ಬಳ್ಳಾರಿ / ಕಂಪ್ಲಿ : ಪಟ್ಟಣದ ಸಣಾಪುರ ರಸ್ತೆಯ ಶಾದಿ ಮಹಲ್‌ನಲ್ಲಿ ಜೆಸಿಐ ಕಂಪ್ಲಿ ಸೋನಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ ಉದ್ಘಾಟಿಸಿ ಮಾತನಾಡಿ, ಜೆಸಿಐ ಯುವಕರಲ್ಲಿ ನಾಯಕತ್ವವ ಗುಣಗಳನ್ನು ಬೆಳೆಸುವ ಮಹತ್ವದ ಸಂಸ್ಥೆಯಾಗಿದ್ದು, 164 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತರರಾಷ್ಟ್ರೀಯ ಸೇವಾ ಸಂಘಟನೆಯಾಗಿದೆ. ಪಕ್ಷ, ಲಿಂಗ, ಜಾತಿ ಭೇದವಿಲ್ಲದೆ ಎಲ್ಲರನ್ನು ಒಗ್ಗೂಡಿಸುವ ವೇದಿಕೆಯಾಗಿದೆ. ನಿಜವಾದ ದೇವರು ಕಾಯಕವೇ ಆಗಿದ್ದು, ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಗೌರವದಿಂದ ನಿರ್ವಹಿಸಬೇಕು. ಸಮಯಪ್ರಜ್ಞೆ ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಮುಖ್ಯ ಎಂದು ತಿಳಿಸಿದರು. ತೃತೀಯಲಿಂಗಿ ಮಕ್ಕಳಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು, ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಸಮಾಜದಲ್ಲಿ ಗೌರವಾನ್ವಿತ ಸ್ಥಾನಮಾನ ಪಡೆಯುವಂತೆ ಮಾಡಬೇಕು ಎಂದು ಮನವಿ ಮಾಡಿದರು. ವಿದ್ಯಾವಂತ ತೃತೀಯಲಿಂಗಿಗಳನ್ನು ಜೆಸಿಐ ಸದಸ್ಯರನ್ನಾಗಿ ಸೇರಿಸಿಕೊಳ್ಳುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಇನ್ನಷ್ಟು ವಿಸ್ತರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವೈದ್ಯರಾದ ಡಾ. ಹರಿಕಾ ಹದಿಹರೆಯದ ಹುಡುಗಿಯರಲ್ಲಿ ಆರೋಗ್ಯ ಜಾಗೃತಿ ಅತ್ಯಂತ ಅಗತ್ಯವಾಗಿದೆ. ವಿಶೇಷವಾಗಿ ಕಬ್ಬಿಣದ ಅಂಶದ ಕೊರತೆ (ಅನೀಮಿಯಾ) ಸಮಸ್ಯೆ ಸಾಮಾನ್ಯವಾಗಿದ್ದು, ಅದರ ಪರಿಣಾಮಗಳು ಹಾಗೂ ತಡೆಗಟ್ಟುವ ಕ್ರಮಗಳ ಕುರಿತು ವಿವರಿಸಿದರು. ಕಬ್ಬಿಣದ ಅಂಶವುಳ್ಳ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದು, ವಿಟಮಿನ್ ಸಿ ಇರುವ ಆಹಾರದ ಮಹತ್ವವನ್ನು ಅರಿತುಕೊಳ್ಳುವುದು ಹಾಗೂ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದರು.
ವಿಜಯಲಕ್ಷ್ಮಿ (ವಕೀಲರು), ಪೋಕ್ಸೋ ಕಾಯ್ದೆಯ ಕುರಿತು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷರಾದ ಭರತ್ ಪದ್ಮಶಾಲಿ, ಜೆಸಿಐ ವಲಯ 24ರ ವಲಯ ಅಧಿಕಾರಿ ಸಂತೋಷ್ ಕೊಟ್ರಪ್ಪ ಸೋಗಿ ಸೇರಿದಂತೆ ಡಾ ಶ್ರದ್ಧಾ ಭರತ್, ಭರತ್ ಡಿ, ಪೂಜ ಭರತ್ , ಅಮೃತಾ ಸಂತೋಷ್, ಜಯಲಕ್ಷ್ಮಿ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ , ಸ್ವಾತಿ (ಆರೋಗ್ಯ ಇಲಾಖೆ), ಮದ್ದಾನಪ್ಪ (ಪ್ರಿನ್ಸಿಪಾಲ್, ವಿನೂತನ ಮಹಿಳಾ ಪದವಿ ಕಾಲೇಜು), ಮನೋಜ್ ದಾನಪ್ಪ, ವೆಂಕಟಸಪ್ತಗಿರಿ, ಸಿದ್ದರಾಮೇಶ್, ಮಾನಸ, ಸೋಹಲ್, ಚಿನ್ನ, ವಿಷ್ಣು ಸೇರಿದಂತೆ ಇತರರಿದ್ದರು
ವರದಿ : ಜಿಲಾನಸಾಬ್ ಬಡಿಗೇರ್




















