ಈದುಲ್ ಫಿತ್ವರ್ ಮುಸ್ಲಿಮರ ಪ್ರಮುಖ ಹಬ್ಬಗಳಲ್ಲೊಂದು. ಚಂದ್ರದರ್ಶನದಿಂದ ಪ್ರಾರಂಭಗೊಂಡ ಪವಿತ್ರ ರಂಝಾನ್ ತಿಂಗಳನ್ನು ಇಲಾಹನ ಆರಾಧನೆಯೊಂದಿಗೆ ಧನ್ಯಗೊಳಿಸುವರು. ಆತ್ಮ ಸಂಸ್ಕರಣೆ ಮತ್ತು ವ್ಯಕ್ತಿ ವಿಕಸನ ಹಾಗೂ ಇಲಾಹಿ ಸಂತೃಪ್ತಿಯನ್ನು ಕೇಂದ್ರವಾಗಿಟ್ಟುಕೊಂಡು ತಿಂಗಳು ಪೂರ್ತಿ ಸೃಷ್ಟಿಕರ್ತ ಧ್ಯಾನ. ಉಪವಾಸ ಮತ್ತು ಝಕಾತ್ ರಂಝಾನ್ ತಿಂಗಳಲ್ಲಿ ಶ್ರೇಷ್ಠ ಆರಾಧನೆಯಾಗಿ ಎದ್ದುಗಾಣಿಸುತ್ತದೆ. ಕಾರಣ, ರಂಝಾನ್ ತಿಂಗಳಲ್ಲಿ ಇವೆರಡನ್ನು ಇಲಾಹನು ಕಡ್ಡಾಯಗೊಳಿಸಿರುತ್ತಾನೆ. ಅದರೊಂದಿಗೆ ನಮಾಝ್, ಖುರ್ಆನ್ ಪಠಣ, ದಾನ ಧರ್ಮ ಸೇರಿದಂತೆ ಹತ್ತು ಹಲವು ಸತ್ಕರ್ಮಗಳಲ್ಲಿ ಮುಸ್ಲಿಂ ಸಮುದಾಯ ತಲ್ಲೀನರಾಗಿರುವುದನ್ನು ಪ್ರಸ್ತುತ ತಿಂಗಳಲ್ಲಿ ಪ್ರತ್ಯೇಕವಾಗಿ ಕಾಣಬಹುದು. ಪ್ರಾಯಪೂರ್ತಿಯಾದ, ಬುದ್ಧಿಯಿರುವ ಪ್ರತಿಯೊಬ್ಬ ಮುಸಲ್ಮಾನನ ಮೇಲೆ ಒಂದು ತಿಂಗಳು ಕಾಲದ ಉಪವಾಸ ಕಡ್ಡಾಯ. ಉಪವಾಸವೆಂದರೆ ಬೆಳಿಗ್ಗೆಯಿಂದ ಸಂಜೆಯವರೆಗೆ ಅನ್ನ ಪಾನೀಯಗಳಿಂದ ವಿಮುಖರಾಗಿ ಖಾಲಿಹೊಟ್ಟೆಯಲ್ಲಿ ಇಲಾಹನನ್ನು ಸ್ಮರಿಸುವುದು. ಕೇವಲ ಹೊಟ್ಟೆಯಷ್ಟೇಯಲ್ಲ, ಮನುಷ್ಯ ಶರೀರದ ಎಲ್ಲಾ ಅಂಗಾಂಗಗಳು ಕೆಡುಕುಗಳಿಂದ ದೂರವಿರಬೇಕು ಎಂಬ ಕಡ್ಡಾಯ ಷರತ್ತು ಉಪವಾಸಿಗನಿಗಿದೆ.
ಝಕಾತ: ತನ್ನ ದುಡಿಮೆಯ ನಿರ್ದಿಷ್ಟ ಭಾಗವನ್ನು ಬಡವರಿಗೆ ಕಡ್ಡಾಯವಾಗಿ ನೀಡುವುದು. ಒಬ್ಬನ ಸಂಪತ್ತಿನಿಂದ ಕಡ್ಡಾಯವಾಗಿ ಕೊಡಬೇಕಾದ ಭಾಗವು, ಆತನದಲ್ಲ. ಅದು ಬಡವರ ಹಕ್ಕಾಗಿದೆ ಎಂಬುದು ಪೈಗಂಬರ್ ಮುಹಮ್ಮದರ ಸಂದೇಶ. ಅದನ್ನು ನೀಡಲೇಬೇಕು, ನೀಡದೆ ಹೋದಲ್ಲಿ, ಸೃಷ್ಟಿಕರ್ತನ ಕಠಿಣ ಶಿಕ್ಷೆಗೆ ಗುರಿಯಾಗುವ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಅನಾಥ ಮಕ್ಕಳಿಗೆ, ವಿಧವೆಯರಿಗೆ ಹಾಗೂ ನಿರ್ಗತಿಕರಿಗೆ ದಾನ ನೀಡುವುದನ್ನು ಇಸ್ಲಾಂ ಪ್ರೋತ್ಸಾಹಿಸಿದೆ. ದಾನ ನೀಡುವುದಕ್ಕೆ ನಿರ್ಧಿಷ್ಟ ಸಮಯ ಅಥವಾ ತಿಂಗಳುಗಳಲ್ಲ. ರಂಜಾನ್ ತಿಂಗಳಿನಲ್ಲಿ ನೀಡಿದರೆ ಹೆಚ್ಚು ಪಟ್ಟು ಪುಣ್ಯ ಲಭಿಸುತ್ತದೆ. ಹೀಗೆ ಒಂದು ತಿಂಗಳು ಕಾಲ ಸತ್ಕಾರ್ಯದಲ್ಲಿ ನಿರತರಾದ ಮುಸ್ಲಿಮರು ನಮಾಝಿನೊಂದಿಗೆ ಅಲ್ಲಾಹನಿಗೆ ಕೃತಜ್ಞತೆಗೈದು, ಸಂಭ್ರಮಿಸುವ ದಿನವಾಗಿದೆ ಈದುಲ್ ಫಿತ್ವರ್ ಹಬ್ಬ.
ರಂಝಾನಿನ ಅಸ್ತಮಾದಿಂದ ಶವ್ವಾಲ್ ತಿಂಗಳ ಉದಯ. ಅದರ ಮೊದಲ ದಿನವೇ ಈದುಲ್ ಫಿತ್ವರ್. ಈದ್ ಎಂದರೆ ಹಬ್ಬ ಎಂದರ್ಥ. ಮೂಲತಃ ಅರೆಬಿಕ್ ಭಾಷೆ. ಈದುಲ್ ಫಿತ್ವರ್ ದಿನದಂದು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ದಾನ ನೀಡುವುದು ಕಡ್ಡಾಯವಿದೆ. ಗೋದಿ, ಜೋಳ, ಖರ್ಜೂರ, ಒಣ ದ್ರಾಕ್ಷಿ ಅಥವಾ ಅಕ್ಕಿ ಇದರಿಂದ ಯಾವುದಾದರೂ ದಾನ ಮಾಡಬೇಕು. ಒಟ್ಟಿನಲ್ಲಿ ಹೇಳಿದರೆ ರಂಝಾನ್ ತಿಂಗಳು ಮತ್ತು ಈದುಲ್ ಫಿತ್ವರ್ ಇಲಾಹನ ಆರಾಧನೆಯೊಂದಿಗೆ ನಾಡಿನ ಬಡ ನಿರ್ಗತಿಕರ, ಅನಾಥರ ಹಾಗೂ ವಿಧವೆಯರ ಬಡತನದ ಬೇಗುದಿಯನ್ನು ತಣಿಸಲು ಕರೆಯಿಡುತ್ತಿದೆ. ಝಕಾತ್ ಮತ್ತು ಫಿತ್ವರ್ ಬಡವರ ಪಾಲಾಗಬೇಕೆಂಬುವುದು ಇಸ್ಲಾಮಿನ ಕಟ್ಟುನಿಟ್ಟಾದ ಘೋಷಣೆ. ಈದುಲ್ ಫಿತ್ವರ್ ಹಬ್ಬವನ್ನು ಹಸಿವು ಮುಕ್ತ ಸಮಾಜದ ಪರಿಕಲ್ಪನೆಯೆಂದರೂ ತಪ್ಪಾಗಲಾರದು. ಬಡವರ, ಅನಾಥರ ಮತ್ತು ದುರ್ಬಲರ ಪ್ರಯಾಸಕ್ಕೆ ಬಲ ತುಂಬಲು ಕಲಿಸಿಕೊಟ್ಟ ಪೈಗಂಬರ್ ಮುಹಮ್ಮದರು ಅದನ್ನು ಪ್ರಾಯೋಗಿಕವಾಗಿ ಕಲಿಸಿಕೊಟ್ಟರು.
ಅದೊಂದು ಈದ್ ಹಬ್ಬದ ಪ್ರಭಾತ. ಈದ್ ಆಚರಣೆ ಮತ್ತು ನಮಾಝ್ ನಿರ್ವಹಿಸಲು ಮಸೀದಿಯತ್ತ ಪೈಗಂಬರ್ ಮುಹಮ್ಮದರ ಹೆಜ್ಜೆ. ದಾರಿ ಮಧ್ಯೆ ಮೈದಾನವೊಂದರಲ್ಲಿ ಪುಟ್ಟ ಪುಟ್ಟ ಮಕ್ಕಳು ತಂಡೋಪತಂಡವಾಗಿ ಆಡುತ್ತಿರುವುದನ್ನು ಗಮನಿಸಿದರು. ಉತ್ಸಾಹ ಹುಮ್ಮಸ್ಸಿನಿಂದ ಆಟವಾಡುವ ಮಕ್ಕಳು ಒಂದೆಡೆಯಾದರೆ, ಮೈದಾನದ ಮತ್ತೊಂದೆಡೆ ಪುಟ್ಟ ಬಾಲಕನೊಬ್ಬ ಏಕಾಂತದಲ್ಲಿ ಕೂತಿದ್ದನು. ಆತನ ಏಕಾಂತದಲ್ಲಿ ಸಂಶಯ ಮೂಡಿದ ಪೈಗಂಬರ್ ಮಹಮ್ಮದರಿಗೆ ಬಾಲಕನ ನಿಸ್ಸಾಹಕತೆ ತಿಳಿದುಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಬಾಲಕನ ಕುತೂಹಲಕಾರಿ ನಡೆಯನ್ನು ಗಂಭೀರವಾಗಿ ಪರಿಗಣಿಸಿದ ಪೈಗಂಬರ್ ಮುಹಮ್ಮದರು ಮಸೀದಿಯತ್ತ ಹೊರಟಿದ್ದ ದಾರಿಯನ್ನು ಬಾಲಕನೆಡೆಗೆ ತಿರುಗಿಸುತ್ತಾರೆ.
ಬಾಲಕನು ಬಿಕ್ಕಿ ಬಿಕ್ಕಿ ಅಳುತ್ತಿದ್ದ. ದುಃಖಿತನಾಗಿದ್ದ ಬಾಲಕನೊಂದಿಗೆ ಪೈಗಂಬರ್ ಮುಹಮ್ಮದರು ಮಾತಿಗಿಳಿದರು. ಅಲ್ಲ ಮಗನೇ “ನೋಡು, ಅದೆಷ್ಟು ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದಾರೆ. ನೀನು ಯಾಕೆ ಇಲ್ಲಿ ಕೂತು ಅಳುತ್ತಿದ್ದೀಯಾ?” ಎಂದು ಹೃದಯಸ್ಪರ್ಶಿ ಕೇಳುತ್ತಾರೆ. ಬಾಲಕನ ಉತ್ತರವು ಹೀಗಿತ್ತು; ‘ಓ ಅಲ್ಲಾಹನ ಪೈಗಂಬರರೆ ” ಈ ದಾರಿಯಾಗಿ ಅದೆಷ್ಟು ಜನರು ಈದ್ ಆಚರಿಸಲು ಮಸೀದಿಗೆ ಹೋಗುತ್ತಿದ್ದಾರೆ. ಅವರ ಪೈಕಿ ನನ್ನದೇ ಪ್ರಾಯದವರು ಹೇರಳವಿದ್ದಾರೆ. ಎಲ್ಲರೂ ಹೊಸ ಹೊಸ ಬಟ್ಟೆಗಳು ತೊಟ್ಟಿರುವರು. ಸುಗಂಧ ದ್ರವ್ಯ ಧರಿಸಿದ್ದಾರೆ. ಅವರ ಮುಖದಲ್ಲಿ ಹಬ್ಬದ ನಗುವಿದೆ, ಸಂಭ್ರಮ ಸಂತೋಷವಿದೆ. ಎಲ್ಲದಕ್ಕಿಂತಲೂ ಮಿಗಿಲಾಗಿ ಸೃಷ್ಟಿಕರ್ತನ ಮೇಲೆ ಅಪಾರವಾದ ಕೃತಜ್ಞತಾ ಭಾವನೆಯಿದೆ. ಆದರೆ ತಮ್ಮನ್ನು ಹೊರತುಪಡಿಸಿದರೆ, ಬೇರೆಯಾದರೂ ಕೂಡ ನನ್ನ ಕಡೆ ಗಮನಹರಿಸಿಲ್ಲ. ಕನಿಷ್ಠ ಪಕ್ಷ ನೋವನ್ನು ತಿಳಿದುಕೊಳ್ಳುವ ಪ್ರಯತ್ನವು ಮಾಡಿದವರಿಲ್ಲ. ಓ ಪೈಗಂಬರರೇ ತಾವು ಅದೆಂತಹ ಕರುಣಾಮಯಿಯಾಗಿದ್ದೀರಾ..!
ಬಾಲಕನ ಮಾತು ಮುಂದುವರಿಯಿತು. ಜಗತ್ತು ಈದ್ ಸಂಭ್ರಮಾಚರಣೆಯಲ್ಲಿದೆ . ನನ್ನ ಪುಟ್ಟ ಕಣ್ಣುಗಳು ತರತರದ ಬಟ್ಟೆಗಳನ್ನು ತೊಟ್ಟು ಪ್ರಾರ್ಥನೆಗೆ ತೆರಳುತ್ತಿರುವವರನ್ನು ನೋಡುತ್ತಿದೆ. ಅವರ ಹಚ್ಚಿರುವ ಸುಗಂಧದ್ರವ್ಯದ ಮತ್ತು ಮನೆಯಲ್ಲಿ ತಯಾರಿಸಿದ ತರಹೇವಾರು ರುಚಿಕರವಾದ ಆಹಾರ ಪದಾರ್ಥಗಳ ಸುವಾಸನೆಯು ನನ್ನ ಮೂಗಿಗೆ ಅಪ್ಪಳಿಸುತ್ತಿದೆ. ಪೈಗಂಬರರೇ ಬಿಡಿ, ನಾನೊಬ್ಬ ದೌರ್ಭಾಗ್ಯವಂತ. ಹೆತ್ತವರನ್ನು ಕಳೆದುಕೊಂಡ ನನಗೆ ಹೊಸ ಬಟ್ಟೆಯನ್ನು ತೊಡಲು, ರುಚಿಕರವಾದ ಆಹಾರ ತಯಾರಿಸಿಕೊಡಲು ಯಾರಿದ್ದಾರೆ?!. ಈದ್ ಹಬ್ಬದ ಸಂಭ್ರಮಾಚರಣೆ ನನ್ನ ಪಾಲಿಗೆ ಕನಸು ಮಾತ್ರ. ಹೀಗೆ ಪುಟ್ಟ ಬಾಲಕನ ಅನಾಥ ಕನಸುಗಳು ಪೈಗಂಬರ್ ಮುಹಮ್ಮದರ ಶ್ರವಣಗಳಿಗೆ ದಾಟಿದವು, ಮನಸ್ಸಿಗೆ ನಾಟಿದವು. ತುಸು ಸಮಯ ಮಾತು ಮುರಿಯಲಾಗದೆ ಪೈಗಂಬರರು ನಿಂತುಬಿಟ್ಟರು. ಬಾಲಕನೊಂದಿಗೆ ಪೈಗಂಬರ್ ಮುಹಮ್ಮದರ ಕಣ್ಣುಗಳೂ ತುಂಬಿದವು. ಹೆತ್ತವರು, ಮಿತ್ರಾದಿಗಳಿಲ್ಲದೆ ಅನಾಥನಾಗಿದ್ದ ಬಾಲಕನ ಪುಟ್ಟ ಕೈಗಳನ್ನು ಹಿಡಿದು ಪೈಗಂಬರ್ ಮುಹಮ್ಮದರು ನೇರವಾಗಿ ಮನೆಗೆ ನಡೆದರು. ಪ್ರಿಯ ಪತ್ನಿಯನ್ನು ಕರೆದು ಆ ಬಾಲಕನ ಪರಿಚಯ ಮಾಡುತ್ತಾರೆ. ನಡೆದ ಘಟನೆ ಮತ್ತು ಮಗುವಿನ ನೋವನ್ನು ತುಂಬಿದ ಕಣ್ಣುಗಳಿಂದ ಪತ್ನಿಯಲ್ಲಿ ವಿವರಿಸುತ್ತಾರೆ. ಅನಾಥನಾಗಿರುವ ಈ ಮಗು ಯಾರ ಮಗನಾದರೇನು?!. ಇವನು ನಮ್ಮ ಮಗನಾಗಿದ್ದಾನೆ. ಇವನ ಮುಖದಲ್ಲಿ ಹಬ್ಬದ ಸಂಭ್ರಮ ತರಿಸುವುದು ನನ್ನ ನಿನ್ನ ಜವಾಬ್ದಾರಿಯಾಗಿದೆ. ಇವನಿಗೆ ಸ್ನಾನ ಮಾಡಿಸು, ಒಳ್ಳೆಯ ಬಟ್ಟೆಯನ್ನು ಧರಿಸು, ಸುಗಂಧ ದ್ರವ್ಯ ಹಚ್ಚು ಹಾಗೂ ಹಸಿದಿದ್ದಾನೆ ಹೊಟ್ಟೆ ತುಂಬಿಸು. ಪೈಗಂಬರ್ ಮುಹಮ್ಮದರ ಆಜ್ಞೆಯನ್ನು ಪತ್ನಿಯು ಚಾಚು ತಪ್ಪದೇ ಪಾಲಿಸುತ್ತಾರೆ. ಕೆಲವೇ ಹೊತ್ತಿನಲ್ಲಿ ಮೈದಾನದ ಒಂದು ಬದಿಯಲ್ಲಿ ಅನಾಥನಾಗಿ, ಹಸಿದ ಹೊಟ್ಟೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಬಾಲಕನ ಮುಖದಲ್ಲಿ ಮಂದಹಾಸ. ಈದ್ ಹಬ್ಬದ ಸಂಭ್ರಮ ಮೂಡಿತು. ಅಳುತ್ತಿದ್ದ ಅನಾಥ ಬಾಲಕನ ಬದುಕು ಮತ್ತು ಮನಸ್ಸನ್ನು ಬೆಳಗಿಸಿದ ಸಾರ್ಥಕತೆಯನ್ನು ನೆನೆಸಿಕೊಂಡ ಪೈಗಂಬರ್ ಮುಹಮ್ಮದರು ಮತ್ತು ಪತ್ನಿ ಇಲಾಹನನ್ನು ಸ್ಮರಿಸಿದರು. ಮರು ಕ್ಷಣವೇ ಬಾಲಕನ ಕೈಗಳನ್ನು ಹಿಡಿದು ಪೈಗಂಬರ್ ಮಹಮ್ಮದರು ಮಸೀದಿಗೆ ಮರಳಿದರು. ದೊಡ್ಡ ಸಂಭ್ರಮವನ್ನು ಪ್ರಸ್ತುತಪಡಿಸುತ್ತಲೇ ಬಾಲಕನು ಜೊತೆಯಾದನು. ಸಹಸ್ರರು ಸಂಖ್ಯೆಯ ಅನುಚರರು ಸೇರಿರುವ ಪೈಗಂಬರ್ ಮುಹಮ್ಮದರ ಮಸೀದಿಯಲ್ಲಿ ಈದ್ ಸಂಭ್ರಮಾಚರಣೆ ಕ್ಷಣಗಣನೆ. ಅನಾಥನಾಗಿದ್ದ ಬಾಲಕನಿಗೂ ಅವರೊಂದಿಗೆ ಈದ್ ಸಂಭ್ರಮದ ಸವಿಯೂಟ ಬಡಿಸಿದ ಕಾರುಣ್ಯದ ಪ್ರತೀಕವಾಗಿ ಪೈಗಂಬರ್ ಮಹಮ್ಮದರರು ಸಾಕ್ಷಿಯಾದರು.
ಇಸ್ಲಾಂ ಧರ್ಮದ ಯಾವುದೇ ಹಬ್ಬ ಆಚರಣೆಗಳು ಕೇವಲ ಆರಾಧನೆಯಷ್ಟೇಯಲ್ಲ, ಮಾನವೀಯತೆ, ಮನುಷ್ಯತ್ವ ಹಾಗೂ ಸಮಾನತೆಯನ್ನು ದ್ವನಿಸಿದೆ. ಜಗತ್ತಿನಲ್ಲಿರುವ ಎಲ್ಲಾ ಧರ್ಮಗಳಿಗೂ ಇದನ್ನೇ ಹೇಳಲಿಕ್ಕಿರುವುದು. ಪೈಗಂಬರ್ ಮಹಮ್ಮದರು ಕಲಿಸಿರುವ ಧರ್ಮ ಮತ್ತು ಧಾರ್ಮಿಕ ಆಚಾರ, ವಿಚಾರಗಳು ಸಮಾಜದ ಇತರ ಧರ್ಮ ಅಥವಾ ನಂಬಿಕೆ ಹಾಗೂ ಕೇಂದ್ರಗಳಿಗೆ ಹಾನಿ ಉಂಟು ಮಾಡಲು ಕಲಿಸಿಲ್ಲ. ನೊಂದವರ ನೋವಿಗೆ ಮುಲಾಮಾಗುವ ಕರೆಯ ಜೊತೆಗೆ ತೋರಿಸಿ ಕೊಟ್ಟರು. ಧರ್ಮ ಸಾರುವ ನೈತಿಕ ಪಾಠವನ್ನು ಧರ್ಮ ವಿಶ್ವಾಸಿಯು ಬದುಕಿನಲ್ಲಿ ಅಂತರ್ಗತಗೊಳಿಸಿದಾಗ ಧರ್ಮದ ಮೌಲ್ಯವು ಸಮಾಜದಲ್ಲಿ ಹೆಚ್ಚಾಗುತ್ತದೆ. ಹಬ್ಬದ ಸಂಭ್ರಮದೊಂದಿಗೆ ಸಮಾಜದ ತಳಮಟ್ಟದ ಪ್ರಜೆಗಳ ಬೇಡಿಕೆ ಮತ್ತು ಬದುಕಿನ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸುವ ನೈಜವಾದ ಧರ್ಮ ವಿಶ್ವಾಸಿಗಳಾಗೋಣ. ಅಖಂಡ ಜಗತ್ತಿನ ಮಾನವಕುಲಕ್ಕೆ ಈದುಲ್ ಫಿತ್ವರ್ ಹಬ್ಬದ ಹಾರ್ದಿಕ ಶುಭಾಶಯಗಳು.
ವರದಿ : ಮಸೀದಿ. ಅಬ್ದುಲ್ ಗೌಸ್. ಸಿರುಗುಪ್ಪ




















