ಇಡೀ ರಾಜ್ಯದ ಪ್ರತಿಯೊಂದು ಕ್ಷೇತ್ರದಲ್ಲಿ ಚುನಾವಣಾ ಅಬ್ಬರ ಜೋರಾಗಿ ನಡೆಯುತ್ತಿದ್ದು ದಿನದಿಂದ ದಿನಕ್ಕೆ ಒಂದೊಂದು ಪಕ್ಷದ ಅಭ್ಯರ್ಥಿಗಳು ಸತತವಾಗಿ ಜನರ ಮನವೊಲಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಪ್ರತಿಯೊಂದು ಗ್ರಾಮದ ನಾಗರಿಕರ ಮನೆ ಮನೆಗೆ ತೆರಳಿ ಪಕ್ಷದ ಪ್ರಚಾರದ ಮೂಲಕ ಪ್ರಜೆಗಳಿಗೆ ವಿವಿಧ ಆಮಿಷಗಳನ್ನು ಒಡ್ಡಿ ತಮ್ಮತ್ತ ಗಮನಸೆಳೆಯುವಂತೆ ಹರಸಾಹಸ ಪಡುತ್ತಿದ್ದಾರೆ ಹಾಗೆಯೇ ದಿನೇ ದಿನೇ ಹಲವಾರು ಸೆಲೆಬ್ರಿಟಿ ಹಾಗೂ ಹಿರಿಯ ರಾಜಕೀಯ ನಾಯಕರುಗಳಿಂದ ಪ್ರಚಾರ ಮಾಡಿಸಿ ಜನರನ್ನು ಮತ್ತಷ್ಟು ಬಲಿಷ್ಠರನ್ನಾಗಿ ಮಾಡಿಸುವ ಪ್ರಯತ್ನವೂ ಸಾಗಿದೆ.
ಆದರೇ ಇಂತಹ ಹಲವಾರು ನಾಯಕರುಗಳು, ರಾಜಕಾರಣಿಗಳು ನೀಡುವ ಆಶ್ವಾಸನೆಯ ನುಡಿಗಳು, ಸುಳ್ಳು ಪೊಳ್ಳುಗಳ ಪ್ರಣಾಳಿಕೆಗಳು ಮತ್ತು ಗ್ಯಾರೆಂಟಿ ಸೌಲಭ್ಯಗಳಿಗೆ ಮಾರುಹೋಗಿ ಮೂರ್ಖರಾಗದೇ ಸಧ್ಯದ ಸ್ಥಿತಿಯನ್ನು ಹಾಗೂ ಈ ಹಿಂದೆ ನೋಡಿದ ಅಭಿರುದ್ಧಿ ಕಾರ್ಯಗಳನ್ನು ಅವಲೋಕಿಸಿ ಪ್ರಸ್ತುತವಾಗಿ ಚುನಾವಣೆಗೆ ಸ್ಪರ್ಧಿಸುತ್ತಿರುವ ನಾಯಕನನ್ನು ಗೆಲ್ಲಿಸಿ ಕ್ಷೇತ್ರದ ಅಭಿರುದ್ಧಿಗೆ ಸಹಕಾರಿಯಾಗುವಂತಹ ಹಾಗೂ ಮುಂದಿನ 5 ವರ್ಷಕ್ಕೆ ಅಷ್ಟೇ ಸೀಮಿತಗೊಳಿಸದೇ ಅವರಿಂದ ಮತ್ತೊಬ್ಬ ನಾಯಕನಿಗೂ ಮಾರ್ಗದರ್ಶನವಾಗಬೇಕು ಹಾಗೂ ಇಡೀ ರಾಜ್ಯಕ್ಕೂ ವಿಭಿನ್ನ ಕ್ಷೇತ್ರವೆಂದು ಹೆಸರುವಾಸಿಗಬೇಕಾದರೆ ಪ್ರತಿಯೊಬ್ಬರೂ ಒಳ್ಳೆಯ ವಿಚಾರವಾದಿಯನ್ನು ಹಾಗೂ ಸಾಮಾಜಿಕ ಕಳಕಳಿಯ ನಾಯಕನಿಗೆ ನಮ್ಮ ಮತವನ್ನು ಚಲಾಯಿಸಬೇಕು ಇಲ್ಲದೇ ಹೋದರೆ ಇಂದು ಅವರು ಕೊಡುವ ಹಣ, ಹೆಂಡ, ಸಾರಾಯಿ, ಸೀರೆ, ಕುಕ್ಕರ್, ವಾಷಿಂಗ್ ಮಷಿನ್, ಫ್ರಿಜ್, ಸಿಲಿಂಡರ್, ಮಹಿಳೆಯರಿಗೆ ಉಚಿತ ಬಸ್ ಪಾಸ್, ಉಚಿತ ವಿದ್ಯುತ್ ಸೌಲಭ್ಯ ಹಾಗೆಯೇ ರೈತರಿಗೆ ಪ್ರತೀ ತಿಂಗಳು ರೈತರ ನಿಧಿ, ರೈತರ ಸಾಲ ಮನ್ನಾ, ಮಹಿಳಾ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಹಣ ಮತ್ತು ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲ,ಅಂಗವಿಕರಿಗೆ ಮಹಿಳೆಯರಿಗೆ, ಅಂಗನವಾಡಿ ಕಾರ್ಯಕರ್ತರಿಗೆ ತಿಂಗಳು ತಿಂಗಳು ಅಷ್ಟು ಕೊಡ್ತೀವಿ ಇಷ್ಟು ಕೊಡ್ತೀವಿ ಎನ್ನುವಂತಹ ಆಮಿಷಗಳಿಗೆ ಒಳಗಾಗಿ ಯಾವುದೋ ನಾಯಕನಿಗೆ ಮತ ಚಲಾಯಿಸಿದರೆ ಮುಂದೊಂದು ದಿನ ಜಯಗಳಿಸಿದ ನಾಯಕನಿಂದಲೇ ಅನ್ಯಾಯವಾಗುವುದು ಖಚಿತವಾಗಬಹುದು.
ಮುಂದಿನ ದಿನಮಾನಗಳಲ್ಲಿ ಯಾವುದೋ ಯೋಜನೆಗಳನ್ನೋ, ಯಾವುದೋ ಅವಕಾಶಗಳನ್ನೋ ಪಡೆಯಲು ಬೇಡಿದಾಗ ಅಥವಾ ಅಂತಹ ಯೋಜನೆಗಳನ್ನು ಪಡೆಯಲು ನಾಯಕನ ಮುಂದೆ ನಿಂತು ಪ್ರಜೆಗಳ ಹಕ್ಕನ್ನು ಚಲಾಯಿಸಿದಾಗ ಮಾನ ಮರ್ಯಾದೆ ತೆಗೆದು ನಮ್ಮನ್ನು ಯಾವುದಕ್ಕೂ ಲೆಕ್ಕಿಸದೇ, ಬೇಡಿಕೆಗಳನ್ನು ಈಡೇರಿಸದೆ ನೀವು ನನಗೆ ನೀಡಿದ ಮತ ಸುಮ್ಮನೆ ನೀಡಿದ್ದಲ್ಲ ಆ ಮತಕ್ಕೆ ನಾನೂ ಶ್ರಮವಹಿಸಿದ್ದೇನೆ ಕೊಡಬೇಕಾದದ್ದೂ ಕೊಟ್ಟಿದ್ದೇನೆ, ಮನೆಗೆ ಮನೆಗೆ ತಿರುಗಾಡಿ ಪ್ರತೀ ಮತದಾರನಿಗೆ ಏನು ಸೇರಬೇಕೋ ಅದೆಲ್ಲಾ ಸೇರಿದೆ ಅಂತ ನಮಗೇ ತಿಳಿಹೇಳಿ ಕಳಿಸುತ್ತಾರೆ.
ಹಾಗಾಗಿ ಇಂತಹ ಸ್ಥಿತಿಗಳು ಮುಂದೆ ಬರಬಾರದೆಂದರೆ ಪ್ರಜೆಗಳಾದ ನಾವು ಯಾವುದೇ ಆಮಿಷಕ್ಕೆ ಒಳಗಾಗದೇ ಒಬ್ಬ ನಿಷ್ಠಾವಂತ ನಾಯಕನನ್ನು ಈ ನಾಡಿಗೆ, ಕ್ಷೇತ್ರಕ್ಕೆ ಅಷ್ಟೇ ಅಲ್ಲದೇ ನಮ್ಮ ರಾಷ್ಟ್ರದ ಸಂವಿಧಾನವನ್ನು ಕಾಪಾಡುವಂತಹ, ಸಂವಿಧಾನದ ಪ್ರಸ್ತಾವನೆಯ ಪ್ರತೀ ಅಂಶಗಳನ್ನು ಪಾಲಿಸುವಂತಹ, “ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ನಡೆಯುವ ಸರ್ಕಾರವೇ ಪ್ರಜಾಪ್ರಭುತ್ವ”ಎಂಬಂತಹ ಪ್ರಜಾಪ್ರಭುತ್ವದ ಅರ್ಥವನ್ನು ಅರಿತು ಪ್ರಜೆಗಳ ಹಿತಾಸಕ್ತಿಯ ಮೇರೆಗೆ ಪ್ರಜೆಗಳ ಬದುಕನ್ನು ಪ್ರಜೆಗಳ ನೋವು ನಲಿವುಗಳನ್ನು ಅರಿತು ಸಾಮಾಜಿಕವಾಗಿ ಬೆರೆತು ಅವರಿಗೆ ದೊರೆತ ಅವಕಾಶವನ್ನು ಸರಳವಾಗಿ ಸಮಾಜಮುಖಿಯಾಗಿ ಎಲ್ಲರೊಂದಿಗೆ ನಾನು ನನ್ನದು ಎಂಬಂತಹ ಗರ್ವಕ್ಕೆ ಬಲಿಯಾಗದೇ ಸಹಬಾಳ್ವೆ ಮತ್ತು ಪ್ರಜೆಗಳ ಸಾಮಾಜಿಕ ಬದುಕಿಗೆ ಎದುರಾಗುವ ಸಂಕಷ್ಟಗಳಿಗೆ ಸಹಕಾರಿಯಾಗಿ ಪರಿಹರಿಸಿ ಸಮಾನತೆಯನ್ನು ಸಾರುವಂತಹ ಸಮಾನತೆಯನ್ನು ನೀಡುವಂತಹ ಜಾತಿ ಧರ್ಮವನ್ನು ಎತ್ತಿ ಹಿಡಿಯದೇ ವಿವಿಧ ಧರ್ಮಗಳಲ್ಲಿ ಭಿನ್ನಾಭಿಪ್ರಾಯ ಮೂಡಿಸದೇ ಸರ್ವರಲ್ಲಿ ಸಮಬಾಳು ಕಾಣುವಂತಹ ನಾಯಕನನ್ನು ನಾವು ಆರಿಸಿ ತರಬೇಕಾಗಿರುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು ಮತ್ತು ಕರ್ತವ್ಯವಾಗಿದೆ.
ಇದನ್ನು ಮರೆತು ಆಮಿಷಗಳಿಗೆ ಬಲಿಯಾಗಿ ನಮ್ಮ ಅಮೂಲ್ಯವಾದ ಮತವನ್ನು ಮಾರಿಕೊಂಡರೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಲ್ಲಿ ಮೊದಲು ಪ್ರಜೆಗಳೇ ಆಗಿರುತ್ತಾರೆ ವಿನಃ ನಾವು ಮತ ನೀಡಿ ಆರಿಸಿ ತಂದ ನಾಯಕನಾಗಲಾರ ಯಾಕೆಂದರೇ, ಮತ ನೀಡುವಲ್ಲಿ ಒಬ್ಬ ಪ್ರಜೆ ತಪ್ಪಿದರೆ ಇಡೀ ಪ್ರಜಾಪ್ರಭುತ್ವವೇ ಹಾಳಾಗುತ್ತದೆ.
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ – “ನಿಮ್ಮ ಮತ ಮನೆಯ ಮಗಳಿದ್ದಂತೆ ನಿಮ್ಮ ಮತವನ್ನು ಮಾರಿಕೊಂಡರೆ ನಿಮ್ಮ ಮಗಳನ್ನೇ ಮಾರಿಕೊಂಡಂತೆ ” ಎಂದು ಒಂದು ಮತ ಎಷ್ಟು ಬೆಲೆಯನ್ನು ಹೊಂದಿದೆ ಹಾಗೂ ಮತಕ್ಕಿರುವ ಘನತೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಮಾತಿನಂತೆ ಪ್ರತಿಯೊಬ್ಬ ಪ್ರಜೆಯು ತನ್ನ ಮತದಾನದ ಬೆಲೆಯನ್ನು ಅರಿತು ಒಳ್ಳೆಯ ನಾಯಕನನ್ನು ಆರಿಸಿ ತಂದು ಕ್ಷೇತ್ರಕ್ಕೆ ಮತ್ತು ನಾಡಿಗೆ ಅಷ್ಟೇ ಅಲ್ಲದೇ ಮುಖ್ಯವಾಗಿ ಸಂವಿಧಾನ ಭದ್ರತೆಗಾಗಿ ಸಂವಿಧಾನ ಉಳಿವಿಗಾಗಿ ಸಂವಿಧಾನದ ರಕ್ಷಣೆಗಾಗಿ ನಾವು ವಿಚಾರಮಾಡಿ ಮತವನ್ನು ಆಮಿಷಗಳಿಗೆ ಮಾರಿಕೊಳ್ಳದೇ ಮತದಾನದ ಹಕ್ಕನ್ನು ತಿಳಿದು ಮತ ನೀಡಬೇಕಿದೆ ಮತ್ತು ಮತದಾನ ಮಾಡುವ ಮೂಲಕ ಮತಕ್ಕಿರುವ ಗಟ್ಟಿತನವನ್ನು ಎತ್ತಿ ತೋರಿಸಬೇಕಿದೆ ಮತ್ತು ಮಾನವೀಯತೆಯಿಂದ ಹೆಮ್ಮೆಯಿಂದ ಪ್ರತಿಯೊಬ್ಬ ಪ್ರಜೆಯು ಬದುಕಿ ಬಾಳಬೇಕಾದರೆ “ನನ್ನ ಮತ ನನ್ನ ಹಕ್ಕು”, “ನನ್ನ ಮತ-ಪ್ರಜಾ ಹಿತ “, ಪ್ರಜೆಗಳೇ ಪ್ರಜಾಪ್ರಭುತ್ವದ ಪ್ರಭುಗಳು ಎಂಬುದನ್ನು ಅರಿತು ಮರೆಯದೆ ಪ್ರತಿಯೊಬ್ಬ ನಾಗರಿಕರು ಒಳ್ಳೆಯ ಅಭ್ಯರ್ಥಿಗಳಿಗೆ ಮತ ನೀಡಿ ಆರಿಸಿ ತರಬೇಕಿದೆ ಅದು ಪ್ರತಿಯೊಬ್ಬರ ಕರ್ತವ್ಯವೂ ಹೌದು ಹಾಗೂ ಆ ಒಂದು ಮತದಾನದಲ್ಲಿ ದೇಶದ ಭವಿಷ್ಯವೂ ಅಡಗಿದೆ ಎಂಬುದನ್ನು ಪ್ರಜೆಗಳಾದ ನಾವುಗಳು ಅರಿತು ಮುನ್ನೆಡೆಯಬೇಕಿದೆ.
- ಹನುಮಂತ ದಾಸರ ಹೊಗರನಾಳ
ಯುವ ಬರಹಗಾರರು




















