
ಇದೇ ವರ್ಷದ ನವೆಂಬರ್ ತಿಂಗಳಲ್ಲಿ ಸಿಂಗಾನಲ್ಲೂರು ಗ್ರಾಮದಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಪುತ್ಥಳಿ ಅನಾವರಣ: ಶಾಸಕ ಎಂ.ಆರ್. ಮಂಜುನಾಥ್ ಸಹಕಾರದೊಂದಿಗೆ ಅದ್ಧೂರಿ ಕಾರ್ಯಕ್ರಮ
ಹನೂರು: ತಾಲೂಕಿನ ಸಿಂಗಾನಲ್ಲೂರು ಗ್ರಾಮದಲ್ಲಿ ಕರ್ನಾಟಕ ರತ್ನ, ಅಗಲಿದ ನಟ ಡಾ. ಪುನೀತ್ ರಾಜ್ಕುಮಾರ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮವು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಲಿದೆ. ಹನೂರು ಕ್ಷೇತ್ರದ ಜನಪ್ರಿಯ ಶಾಸಕರಾದ ಎಂ.ಆರ್. ಮಂಜುನಾಥ್ ಅವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ವಿಶೇಷತೆಗಳು:
ಈ ವೇದಿಕೆಯು ಕೇವಲ ಪುತ್ಥಳಿ ಅನಾವರಣಕ್ಕೆ ಸೀಮಿತವಾಗದೆ, ಸಾಮಾಜಿಕ ಕಳಕಳಿಯ ವಿವಿಧ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದೆ. ಅಂದು ಪುತ್ಥಳಿ ಅನಾವರಣದ ಜೊತೆಗೆ ಸಾಮೂಹಿಕ ವಿವಾಹ, ಷಷ್ಠಿ ಪೂರ್ತಿ ಕಾರ್ಯಕ್ರಮ, ಹಾಗೂ ನಾಡಿನ ಅನ್ನದಾತರಾದ ರೈತರಿಗೆ, ದೇಶ ಕಾಯುವ ಯೋಧರಿಗೆ ಮತ್ತು ಸಮಾಜದ ರಕ್ಷಕರಾದ ಪೊಲೀಸರಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಕಲಾಭಿಮಾನಿಗಳಿಗಾಗಿ ಅದ್ದೂರಿ ಮ್ಯೂಸಿಕಲ್ ನೈಟ್ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಪ್ರಮುಖರು ಭಾಗವಹಿಸಲಿದ್ದಾರೆ. ಸಿಂಗಾನಲ್ಲೂರು ಸುತ್ತಮುತ್ತಲಿನ ಸಾವಿರಾರು ಅಭಿಮಾನಿಗಳು ಹಾಗೂ ಸಾರ್ವಜನಿಕರು ಈ ಸಂಭ್ರಮಕ್ಕೆ ಸಾಕ್ಷಿಯಾಗುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ವರದಿ ಉಸ್ಮಾನ್ ಖಾನ್




















