ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪುಸ್ತಕ ವಿಮರ್ಶೆ :ಛಲ ಬಿಡದ ಸಾಧಕಿಯರು 


ಪುಸ್ತಕದ ಶೀರ್ಷಿಕೆ : ಛಲ ಬಿಡದ ಸಾಧಕಿಯರು
ಕೃತಿಕಾರರು : ಶಿವನಗೌಡ ಪೊಲೀಸ್ ಪಾಟೀಲ್ ನವಲಹಳ್ಳಿ.
ಪ್ರಕಾಶಕರು : ಅಭಿನವ ಪ್ರಕಾಶನ ನವಲಹಳ್ಳಿ
ಪ್ರಕಟಣೆ: 2025.

ಸಾಧನೆಗೆ ಪ್ರೇರೇಪಿಸುವ : ಛಲ ಬಿಡದ ಸಾಧಕಿಯರು 

ಲೇಖಕ, ಅಂಕಣಕಾರರು ಶಿವನಗೌಡ ಪೊಲೀಸ್ ಪಾಟೀಲ್ ನವಲಹಳ್ಳಿ ಅವರ ‘ಛಲ ಬಿಡದ ಸಾಧಕಿಯರು’ವೆಂಬ ಪುಸ್ತಕ ಮಹಿಳೆಯರ ಜೀವನದ ಸತತ ಪ್ರಯತ್ನ ಆತ್ಮವಿಶ್ವಾಸ ಮತ್ತು ಛಲವನ್ನು ಕೇಂದ್ರವಾಗಿಸಿ, ಸೋಲು, ಅಸಾಧ್ಯತೆ, ಅವಮಾನ, ಬಡತನ, ಅಂಗವೈಕಲ್ಯ, ತಿರಸ್ಕಾರ, ಅವಕಾಶಗಳ ಕೊರತೆಗಳೊಂದಿಗೆ ದೈಹಿಕ, ಮಾನಸಿಕ ಅಡೆತಡೆಗಳನ್ನು ಎದುರಿಸಿ ಸಾಧನೆಯ ಶಿಖರವನ್ನು ತಲುಪಿದ ಸಾಧಕಿಯರ ಕಥನಗಳಾಗಿವೆ.

ಜೀವನದಲ್ಲಿ ನಿರಾಶೆ ಅನುಭವಿಸುತ್ತಿರುವ ಪ್ರತಿಯೊಬ್ಬರಿಗೂ ಕೃತಿ ಮಾರ್ಗದರ್ಶಿಯಂತಿದೆ. ಸಾಧನೆಗಳ ಮೇಲೆ ಯಾರ ಹಕ್ಕೂ ಇಲ್ಲ. ಶ್ರಮ, ಶಿಸ್ತು, ಸಹನೆ,ಸಮಯಪಾಲನೆ ಮತ್ತು ಆತ್ಮನಂಬಿಕೆಯಿದ್ದರೆ ಅಸಾಧ್ಯಗಳ ಗಡಿಯನ್ನು ದಾಟಬಹುದು ಎನ್ನುವುದಕ್ಕೆ ಈ ಕೃತಿಯ ಕಥಾನಕಗಳೇ ಸಾಕ್ಷಿಯಾಗಿವೆ.
ಬದುಕು ಒಂದೇ ಆಗಿದ್ದರೂ ಕೂಡ ಅವರವರ ಅನುಭವ, ಸಂಕಷ್ಟ, ಸವಾಲುಗಳು, ದೃಷ್ಟಿಕೋನಗಳು ಭಿನ್ನವಾಗಿರುತ್ತವೆ. ಕಷ್ಟಗಳು ಯಾವ ಸಂಧರ್ಭದಲ್ಲಿಯಾದರೂ ಬರಬಹುದು. ಸಾಸಿವೆಯಷ್ಟು ಕಷ್ಟಗಳನ್ನಿಟ್ಟುಕೊಂಡು ಸಾಗರದಷ್ಟು ನೋವನ್ನು ಅನುಭವಿಸಿದವರಿದ್ದಾರೆ. ಸಾಗರದಷ್ಟು ಕಷ್ಟಗಳನಿಟ್ಟುಕೊಂಡು ಸಾಸಿವೆಯಷ್ಟು ನೋವು ಅನುಭವಿಸಿ ನಗುನಗುತ್ತಲೇ ಸಾಧನೆ ಮಾಡಿದವರಿದ್ದಾರೆ. 
ಪುರುಷ ಪ್ರಧಾನ ಸಮಾಜದಲ್ಲಿ ಅನಿರೀಕ್ಷಿತ, ಕಷ್ಟಗಳು ಮಹಿಳೆಯರಿಗೆ ಬಂದರೆ ಸಹಜವಾಗಿ ಮಾನಸಿಕವಾಗಿ ಕುಗ್ಗುತ್ತಾರೆ. ಇಂಥಹ ಸಂದರ್ಭದಲ್ಲಿ ಆತ್ಮ ಶಕ್ತಿಯಲ್ಲಿನ ಒಂದು ದಿವ್ಯ ಅಸ್ತ್ರವೇ ಛಲ, ಆ ಛಲವೇ ಹೊಸ ಬದುಕಿಗೆ ಸಂಜೀವಿನಿಯಾಗಿ, ಸಾಧನೆಗಳಿಗೆ ಇಂಧನವಾಗುತ್ತದೆ.
ಮಹಿಳೆಯರ ಛಲವನ್ನೇ ಕೇಂದ್ರವಾಗಿಟ್ಟುಕೊಂಡು ಬಡತನ, ಅಪಮಾನ, ಅಂಗವೈಕಲ್ಯ, ಶೋಷಣೆ, ಲಿಂಗ ಅಸಮಾನತೆಗಳಂತಹ ಸವಾಲುಗಳನ್ನು ಎದುರಿಸಿ ಜಯಿಸಿದ ಬೇರೆ ಬೇರೆ 46 ಕಥೆಗಳಿವೆ. ಇಲ್ಲಿರುವ ಕಥೆಗಳನ್ನು ಐದು ಭಾಗಗಳಲ್ಲಿ ವಿಶ್ಲೇಷಿಸುವುದಾದರೆ ಅಪಮಾನ, ಬಡತನ ಮತ್ತು ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಸಾಧಿಸಿದ ಆಶಾ ಕಂದ್ರೆ ಎಸ್.ಬಿ.ಐ ಯಲ್ಲಿ ಕಸ ಗುಡಿಸುತ್ತಲೇ ಅದೇ ಬ್ಯಾಂಕ್ ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರರಾದ ಕಥೆ, ತನ್ನ ಪತಿ ತೀರಿದ ನಂತರ ಅಂಬುಲೆನ್ಸ್ ಸೇವೆಯನ್ನು ಮುಂದುವರಿಸಿದ ಪುಷ್ಪಾಳ ಕಥೆ, ಹೀಗೆ ಹಲವಾರು ಅವಮಾನಗಳನ್ನು ಎದುರಿಸಿ ಗೆದ್ದವರ ಕಥೆಗಳು. ಇದರೊಂದಿಗೆ ವಿಕಲಚೇತನವನ್ನು ಮೆಟ್ಟಿ ನಿಂತು ಸಕಲಚೇತನರಾಗಿ ಯು.ಪಿ.ಎಸ್.ಸಿ, ಎಂ.ಬಿ.ಬಿ.ಎಸ್, ಸೈಕ್ಲಿಂಗುಗಳಂತಹ ಸಾಹಸಮಯ ಕ್ರೀಡೆಗಳಲ್ಲೂ ಯಶಸ್ವಿಯಾದವರ ಕಥೆಗಳಿವೆ. ಅಂಗವೈಕಲ್ಯಕ್ಕೆ ಸೋಲದೆ ಛಲದಿಂದ ಅಸಾಧ್ಯವನ್ನೂ ಸಾಧ್ಯ ಮಾಡಿದವರು.
ಪೂರ್ಣಾ ಯು.ಪಿ.ಎಸ್.ಸಿ ಯಲ್ಲಿನ ಸಾಧನೆ, ಡಾ.ಮಾರಿಯಾಬಿಜು ಎಂ.ಬಿ.ಬಿ.ಎಸ್ ಪಾಸಾದ, ಗೀತಾ ಎಸ್.ರಾವ್ ಸೈಕ್ಲಿಂಗ್ ಚಾಂಪಿಯನರಾದ ಅದ್ಭುತ ಉದಾಹರಣೆಗಳಿವೆ. ಪ್ರೀತಿ ಕಾರುಡಗಿಮಠ ಮತ್ತು ಪೂರ್ಣಿಮಾ ಏಳಬಾವಿಯoತಹವರು “ಮನಸ್ಸಿದ್ದರೆ ಮಾರ್ಗ” ವೆಂದು ಸವಾಲುಗಳನ್ನು ಸ್ವೀಕರಿಸಿ ಸಾಧಿಸಿ ತೋರಿಸಿದ್ದಾರೆ. ಬಡತನ, ಸಂಕಷ್ಟಗಳಿಂದ ಸ್ವಾವಲಂಬನೆಯೆಡೆಗೆ ಬದುಕು ಕಟ್ಟಿಕೊಂಡ ಕಥೆಗಳು ಭಾವನಾತ್ಮಕವಾಗಿವೆ. ರೋಹಿಣಿ ಬಾಜಿ ಬಾಕ್ರೆ ,ಸ್ಮಶಾನದಲ್ಲಿ ಕೆಲಸದಿಂದ ಸ್ವಾವಲಂಬಿಯಾದ ನೀಲಮ್ಮ ,ಯಶೋದಾ ಪಿಎಸ್ಐಯಾದ ಕಥೆಗಳು ಕಠಿಣ ಪರಿಶ್ರಮದ ಉದಾಹರಣೆಯ ಕಥೆಗಳಾಗಿವೆ. ಹೆಣ್ಣುಗಳಿಗೆ ಇದು ಸಾಧ್ಯವಿಲ್ಲ” ವೆನ್ನುವ ಲಿಂಗ ತಾರತಮ್ಯ ಮುರಿದು ಹೊಸ ಕ್ಷೇತ್ರಗಳಲ್ಲಿ ಮುನ್ನುಗ್ಗಿದ ಕಥೆಗಳು. ಸುರೇಖಾ ಯಾದವ್ (ಮೊದಲ ಮಹಿಳಾ ಲೋಕೋಪೈಲಟ್), ವೀರಲಕ್ಷ್ಮಿ (108 ಆಂಬ್ಯುಲೆನ್ಸ್ ಚಾಲಕಿ), ಮಿಥಾಲಿ ರಾಜ್ (ಸೇನಾ ಶೌರ್ಯ ಪ್ರಶಸ್ತಿ) ಮಾತುಂಗಾ, ಗಾಂಧಿನಗರ ನಿಲ್ದಾಣಗಳು, ಎನ್. ಅಂಬಿಕಾ ಐ.ಪಿ.ಎಸ್ ರಾಗಿರುವ ಕಥೆಗಳು ಮಹಿಳೆಯರ ಸಂಕಲ್ಪ ಸಾಕಾರಗೊಂಡ ಕಥೆಗಳಾಗಿವೆ.   
ಒಂದು ಸಂಕಲ್ಪ ಹೇಗೆ ಸಮಾಜದ ಪರಿವರ್ತನೆಗೆ ಕಾರಣವಾಯಿತುವೆನ್ನುವ ವೃಕ್ಷಮಾತೆ (50 ಹೆಕ್ಟೇರ್ ಅರಣ್ಯ ಉಳಿಸಿದ), ಪಿಪ್ಲಾಂತ್ರಿ ಗ್ರಾಮ (ಹೆಣ್ಣುಮಕ್ಕಳಿಗೆ ಸಸಿಗಳು), ಗುಲಾಬಿ ಗ್ಯಾಂಗ್ ಗೌರಿ, ಚಂದ್ರಶೇಖರ 60 ಅಡಿ ಬಾವಿ ತೋಡಿ ಸ್ವಾವಲಂಬನೆಗೆ ಉದಾಹರಣೆಯಾದರೆ, ಕುಣಿಕೇರಿಯ ಹುಚ್ಚಮ್ಮ ಅವರ ಭೂಮಿ ದಾನದ ಕಥೆ, ಪುಟ್ಟಮ್ಮಜ್ಜಿ ಅಕ್ಷರ ದಾಸೋಹಿಯಾದ ಸಮಾಜಮುಖಿ ಕಥೆಗಳಾಗಿವೆ.
ಶ್ರೀ ಸಂತೋಷ ತಮ್ಮಯ್ಯರವರ ಮುನ್ನುಡಿಯಲ್ಲಿ ಪ್ರಸ್ತಾಪಿಸಿದಂತೆ ಸ್ತ್ರೀಶಕ್ತಿ ಒಳಗಿನ ಅಗ್ನಿ ಉರಿಯುವಂತಾಗಬೇಕು, ಅಂತಹ ಬೆಳಕಿನಲ್ಲಿ ಜಗತ್ತು ಇನ್ನಷ್ಟು ಪ್ರಜ್ವಲಿಸಬೇಕು ಎನ್ನುವ ಆಶಯವನ್ನು ಲೇಖಕರು ಕಥಾನಕಗಳಲ್ಲಿ ಸಮರ್ಥವಾಗಿ ಕಥೆಗಳಲ್ಲಿ ಚಿತ್ರಿಸಿದ್ದಾರೆ.  
ಲೇಖಕರ ಕಥಾ ನಿರೂಪಣೆ ಬೇರೆ ಭಾಷೆಯಲ್ಲಿರುವ ಕಥೆಗಳನ್ನು ಅಧ್ಯಯನಗೈದು ಸಾಧಕರ ಕಥೆಗಳಿಗೆ ಧಕ್ಕೆ ಬರದಂತೆ ನಿರೂಪಿಸಿರುವುದು ವಿಶೇಷತೆಯಾಗಿದೆ.
ಸೋಲುಗಳನ್ನು ಹೆಚ್ಚು ವೈಭವೀಕರಿಸುವ ನಮ್ಮ ಸಮಾಜದಲ್ಲಿ ಇಂತಹ ಪ್ರೇರಣದಾಯಕ ಕೃತಿಗಳು ಸಣ್ಣ ಸೋಲುಗಳಿಗೂ ಹತಾಶರಾಗುವ ಮಹಿಳೆಯರಿಗೆ ಹೋರಾಟದ ಸ್ಪೂರ್ತಿ ಪ್ರೇರಣೆಗಳನ್ನು ತುಂಬಬಲ್ಲವು.
ಬದುಕಿನಲ್ಲಿ ಅನಿರೀಕ್ಷಿತವಾಗಿ ಅಪಘಾತ ಹಾಗೂ ಆಘಾತಗಳು ಸಂಭವಿಸಿದಾಗ ಇನ್ನೇನು ಬದುಕು ಮುಗೀತು ಎಂದು ನಿರಾಶರಾಗದೆ ಛಲದಿಂದ ಇನ್ನಷ್ಟು ಸಾಧನಾ ಪೂರ್ವಕದೊಂದಿಗೆ ಇತರರಲ್ಲಿ ಭರವಸೆಯ ದೀಪ ಹಚ್ಚುತ್ತಾ ಶಿವನಗೌಡರು ಸಾಗುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನವಲಹಳ್ಳಿ ಗ್ರಾಮದವರಾದ ಶಿವನಗೌಡರು ತಮ್ಮ ಸ್ನಾತಕೋತ್ತರ ಪದವಿಯ ನಂತರ ಉಪನ್ಯಾಸಕರಾಗಿ , ವಿದ್ಯಾರ್ಥಿಗಳ ಮಾರ್ಗದರ್ಶಿಯಾಗಿ ಕಲ್ಯಾಣ ಕರ್ನಾಟಕದಲ್ಲಿಯೇ ಸುಮಾರು 1600ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಐದು ನೂರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. ಸಂಘ ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಶಿಕ್ಷಕರ ಪಾಲಕರ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ರಕ್ತದಾನ ಜೀವದಾನವೆಂದು ಧ್ಯೇಯವಾಗಿಸಿಕೊಂಡು ಜಿಲ್ಲೆಯಲ್ಲಿಯೇ ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿ ಎನಿಸಿಕೊಂಡಿದ್ದಾರೆ ಕರ್ನಾಟಕ ರಾಜ್ಯ ಸರ್ಕಾರದ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಇಲಾಖೆಯವರು 2022-23ರ ಸಾಲಿನ ಅತ್ಯುತ್ತಮ ವಿಕಲಚೇತನ ಸಾಧಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ 

ಅಂತರ್ಯದ ಬೆಳಕು[ ಕವನ ಸಂಕಲನ ], ಮಳೆ ಮಲ್ಲೇಶ್ವರದ ಪರಿಚಯ ಸುಭಾಷಿತಗಳು , ಕೃತಿಗಳನ್ನು ಪ್ರಕಟಿಸಿ ಓದುಗರ ಮೆಚ್ಚುಗೆಗೆ ಪಾತ್ರರಾಗಿರುವ ಪಾಟೀಲರು ಲೋಕಧ್ವನಿ, ಉದಯಕಾಲ, ಕರ್ಮವೀರ, ವಿಕ್ರಮ, ಕನ್ನಡ ಪ್ರಭಗಳಂತಹ ಪತ್ರಿಕೆಯಲ್ಲಿ ಅಂಕಣಕಾರರಾಗಿ ಕೂಡ ತಮ್ಮ ವೈವಿಧ್ಯಮಯ ವಿಚಾರಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಸಾಹಿತ್ಯದಲ್ಲಿ ಪ್ರೇರಣಾತ್ಮಕ ಬರಹಗಳ ಸಾಲಿನಲ್ಲಿ ಗಮನಾರ್ಹ ಸ್ಥಾನ ಪಡೆದುಕೊಳ್ಳುತ್ತಿವೆ. ಇಂತಹ ಹಲವಾರು ಕೃತಿಗಳು ಕನ್ನಡ ಭಾಷೆಯಲ್ಲಿ ಬರುತ್ತಿರುವುದು ಓದುಗರಿಗೆ ಸ್ಪೂರ್ತಿ ಪ್ರೇರಣೆಯನ್ನು ತರಬಲ್ಲದು. ಲೇಖಕರು ಆಯ್ಕೆ ಮಾಡಿಕೊಂಡ ಕಥೆಗಳ ಹಿನ್ನೆಲೆ ವೈವಿಧ್ಯಮಯವಾಗಿದೆ ನಿರೂಪಣಾ ಶೈಲಿಯಲ್ಲಿ ಒಂದಿಷ್ಟು ಹೆಚ್ಚಿನ ವಿವರಣೆಯೊಂದಿಗೆ ನಿರೂಪಣೆಯನ್ನು ಮಾಡಬಹುದಾಗಿತ್ತು.  
ಮನುಷ್ಯನ ಬದುಕೆ ಒಂದು ಸವಾಲಿನ ಪಯಣ ಎಲ್ಲರಿಗೂ ಎಲ್ಲಾ ರೀತಿಯ ಸವಾಲುಗಳಿವೆ ಸವಾಲುಗಳನ್ನ ತಮ್ಮ ಛಲದೊಂದಿಗೆ ಮೆಟ್ಟಿ ನಿಲ್ಲುವುದೇ ಅದುವೇ ಬದುಕಿನ ಸೌಂದರ್ಯವಾಗಿದೆ. ಯಾವುದೇ ಉತ್ಪೇಕ್ಷೆಯಿಲ್ಲದೆ ಅತಿಯಾದ ಉಪಯೋಗಗಳನ್ನು ಬಳಸದೆ ಚಿಕ್ಕ ಚಿಕ್ಕ ಕಥೆಗಳನ್ನು ಒಂದು ಸಾಹಿತ್ಯಕ ಚೌಕಟ್ಟು ನೀಡುವ ಮೂಲಕ ರಚಿಸಿದ್ದಾರೆ. ಬದುಕಿನ ವಾಸ್ತವಿಕ ಸವಾಲುಗಳು ನಮ್ಮ ಕಲ್ಪನೆಗಳಿಗೂ ಮೀರಿದ್ದಾಗಿರುತ್ತವೆ. ಅಂತಹ ಸವಾಲುಗಳನ್ನು ಎದುರಾದಾಗ ಮಾತ್ರ ಸವಾಲಿನ ತೀಕ್ಷ್ಣತೆ ಹಾಗೂ ತೀವ್ರತೆ ಅರ್ಥವಾಗುತ್ತದೆ. ಅಂತಹದೇ ಸವಾಲುಗಳನ್ನ ಎದುರಿಸಿ ಜಯಸಿದ ಸಾಧಕೀಯರ ಕಥೆಗಳನ್ನು ಓದುವುದೇ ಒಂದು ರೋಮಾಂಚನಕಾರಿ ಅನುಭವವಾಗಿದೆ 
ಬದುಕಿನಲ್ಲಿ ಒಂದು ಸಂದೇಶ ಒಂದು ಕಥೆ ಒಬ್ಬ ವ್ಯಕ್ತಿ ಅಥವಾ ಒಂದು ಸ್ಪಂದನೆ, ಪ್ರೇರಣೆ ಸ್ಪೂರ್ತಿಗಳು ಆಕಾಶದೆತ್ತರದ ಸಾಧನೆಗೆ ಕಾರಣವಾಗಬಹುದು. ಅಂತಹ 45ಕ್ಕೂ ಹೆಚ್ಚಿನ ಪ್ರೇರಣದಾಯಕ ಕಥೆಗಳು ಈ ಕೃತಿಯಲ್ಲಿವೆ ಇಂತಹ ಕೃತಿಗಳು ವಿಶೇಷವಾಗಿ ಪ್ರೌಢ ವಿದ್ಯಾಭ್ಯಾಸದಲ್ಲಿರುವ ವಿದ್ಯಾರ್ಥಿನಿಯರಿಗೆ ಬದುಕಿನ ಮಾರ್ಗದರ್ಶಿಯಾಗಬಹುದು.

– ಶ್ರೀ ಶರಣಬಸಪ್ಪ.ಚ.ಬಿಳೆಯಲಿ
ಅರ್ಥಶಾಸ್ತ್ರ ಉಪನ್ಯಾಸಕರು, ಕೊಪ್ಪಳ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!