ಬಳ್ಳಾರಿ / ಕಂಪ್ಲಿ : ತಾಲೂಕಿನ ಸಣಾಪುರ ಗ್ರಾಮದ ಕುಮಾರಿ ಸಂಗೀತ ಎಸ್. ಸಣಾಪುರ ಅವರು ತಮ್ಮ ಭರತನಾಟ್ಯ ಪ್ರತಿಭೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಬಾಲ್ಯದಿಂದಲೇ ಆರ್ಥಿಕ ಸಂಕಷ್ಟಗಳ ನಡುವೆಯೂ, ತಮ್ಮ ಕುಟುಂಬಕ್ಕೆ ಯಾವುದೇ ತೊಂದರೆ ಉಂಟಾಗದಂತೆ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡುತ್ತಾ, ಕಲೆಯಲ್ಲಿಯೂ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡಿದ್ದಾರೆ.ಬಡತನದ ನಡುವೆಯೂ, ಸಂಗೀತ ಅವರು ಭರತನಾಟ್ಯ ಕಲೆಯನ್ನು ಅಚ್ಚುಮೆಚ್ಚಾಗಿ ಅಭ್ಯಾಸಿಸಿ, ಬಳ್ಳಾರಿ ಜಿಲ್ಲೆಯ ವಿವಿಧ ಕಾರ್ಯಕ್ರಮಗಳು ಮತ್ತು ಉತ್ಸವಗಳಲ್ಲಿ ತಮ್ಮ ಅದ್ಭುತ ನೃತ್ಯ ಪ್ರದರ್ಶನಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ನೃತ್ಯದಲ್ಲಿ ಕಾಣಿಸುವ ಅಭಿವ್ಯಕ್ತಿ, ಲಯ ಮತ್ತು ಶೈಲಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಇನ್ನಷ್ಟು ಹೆಮ್ಮೆಯ ಸಂಗತಿಯೆಂದರೆ, ಹೈದರಾಬಾದ್‌ನಲ್ಲಿ ನಡೆದ ಭಾರತ ಅಕಾಡೆಮಿ “ಕೂಚುಪುಡಿ ಕಲಾ ವೈಭವಂ 2” ಕಾರ್ಯಕ್ರಮದಲ್ಲಿ ಸಾವಿರಾರು ಕಲಾವಿದರೊಂದಿಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಕಲೆ ಪ್ರದರ್ಶಿಸಿ ಗೌರವಕ್ಕೆ ಪಾತ್ರರಾಗಿದ್ದಾರೆ. ಸಂಗೀತ ಅವರ ಈ ಸಾಧನೆಗೆ ಪ್ರಮುಖ ಕಾರಣವಾಗಿರುವವರು ಅವರ ಗುರುಗಳಾದ ಶ್ರೀ ಜೀಲಾನಿ ಭಾಷಾ, ಗುರುಗಳ ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ಸಂಗೀತ ಅವರು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪ್ರತಿಭಾವಂತ ಬಾಲಕಿಯ ಸಾಧನೆಯನ್ನು ಗುರುತಿಸಿ, ಕರುನಾಡ ನಿಧಿಯು 2026ನೇ ಸಾಲಿನ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಕುಮಾರಿ ಸಂಗೀತ ಎಸ್. ಸಣಾಪುರ ಅವರಿಗೆ “ಕರುನಾಡ ನಿಧಿ ಪ್ರಶಸ್ತಿ” ನೀಡಿ ಗೌರವಿಸುತ್ತಿದೆ. ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಕುಮಾರಿ ಸಂಗೀತ ಅವರು ಉತ್ತಮ ಉದಾಹರಣೆಯಾಗಿದ್ದು, ಇತರ ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿದ್ದಾರೆ.ಕುಮಾರಿ ಸಂಗೀತ ಸರ್ಕಾರಿ ಪ್ರಥಮ ಕಾಲೇಜ್ ನ ತೃತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಾಳೆ, ಅವರ ಸಾಧನೆ ನಿಜಕ್ಕೂ ಮೆಚ್ಚುವಂತದ್ದು. ಬಡತನದ ಹಾದಿಯಲ್ಲಿದ್ದರೂ, ಕಲೆಯ ಮೇಲಿನ ನಿಷ್ಠೆ ಮತ್ತು ಕಠಿಣ ಪರಿಶ್ರಮದಿಂದ ಅವರು ಭರತನಾಟ್ಯದಲ್ಲಿ ಅಪಾರ ಸಾಧನೆ ಮಾಡಿದ್ದಾರೆ ಎಂದು ಕಾಲೇಜ್ ನ ಪ್ರಾಂಶುಪಾಲರು ಸಹಿತ ಎಲ್ಲಾ ಉಪನ್ಯಾಸಕರು ಅಭಿನಂಡಿಸಿದ್ದಾರೆ. ಅವರ ಈ ಪ್ರತಿಭೆಯನ್ನು ಗುರುತಿಸಿ “ಕರುನಾಡ ನಿಧಿ ಪ್ರಶಸ್ತಿ” ನೀಡಿರುವುದು ಹೆಮ್ಮೆಯ ವಿಷಯವಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್




















