
ಬಳ್ಳಾರಿ / ಕಂಪ್ಲಿ : ಸ್ಥಳೀಯ ಪತ್ರಿಕೋದ್ಯಮಕ್ಕೆ ಡಿಜಿಟಲ್ ಸ್ಪರ್ಶ ನೀಡುವ ಮಹತ್ವದ ಹೆಜ್ಜೆಯಾಗಿರುವ ‘ಭಾವೈಕ್ಯ ಕನ್ನಡ’ ಸುದ್ದಿ ವೆಬ್ಸೈಟ್ ಅನ್ನು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರು ಶುಕ್ರವಾರ ಶಾಸಕರ ಕಚೇರಿಯಲ್ಲಿ ಅಧಿಕೃತವಾಗಿ ಲೋಕಾರ್ಪಣೆ ಮಾಡಿದರು. ಎರಡು ದಶಕಗಳಿಗೂ ಹೆಚ್ಚು ಕಾಲ ಮುದ್ರಣ ಮಾಧ್ಯಮದ ಮೂಲಕ ಸಾರ್ವಜನಿಕ ಸೇವೆ ಸಲ್ಲಿಸಿರುವ ಭಾವೈಕ್ಯ ಎಂದೇ ಪ್ರಸಿದ್ದಿ ಪಡೆದಿರುವ ಭಾವೈಕ್ಯ ವೆಂಕಟೇಶ್ ರವರ ಹೊಸ ಡಿಜಿಟಲ್ ಪ್ರಯತ್ನಕ್ಕೆ ಶಾಸಕ ಜೆ.ಎನ್. ಗಣೇಶ್ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸುಮಾರು 22 ವರ್ಷಗಳಿಂದ ಭಾವೈಕ್ಯ ಪತ್ರಿಕೆಯ ಮೂಲಕ ಜನಸೇವೆ ಮಾಡುತ್ತಿರುವ ಭಾವೈಕ್ಯ ವೆಂಕಟೇಶ್ ಅವರು ಕಾಲಾನುಗುಣವಾಗಿ ಡಿಜಿಟಲ್ ಮಾಧ್ಯಮದತ್ತ ಹೆಜ್ಜೆ ಇಟ್ಟಿರುವುದು ಸಂತಸ ತಂದಿದೆ. ಇಂದಿನ ವೇಗದ ಯುಗದಲ್ಲಿ ಸುದ್ದಿ ತಲುಪುವ ವಿಧಾನ ಬದಲಾಗಿದ್ದು, ‘ಭಾವೈಕ್ಯ ಕನ್ನಡ’ ಸ್ಥಳೀಯದಿಂದ ಜಾಗತಿಕ ಮಟ್ಟದ ವರಗಿನ ಸುದ್ದಿಗಳನ್ನು ಜನರಿಗೆ ಸಕಾಲದಲ್ಲಿ ತಲುಪಿಸುವ ಶಕ್ತಿಶಾಲಿ ವೇದಿಕೆಯಾಗಲಿ,
ಸ್ಥಳೀಯ ಸಮಸ್ಯೆಗಳು, ಜನಸಾಮಾನ್ಯರ ಧ್ವನಿ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದ ಶಾಸಕ ಜೆ.ಎನ್. ಗಣೇಶ್, “ಭಾವೈಕ್ಯ ಕನ್ನಡ ಟೀಮ್ ಸಮಾಜದ ನಾಡಿ ಮಿಡಿತವಾಗಿ ಕೆಲಸ ಮಾಡಿ, ಜನಮನ ಗೆಲ್ಲುವ ಮಾಧ್ಯಮವಾಗಲಿ” ಎಂದು ಶುಭ ಕೋರಿದರು.
ಮುದ್ರಣ ಮಾಧ್ಯಮದಲ್ಲಿ ವಿಶ್ವಾಸಾರ್ಹತೆ ಗಳಿಸಿರುವ ಭಾವೈಕ್ಯ ಕನ್ನಡ ಇದೀಗ ಡಿಜಿಟಲ್ ವೇದಿಕೆಗೆ ಕಾಲಿಟ್ಟಿರುವುದು ಕಂಪ್ಲಿ ಭಾಗದ ಪತ್ರಿಕೋದ್ಯಮದಲ್ಲಿ ಹೊಸ ಅಧ್ಯಾಯ ಆರಂಭವಾದಂತೆ ಕಂಡುಬಂದಿದೆ. ಈ ವೆಬ್ಸೈಟ್ ಸ್ಥಳೀಯ, ರಾಜ್ಯ, ದೇಶ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳನ್ನು ಒಂದೇ ವೇದಿಕೆಯಲ್ಲಿ ಜನರಿಗೆ ತಲುಪಿಸುವ ಉದ್ದೇಶ ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಭಟ್ಟ ಪ್ರಸಾದ್, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಶುಣ್ಮುಖ ದೇವಸಮುದ್ರ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೈ ಲೋಕರಾಜ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಂಗಿ ದೊಡ್ಡ ಮಂಜುನಾಥ್, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ಧಿ ರಘುವೀರ್, ಪತ್ರಕರ್ತರಾದ ಯಮನಪ್ಪ, ರವಿ ಮಣ್ಣೂರು, ಅಲ್ಪಸಂಖ್ಯಾತರ ಘಟಕದ ಮಸ್ತಾನ್ ಸಾಬ್, ನಬಿಸಾಬ್, ಯುವ ಘಟಕದ ಅಧ್ಯಕ್ಷ ಶಶಿಕುಮಾರ್, ಲಿಂಗಾಯಿತ ಸಮಾಜದ ಮುಖಂಡ ಶರಣನಗೌಡ, ಪ್ರಮುಖರಾದ ಉಡುಚಪ್ಪ, ರಾಮ ಸಂಕಟಿ, ವಾಸು, ಬಸವರಾಜ ಬಡಿಗಿ, ಮೇಘರಾಜ ಗೌಡ ಸೇರಿದಂತೆ ಹಲವಾರು ಗಣ್ಯರು ಮತ್ತು ಮುಖಂಡರು ಭಾಗವಹಿಸಿ ಭಾವೈಕ್ಯ ಕನ್ನಡ ತಂಡಕ್ಕೆ ಶುಭ ಹಾರೈಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















