ಬಳ್ಳಾರಿ / ಕಂಪ್ಲಿ: ಪಂಚ ಗ್ಯಾರಂಟಿ ಯೋಜನೆಗಳಿಂದ ನಾಡಿನ ಸಾಕಷ್ಡು ಬಡ, ಮಧ್ಯಮ ವರ್ಗದ ಜನರ ಬದುಕು ನೆಮ್ಮದಿಯಿಂದ ಕೂಡಿದೆ. ಆದರೆ, ನಾಚಿಕೆ, ಮಾನ ಮರ್ಯಾದೆ ಇಲ್ಲದ ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಕುಂಠಿತವಾಗುತ್ತಿದೆ ಎನ್ನುವ ಆರೋಪ ಮಾಡುತ್ತಿದ್ದಾರೆ. ರಾಜ್ಯದ ಗ್ಯಾರಂಟಿಗಳನ್ನೇ ಕಾಪಿ ಮಾಡಿ, ಬೇರೆ ಬೇರೆ ರಾಜ್ಯಗಳಲ್ಲಿ ಕಾರ್ಯಗತಗೊಳಿಸುತ್ತಿದ್ದಾರೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ಪಟ್ಟಣದ 17ನೇ ವಾರ್ಡಿನ ವೀರತ್ ಪೇಟೆಯ ಶ್ರೀಬಸವೇಶ್ವರ ದೇವಸ್ಥಾನ ಬಳಿಯಲ್ಲಿ 2025-26ನೇ ಸಾಲಿನ ಕೆಕೆಆರ್ ಡಿಬಿ ಮೈಕ್ರೋ ಯೋಜನೆಯಡಿಯ ಸುಮಾರು 35 ಲಕ್ಷ ವೆಚ್ಚದ ಫೇವರ್ಸ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿ, ಬರುವ 2028ರಲ್ಲಿ ರಾಜ್ಯದಲ್ಲಿ ನೂರಕ್ಕೆ ನೂರು ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕಂಪ್ಲಿ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಏನಾದರೂ ಹೇಳಬಹುದು. ಆದರೆ, ಸಿಎಂ ಬದಲಾವಣೆ ವಿಚಾರ ಕಾಂಗ್ರೆಸ್ ಹೈಕಮಾಂಡಗೆ ಬಿಟ್ಟಿದ್ದು. ಮುಂದಿನ ಸಚಿವ ಸಂಪುಟದಲ್ಲಿ ಏನಾರೂ ನಮಗೆ ಅವಕಾಶ ದೊರೆತರೆ, ರಾಜ್ಯದಲ್ಲಿ ಹೊಸ ಬದಲಾವಣೆಯೊಂದಿಗೆ ಮಾದರಿ ಸಚಿವರಾಗಿ ಕೆಲಸ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಮುಖಂಡರಾದ ಸಿ.ಆರ್.ಹನುಮಂತ, ಭಟ್ಟ ಪ್ರಸಾದ್, ಎಂ.ಉಸ್ಮಾನ್, ಕೆ.ಎಸ್.ಚಾಂದ್ ಬಾಷಾ, ಕರೇಕಲ್ ಮನೋಹರ, ಬಿ.ನಾರಾಯಣಪ್ಪ, ರಘುನಾಯಕ, ಮಸ್ತಾನ್, ಡೆಕೋರೇಶನ್ ನಾಗರಾಜ, ವಾಲ್ಮೀಕಿ ಈರಣ್ಣ, ಎಸ್.ಆರ್.ಬಾಷಾ, ಬಾಬು, ಜಾಫರ್, ಬಿ.ಸಿದ್ದಪ್ಪ, ಗದ್ಗಿ ವಿರುಪಾಕ್ಷಿ, ಡಿಸ್ ಪ್ರಸಾದ್, ಕೃಷ್ಣ, ಸುಧಾಕರ ಸೇರಿದಂತೆ ಅನೇಕರಿದ್ದರು.
ನಂತರ ತಾಲೂಕಿನ ಎಮ್ಮಿಗನೂರು ಗ್ರಾಮದ ಸಂತೆ ಮಾರುಕಟ್ಟೆ ಬೈಪಾಸ್ ರಸ್ತೆಯಲ್ಲಿ ಸುಮಾರು 71.50 ಲಕ್ಷ ವೆಚ್ಚದ ಬೈಪಾಸ್ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು ಪೂಜೆ ಸಲ್ಲಿಸಿದರು. ನಂತರ ತಾಲೂಕಿನ ಸುಗ್ಗೇನಹಳ್ಳಿ ಗ್ರಾ. ಪಂ. ಯ ಶ್ರೀರಾಮರಂಗಾಪುರ ಗ್ರಾಮದಲ್ಲಿ ಸುಮಾರು 240 ಲಕ್ಷ ವೆಚ್ಚದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಹಾಗೂ ಪೈಪ್ ಲೈನ್ ಸಂಪರ್ಕ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದರು. ಈ ವೇಳೆಗೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















