರ್ಯೆ ಸುಜಾತ, ಇಸಿಒ ಎಂ. ರೇವಣ್ಣ, ಸಿಆರ್‌ಪಿಗಳಾದ ಎ. ಗಂಗಾಧರ, ಎ.ಎಸ್. ಭೂಮೇಶ್ವರ, ಕರುಣಾಕರ, ರೇಣುಕಾರಾಧ್ಯ, ಪ್ರಭಾರಿ ಮುಖ್ಯಶಿಕ್ಷಕಿ ರೇಖಾ, ಸಹ ಶಿಕ್ಷಕರಾದ ಮಡಿವಾಳಪ್ಪ, ಅನುಸೂಯ, ಕಾವ್ಯ, ಶಿಲ್ಪ, ರಾಜೇಶ್ವರಿ, ಅತಿಥಿ ಶಿಕ್ಷಕರಾದ ಡಿ. ಬಸವರಾಜ, ಕವಿತಾ, ಶಂಕ್ರಮ್ಮ, ಎಂ. ಕವಿತಾ, ಸಂಗೀತಾ, ಸಿದ್ದೇಶ್ವರಿ, ನಶ್ರೀನ್, ಗ್ರಾಮದ ಮುಖಂಡರಾದ ಹೆಚ್. ಕುಮಾರಸ್ವಾಮಿ, ಶಂಕರ್, ಹರಿಜನ ಜಗದೀಶ, ಮಲ್ಲಯ್ಯ ಸೇರಿದಂತೆ ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















