ಬಳ್ಳಾರಿ / ಕಂಪ್ಲಿ : ಸ್ಥಳೀಯ ಜೆಸ್ಕಾಂ ಕಛೇರಿ ಆವರಣದಲ್ಲಿ 2025-26ನೇ ಸಾಲಿನ ಜೆಸ್ಕಾಂ ಯೋಜನೆಯಡಿಯ ಸುಮಾರು 150 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ನೂತನ ಕಛೇರಿ ಕಟ್ಟಡ ನಿರ್ಮಾಣ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಶಾಸಕ ಗಣೇಶ ಮಾತನಾಡಿ, ಸಾರ್ವಜನಿಕರಿಗೆ ನೂತನ ಉಪವಿಭಾಗ ಕೇಂದ್ರವು ಜೆಸ್ಕಾಂನ ಹತ್ತು ಹಲವು ಸೇವೆಗಳನ್ನು ತ್ವರಿತವಾಗಿ ಒದಗಿಸಲು ನೆರವಾಗುವ ಜೊತೆಗೆ ವಿದ್ಯುತ್ ಪೂರೈಕೆ ಮತ್ತು ಮೂಲಸೌಕರ್ಯ ಕಲ್ಪಿಸಿಕೊಳ್ಳುವುದಕ್ಕೂ ಅನುಕೂಲವಾಗಲಿದೆ. ಇಲ್ಲಿನ ಕಟ್ಟಡ ನಿರ್ಮಾಣದಿಂದ ಸಾರ್ವಜನಿಕರಿಗೆ ಇನ್ನಷ್ಟು ತ್ವರಿತವಾಗಿ ಸೇವೆ ಲಭ್ಯವಾಗಲಿದೆ. ಕಂಪ್ಲಿ ತಾಲೂಕು ಕೇಂದ್ರದಲ್ಲಿ ಜೆಸ್ಕಾಂ ಉಪ ವಿಭಾಗದ ಕಛೇರಿ ಅತ್ಯವಶ್ಯಕವಾಗಿತ್ತು. ಆದ್ದರಿಂದ ಈಗ ಇಲ್ಲಿನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇಲ್ಲಿನ ಉಪ ವಿಭಾಗ ಕಛೇರಿಯಿಂದ ಪಟ್ಟಣ ಸೇರಿದಂತೆ ತಾಲೂಕಿನ ಗ್ರಹಕರಿಗೆ ಹಾಗೂ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ. ವಿದ್ಯುತ್ ಸಂಬಂಧಿಸಿದ ಬೇಡಿಕೆಗಳನ್ನು ಸ್ಥಳೀಯವಾಗಿ ಈಡೇರಿಸಿಕೊಳ್ಳಬಹುದಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಿರ್ಮಾಣ, ನಿರ್ವಹಣೆ, ಮತ್ತು ದುರಸ್ತಿ ಕಾಮಗಾರಿಗಳ ಮೇಲ್ವಿಚಾರಣೆ ಮಾಡಲು ಸಹ ಅನುಕೂಲವಾಗುತ್ತದೆ ಎಂದರು.
ನಂತರ ಬಳ್ಳಾರಿ ಗ್ರಾಮೀಣ ಉಪ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಹುಸೇನ್ ಸಾಬ್ ಮಾತನಾಡಿ, ಕಂಪ್ಲಿ ಜೆಸ್ಕಾಂನ ಹಳೇ ಕಛೇರಿಯಲ್ಲೇ ಉಪ ವಿಭಾಗದ ಕಛೇರಿ ನಡೆಸಲಾಗುತ್ತಿತ್ತು. ಆದರೆ, ಈಗ ಸರ್ಕಾರವೂ ಬಜೆಟ್ನಲ್ಲಿ ಕೋಟ್ಯಾಂತರ ಅನುದಾನ ಬಿಡುಗಡೆಗೊಳಿಸಿದ್ದು, ಇದರಿಂದ ಕಂಪ್ಲಿ ಮತ್ತು ಕುರುಗೋಡಿನಲ್ಲಿ ಉಪ ವಿಭಾಗದ ಕಛೇರಿ ಕಟ್ಟಡಕ್ಕೆ ಚಾಲನೆ ಸಿಕ್ಕಿದೆ. ಒಂದು ವರ್ಷದೊಳಗೆ ಕಾಮಗಾರಿ ಮುಗಿಯಲಿದೆ. ತಾಂತ್ರಿಕತೆಯ ಮೂಲಕ ಇನ್ನಷ್ಟು ವಿದ್ಯುತ್ಕರಣ ಮತ್ತು ಸುಂದರೀಕರಣ ಮಾಡಬೇಕು. ಮತ್ತು ಸಿಂಧನೂರಿನಲ್ಲಿ ಹಾಕಿರುವ ಸ್ಪನ್ ಪೋಲ್ ಮಾದರಿಯಲ್ಲೇ ಕಂಪ್ಲಿ ಕ್ಷೇತ್ರಾದ್ಯಂತ ಅಳವಡಿಸಲು ಅಂದಾಜು ಪಟ್ಟಿ ಕ್ರಿಯಾಯೋಜನೆ ತಯಾರಿಸಿ ಕೊಟ್ಟರೆ, ಸರ್ಕಾರದಿಂದ ಅನುದಾನ ತರಲಾಗುವುದೆಂದು ಮಾನ್ಯ ಶಾಸಕ ಗಣೇಶ ಸೂಚಿಸಿದ್ದಾರೆ. ಆದ್ದರಿಂದ ಸುಮಾರು 10 ಕೋಟಿಯ ಅಂದಾಜು ಪಟ್ಟಿ ತಯಾರಿಸಿ ನೀಡಲಾಗುವುದು. ಸ್ಪನ್ ಪೋಲ್ ಅಳವಡಿಕೆಯಿಂದ ಪಟ್ಟಣ ಮತ್ತು ಗ್ರಾಮೀಣ ಭಾಗದ ಕಿರಿದಾಗ ಓಣಿಗಳಲ್ಲಿ ಹಾಗೂ ಅಕ್ಕಪಕ್ಕದಲ್ಲಿರುವ ವಿದ್ಯುತ್ ಕಂಬ, ತಂತಿಗಳಿಂದ ಸಂಭವಿಸುವ ಅಪಘಾತ, ಅವಘಡಗಳಿಗೆ ಬಹುತೇಕವಾಗಿ ಮುಕ್ತಿ ಸಿಗಲಿದೆ. ಸ್ಪನ್ ಪೋಲ್ ವ್ಯವಸ್ಥೆಯು ಆಧುನಿಕ ಕಾಂಕ್ರೀಟ್ ವಿದ್ಯುತ್ ಕಂಬಗಳ ತಯಾರಿಕಾ ತಂತ್ರಜ್ಞಾನವಾಗಿದೆ. ಕಂಪ್ಲಿ ತಾಲೂಕಿನಲ್ಲಿ ವಿದ್ಯುತ್ ಇನ್ಸುಲೇಟೆಡ್ ಕಾಂಟ್ಯಾಕ್ಟ್ ಮಾಡುವ ಗುರಿ ಹೊಂದಲಾಗಿದೆ. ಇದರಲ್ಲಿ ಎಬಿ ಕೇಬಲ್ ಮತ್ತು ಕವರ್ಡ್ ಕಂಡಕ್ಟರ್ಗಳನ್ನು ಸೂಕ್ತ ಸ್ಥಳದಲ್ಲಿ ಅಳವಡಿಸಲಾಗುವುದು. ಇದರಿಂದ ವಿದ್ಯುತ್ ಸರ್ಕ್ಯೂಟ್ಗಳಲ್ಲಿ ಸುರಕ್ಷತೆ ಮತ್ತು ನಿಯಂತ್ರಣಕ್ಕಾಗಿ ಬಳಸಬಹುದಾಗಿದೆ. ಜೆಸ್ಕಾಂ ನೌಕರರ ವಸತಿ ಗೃಹಗಳು ಶಿಥಿಲಗೊಂಡಿರುವುದು ಗಮನಕ್ಕೆ ಬಂದಿದ್ದು, ಪ್ರಪೋಸಲ್ ನೀಡಿದ ತಕ್ಷಣ ಸ್ಥಳೀಯ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಿ, ಮುಂದಿನ ದಿನದಲ್ಲಿ ಹೊಸದಾಗಿ ವಸತಿ ಗೃಹಗಳ ನಿರ್ಮಾಣಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ಕಂಪ್ಲಿ ತಾಲೂಕು ಅಧ್ಯಕ್ಷ ಕೆ.ಶ್ರೀನಿವಾಸರಾವ್, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ, ಬಳ್ಳಾರಿಯ ಕಾರ್ಯನಿರ್ವಾಹಕ ಅಭಿಯಂತರ ಮೈನುದ್ಧೀನ್, ಸಹಾಯಕ ಕಾರ್ಯನಿರ್ವಾಹಕರಾರ ಶ್ರೀನಿವಾಸ ಪ್ರಸಾದ್, ಶೇಖ್ ಜಾಫರ್ ಮಹಮ್ಮದ್, ಎಇ ವಿನೋದ್ ಕುಮಾರ, ಭೀಮೇಶ, ಜೆಇ ಟಿ.ಮಹಾಂತೇಶ, ಮಹಮ್ಮದ್ ಶಮಿವುಲ್ಲಾ, ಮುಖಂಡರಾದ ಕೆ.ಸುಧಾಕರ, ಜಾಫರ್, ಅಕ್ಕಿ ಜಿಲಾನ್, ರಾಕೇಶ, ಹೊನ್ನಳ್ಳಿ ಶ್ರೀದೇವಿ, ಜೆಸ್ಕಾಂ ಲೈನ್ ಮ್ಯಾನ್ ಗಳಾದ ಬಿ.ಶ್ರೀನಿವಾಸ, ವೆಂಕಟಚಲಂ, ಸಿ.ರಾಜ, ಎನ್.ಉಮೇಶ, ವಿದ್ಯುತ್ ಗುತ್ತಿಗೆದಾರ ಸಿ.ಡಿ.ರಾಜಶೇಖರ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















