ಬಸವಕಲ್ಯಾಣ: 12ನೇ ಶತಮಾನದ ಮಹಾನ್ ಸಮಾಜ ಸುಧಾರಕ, ದಾರ್ಶನಿಕ ಮತ್ತು ವಚನಕಾರ ಬಸವಣ್ಣನವರ ತತ್ವಗಳು ಕೇವಲ ಒಂದು ನಿರ್ದಿಷ್ಟ ಕಾಲಕ್ಕೆ ಸೀಮಿತವಾಗದೆ, ಅಂದು, ಇಂದು ಮತ್ತು ಎಂದೆಂದಿಗೂ ಪ್ರಸ್ತುತವಾಗಿವೆ. ಮಾನವೀಯ ಮೌಲ್ಯಗಳು, ಸಮಾನತೆ ಮತ್ತು ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಿರುವ ಅವರ ವಿಚಾರಗಳು ಆಧುನಿಕ ಸಮಾಜಕ್ಕೂ ಮಾರ್ಗದರ್ಶಿಯಾಗಿವೆ ಎಂದು ಸಾಹಿತಿ, ಹೋರಾಟಗಾರರಾದ ಸಂಗಮೇಶ ಎನ್. ಜವಾದಿ ನುಡಿದರು.
ನಗರದ ಬಸವ ಧರ್ಮ ಪೀಠದ ಮಹಾಮನೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ೫ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಸಂಗಮೇಶ ಎನ್ ಜವಾದಿ ರವರು
ಬಸವಣ್ಣನವರು ಜಾತಿ, ವರ್ಗ ಮತ್ತು ಲಿಂಗ ತಾರತಮ್ಯವನ್ನು ಕಠಿಣವಾಗಿ ವಿರೋಧಿಸಿದರು.
“ಕುಲ ಕುಲವೆಂದು ಬಡಿದಾಡದಿರಿ” ಎಂದು ಸಾರುವ ಮೂಲಕ, ಎಲ್ಲರೂ ಒಂದೇ ಎಂಬ ಸಮಾನತೆಯ ಸಂದೇಶವನ್ನು ನೀಡಿದ್ದಾರೆ. ಪ್ರತಿಯೊಬ್ಬರೂ ಕಾಯಕ ಮಾಡಬೇಕು, ಯಾವುದೇ ಕೆಲಸ ಚಿಕ್ಕದಲ್ಲ ಎಂಬ ತತ್ವವನ್ನು ಪ್ರತಿಪಾದಿಸಿದರು. ಇದು ದುಡಿಮೆಯ ಘನತೆಯನ್ನು ಎತ್ತಿ ಹಿಡಿಯುತ್ತದೆ ಮತ್ತು ಪ್ರಾಮಾಣಿಕ ಜೀವನಕ್ಕೆ ಕರೆ ನೀಡುತ್ತದೆ. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ವಿಶ್ವದ ಮೊದಲ ಸಂಸತ್ತು. ಇಲ್ಲಿ ಎಲ್ಲರಿಗೂ, ಅಂದರೆ ಸ್ತ್ರೀ-ಪುರುಷ, ಶರಣ-ಶರಣೆಯರಿಗೆ ಮುಕ್ತವಾಗಿ ಚರ್ಚಿಸುವ, ವಿಚಾರ ಹಂಚಿಕೊಳ್ಳುವ ಅವಕಾಶವಿತ್ತು.
ಕ್ಲಿಷ್ಟಕರವಾದ ಸಂಸ್ಕೃತದ ಬದಲು, ಜನಸಾಮಾನ್ಯರ ಭಾಷೆಯಾದ ‘ಕನ್ನಡ’ ದಲ್ಲಿ ವಚನಗಳನ್ನು ರಚಿಸಿ, ಜ್ಞಾನವನ್ನು ಸಾಮಾನ್ಯರಿಗೂ ತಲುಪಿಸಿದರು.
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ” ಎಂಬ ಸರಳ ತತ್ವಗಳ ಮೂಲಕ ಸತ್ಯ, ಅಹಿಂಸೆ ಮತ್ತು ಪ್ರಾಮಾಣಿಕತೆಯ ಜೀವನವನ್ನು ಬಸವಣ್ಣನವರು ಬೋಧಿಸಿದರು.ಬಸವಣ್ಣನವರ ತತ್ವಗಳು ಭ್ರಾತೃತ್ವ, ಶಾಂತಿ ಮತ್ತು ಪ್ರೀತಿಯಿಂದ ಕೂಡಿದ ಜಾಗತಿಕ ಸಮಾಜವನ್ನು ನಿರ್ಮಿಸಲು ಇಂದಿಗೂ ಅತ್ಯಂತ ಅವಶ್ಯಕವಾಗಿವೆ ಎಂದು ತಿಳಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಅಲ್ಲಮ ಪ್ರಭು ಪೀಠಾಧ್ಯಕ್ಷ ಜಗದ್ಗುರು ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ ಬಸವ ತತ್ವವು ಕೇವಲ ಒಂದು ಧರ್ಮವಲ್ಲ, ಅದು ಜಗತ್ತಿಗೆ ಸಮಾನತೆಯನ್ನು ಬೋಧಿಸಿದ ವೈಚಾರಿಕ ಪ್ರಜ್ಞೆಯ ಮಾರ್ಗವಾಗಿದೆ. ಬಸವಣ್ಣನವರ ತತ್ವಗಳು ಕೇವಲ ಲಿಂಗಾಯತ ಅಥವಾ ಒಂದು ಸಮುದಾಯಕ್ಕೆ ಸೀಮಿತವಲ್ಲ, ಅವು ಸಮಗ್ರ ಮಾನವಕುಲಕ್ಕೆ ಸಲ್ಲಿಸಿದ ಕೊಡುಗೆ. ಸಮಾಜದಲ್ಲಿನ ಅಸಮಾನತೆ, ಭ್ರಷ್ಟಾಚಾರ, ತಾರತಮ್ಯಗಳನ್ನು ಹೋಗಲಾಡಿಸಲು ಬಸವ ತತ್ವದ ಅಳವಡಿಕೆ ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಶರಣ ಸಂಗಮ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಸದ್ಗುರು ಲಾವಣ್ಯದೇವಿ ಮಾತಾಜಿ, ವೈಜಿನಾಥ ಪಾಟೀಲ, ಶಾಂತವೀರ ಕೌಮಾರೆ,ರೇವಣ್ಣಸಿದ್ಧ ಪಾಟೀಲ,ಪ್ರಕಾಶ ಮೆಂಡೋಳೆ, ಶಿವಕುಮಾರ ಪಾಟೀಲ, ಷಣ್ಮುಖ ಪಾಟೀಲ, ಕಾಶೀನಾಥ್ ಕಂಟೆಪ್ಪ, ಮಲ್ಲಿಕಾರ್ಜುನ ರೆಡ್ಡಿ, ವಿಜಯಕುಮಾರ್ ನರಸೆಟ್ಟೆ, ಸಂಗಮೇಶ ತೊಗರಿಖೇಡ ಸೇರಿದಂತೆ ಮಾತೆಯರು , ಮಕ್ಕಳು ಅನೇಕ ಗಣ್ಯರು ಹಾಜರಿದ್ದರು.
ಆಕಾಶ ಖಂಡಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಾದೇವ ಮಾಹಾಜನ ಸ್ವಾಗತಿಸಿದರು, ಸಚಿನ್ ಕೌಟೆ ವಂದಿಸಿದರು. ರಾಜಕುಮಾರ ತೊಂಡಾರೆ ನಿರೂಪಿಸಿದರು.
ಈ ಸಂದರ್ಭದಲ್ಲಿ ಬಸವ ಧರ್ಮ ಪೀಠ,ಬಸವ ಮಹಾಮನೆ ಚಾರಿಟೇಬಲ್ ಟ್ರಸ್ಟ್ – ಉಚಿತ ವಸತಿ ನಿಲಯ ಪ್ರವೇಶ ಆರಂಭದ ಕುರಿತು 2026-27 ನೇ ಸಾಲಿನ್ ಕರಪತ್ರಗಳು ಬಿಡುಗಡೆ ಮಾಡಲಾಯಿತು.
ಬಸವ ಮಹಾಮನೆ ಮಕ್ಕಳಿಂದ ಬಸವ ಪ್ರಾರ್ಥನೆ ನೆರವೇರಿತು. ಸಂಗೀತ ಕಲಾವಿದರು ವಚನ ಗಾಯನ ನಡೆಸಿಕೊಟ್ಟರು.
- ಕರುನಾಡ ಕಂದ ಪತ್ರಿಕೆ


















