ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ ಎಪಿಎಂಸಿಯಲ್ಲಿ ಜೋಳ ಖರೀದಿ ಕೇಂದ್ರವನ್ನು ಶಾಸಕ ಜೆ.ಎನ್.ಗಣೇಶ್ ಇವರು ಶನಿವಾರ ಉದ್ಘಾಟಿಸಿದರು.
ನಂತರ ಶಾಸಕ ಗಣೇಶ್ ಮಾತನಾಡಿ ಎಮ್ಮಿನೂರು ಭಾಗದಲ್ಲಿ ಅತಿ ಹೆಚ್ಚಾಗಿ ಜೋಳ ಬೆಳೆ ಬೆಳೆಯುತ್ತಿದ್ದು, ಇಲ್ಲಿನ ರೈತರಿಗೆ ಸಮರ್ಪಕವಾಗಿ ಬೆಂಬಲ ಬೆಲೆ ದೊರಕಬೇಕೆಂಬ ದೃಷ್ಟಿಯಿಂದ ಕಳೆದ ವರ್ಷದಿಂದ ಖರೀದಿ ಕೇಂದ್ರ ಆರಂಭಿಸಲಾಗಿದೆ. ಇದರಿಂದ ಈ ಭಾಗದ ರೈತರಿಗೆ ಬಹಳಷ್ಟು ಅನುಕೂಲವಾಗುವ ಜೊತೆಗೆ ಸರ್ಕಾರದ ಅಡಿಯಲ್ಲಿ ಬೆಂಬಲ ಬೆಲೆ ಸಿಗಲಿದೆ. ಈ ಬೆಂಬಲ ಬೆಲೆಯಿಂದ ರೈತರ ಬದುಕು ಆರ್ಥಿಕವಾಗಿ ವೃದ್ಧಿಯಾಗಲು ಪ್ರಮುಖ ಕಾರಣವಾಗಿದೆ. ರೈತರು ಖರೀದಿ ಕೇಂದ್ರಕ್ಕೆ ತಾವು ಬೆಳೆದಂತಹ ಗುಣಮಟ್ಟದ ಜೋಳವನ್ನು ನೀಡುವ ಮೂಲಕ ಬೆಂಬಲ ಬೆಲೆ ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ತದ ನಂತರ ಆಹಾರ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ದೇವರಾಜ್ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ 18 ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. ಈಗ ಎಮ್ಮಿಗನೂರು ಗ್ರಾಮದಲ್ಲಿ ಕೇಂದ್ರ ಉದ್ಘಾಟಿಸಿದ್ದು, ಇದರಿಂದ ಇಲ್ಲಿನ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ, 599 ರೈತರು ನೋಂದಣಿ ಮಾಡಿಸಿಕೊಂಡಿದ್ದು, ಮತ್ತು ಕಂಪ್ಲಿ-ಕುರುಗೋಡು ಒಳಗೊಂಡಂತೆ ಎರಡು ತಾಲೂಕುಗಳಲ್ಲಿ ಸುಮಾರು ಒಂದು ಲಕ್ಷ ಕ್ವಿಂಟಲ್ ಜೋಳ ಖರೀದಿಸುವ ಗುರಿ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಬಿ. ಕಾಸಿಂಸಾಬ್, ಮುಖ್ಯ ಕಾರ್ಯನಿರ್ವಾಹಕ ಜಡೇಶ್ರೆಡ್ಡಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ, ಮುಖಂಡರಾದ ಸದಾಶಿವಪ್ಪ, ಮಹೇಶ್ಗೌಡ ಸೇರಿದಂತೆ ರೈತರು ಇದ್ದರು
ವರದಿ : ಜಿಲಾನಸಾಬ್ ಬಡಿಗೇರ್




















