
ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರಿನ ಗ್ರಾಮದ ಶತಮಾನದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕರ್ನಾಟಕ ಪಬ್ಲಿಕ್ ಪ್ರೌಢಶಾಲೆ ಯಲ್ಲಿ 2005- 2006 ನೇ ಸಾಲಿನ ವಿದ್ಯಾರ್ಥಿಗಳು ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಶತಮಾನದ ಸರ್ಕಾರಿ ಶಾಲೆಯಿಂದ ಕರ್ನಾಟಕ ಪಬ್ಲಿಕ್ ಶಾಲೆವರೆಗೂ ನೆಚ್ಚಿನ ಗುರುಗಳಿಗೆ ಅದ್ದೂರಿ ಮೆರವಣಿಗೆಯ ಮೂಲಕ ಸ್ವಾಗತ ಕೋರಿದರು.
ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಕರು ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಸಮಾರಂಭದ ಉದ್ದಕ್ಕೂ ಹಲವು ನೆನಪುಗಳನ್ನು ಮೆಲುಕು ಹಾಕಲಾಯಿತು.
ಹಳೆಯ ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸಿದ ಎಲ್ಲಾ ಗುರುಗಳಿಗೆ ಸನ್ಮಾನ ಮಾಡುವ ಮೂಲಕ ಗುರುಭಕ್ತಿ ಮೆರೆದರು.
ತಮಗೆ ಅಕ್ಷರ ಕಲಿಸಿದ ಶಿಕ್ಷಕರನ್ನ ಹಲವು ವರ್ಷಗಳ ನಂತರ ಕಂಡ ವಿದ್ಯಾರ್ಥಿಗಳು ಸಂತಸ ಪಟ್ಟರು .
ವಿದ್ಯಾರ್ಥಿಗಳ ಪ್ರೀತಿಯನ್ನು ಕಂಡ ಶಿಕ್ಷಕರ ಕಣ್ಣಂಚಿನಲಿ ಆನಂದ ಭಾಷ್ಪ ಮಿಂದೆದ್ದಿತು.
ದೈಹಿಕ ಶಿಕ್ಷಕ ಆಂಜನೇಯ ಮಾತನಾಡಿ ಹಳೇ ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸಿದ ಶಿಕ್ಷಕರನ್ನು ಸ್ಮರಿಸಿ ಗುರುವಂದನೆ ಕಾರ್ಯಕ್ರಮ ಕೈಗೊಂಡಿದ್ದು ನಿಜಕ್ಕೂ ಸಂತಸ ತಂದಿದೆ. ಬಾಲ್ಯದಲ್ಲಿ ವಿದ್ಯೆ ಕಲಿಯುವಾಗ ಸಾಕಷ್ಟು ಮಕ್ಕಳಿಗೆ ಗುರುಗಳ ಶ್ರಮದ ಬಗ್ಗೆ ಅರಿವಿರುವುದಿಲ್ಲ. ಮಕ್ಕಳ ಭಾವನೆಯಲ್ಲಿ ಗುರುಗಳೆಂದರೆ ಕೇವಲ ಶಿಕ್ಷಿಸುವ ಹಾಗೂ ದೈನಂದಿನ ಪಠ್ಯ ಬೋಧಿಸುವರೆಂದೇ ಭಾವಿಸಿರುತ್ತಾರೆ. ಹತ್ತಾರು ವರ್ಷ ಕಳೆದಾಗ ಶಿಕ್ಷಕರ ಶ್ರಮ ಮತ್ತು ಮಹತ್ವ ಅರಿತು ಗೌರವಿಸುತ್ತಾರೆ ಎಂದರು.
ನಿವೃತ್ತ ಶಿಕ್ಷಕ ಗುರುಮೂರ್ತಿ ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ಇಂದಿನ ಜನ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುವಂತಹ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಇಂತಹ ಕಾರ್ಯಕ್ರಮ ಇಂದಿನ ದಿನಗಳಲ್ಲಿ ಅಗತ್ಯವಿದೆ. ಆ ಮೂಲಕ ಬಾಲ್ಯದ ನೆನಪುಗಳನ್ನು ಮತ್ತೆ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.
ನಂತರ ಎಲ್ಲಾ ಶಿಕ್ಷಕರು ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಹಳೆ ವಿದ್ಯಾರ್ಥಿ ಹೆಚ್ . ಮರಿಯಪ್ಪ ಮಾತನಾಡಿ ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜೊತೆಗಿರುತ್ತದೆ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಗುರುಗಳ ಸೇವೆಯನ್ನು ಮುಕ್ತಕಂಠದಿಂದ ಹೊಗಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ
ಆಂಜಿನಯ್ಯ, ವೀರಭದ್ರಪ್ಪ, ಗುರುಮೂರ್ತಿ, ಶ್ರೀನಿವಾಸ, ವಿ. ಶ್ರೀನಿವಾಸ, ಶಂಭುಲಿಂಗ, ರವಾತಪ್ಪ, ಕುಮಾರ್ ಸ್ವಾಮಿ, ಜಾತಪ್ಪ, ರವಿಕುಮಾರ್, ಕರಿಬಸಪ್ಪ, ಹನುಮಂತ ರೆಡ್ಡಿ, ರಹಮತುಲ್ಲ, ಮಹಮ್ಮದ್ ರಫಿಕ್, ಚನ್ನ ಬಸಪ್ಪ, ಗಿರಿಜಮ್ಮ, ಧನಲಕ್ಷ್ಮಿ, ಗಾಯತ್ರಿ, ಕರುಣಾ ಜ್ಯೋತಿ, ಹಾಸ್ಟೆಲ್ ವಾರ್ಡನ್ ವಿ. ರಾಮಣ್ಣ, ಡಿ ಗ್ರೂಪ್ ಜಂಬಣ್ಣ ಇವರನ್ನು ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.
2005- 06 ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















