ಗದಗ ಎಂದರೆ ಮೈ ರೋಮಾಂಚನವಾಗುತ್ತದೆ. ಪಂಪನ ತಾಯಿಯ ತವರು ಮನೆ ಅಣ್ಣಿಗೆರೆ, ಅತ್ತಿಮಬ್ಬೆಯ ಕಾರ್ಯಕ್ಷೇತ್ರ ಲಕ್ಕುಂಡಿ, ಕರ್ನಾಟಕ ಭಾರತ ಕಥಾಮಂಜರಿಯ ರೂಪಕ ಚಕ್ರವರ್ತಿ ಗದುಗಿನ ನಾರಣಪ್ಪ, ಭಾವೈಕ್ಯತೆಯ ತಾವು ನಿಧಿ, ಲಿಂ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು, ಶಿರಹಟ್ಟಿಯ ಫಕೀರಶ್ವರ ಮಠ, ಮುಳಗುಂದದ ಬಾಲ ಲೀಲಾ ಮಹಾಂತ ಶಿವಯೋಗಿಗಳು, ಅಂದ ಅನಾಥರಿಗೆ ಬಾಳಿಗೆ ಬೆಳಕಾದ ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಮತ್ತು ಪಂಡಿತ ಪುಟ್ಟರಾಜ ಗವಾಯಿಗಳು, ಅಂಕಲಿಪಿಯಿಂದ ಹಿಡಿದು ಬೃಹತ್ ಗ್ರಂಥಗಳವರೆಗೆ ಅಕ್ಷರ ಸಂಸ್ಕೃತಿಯ ಮುದ್ರಣ ಕಾಶಿ ಎಂದೆ ಖ್ಯಾತಿ ಗಳಿಸಿರುವ ಗದಗ ಜಿಲ್ಲೆ, ಸಹಕಾರ ಕ್ಷೇತ್ರಕ್ಕೂ ಮಹತ್ತರ ಕೊಡುಗೆ ನೀಡಿದೆ.
ಜಗದ್ಗುರು ತೋಂಟದಾರ್ಯ ಕಾಲೇಜಿನ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಪ್ರೊ. ಶಕುಂತಲಾ ಸಿಂಧೂರ ಅವರು “ಗದಗ ಜಿಲ್ಲೆಯ ಸಾಂಸ್ಕೃತಿಕ ಕೊಡುಗೆಗಳು” ಎನ್ನುವ ಸಂಶೋಧನಾತ್ಮಕ ಕೃತಿಯನ್ನು ಡಾ. ಎಂ ಎಂ ಕಲಬುರ್ಗಿ ಅಧ್ಯಯನ ಸಂಸ್ಥೆ ಜಗದ್ಗುರು ತೋಂಟದಾರ್ಯ ಮಠ ಗದಗ ವತಿಯಿಂದ ಪ್ರಕಟಿಸಿದ್ದಾರೆ.
ಗದಗ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸವನ್ನು ಸುಲಭವಾಗಿ ಅರ್ಥವಾಗುವಂತೆ ಪ್ರೊ. ಶಕುಂತಲಾ ಅವರು ಈ ಕೃತಿಯನ್ನು ರಚಿಸಿದ್ದಾರೆ.
ಈ ಕೃತಿಯಲ್ಲಿ ಒಟ್ಟು ಆರು ಅಧ್ಯಾಯಗಳಿದ್ದು ಪ್ರತಿಯೊಂದು ಅಧ್ಯಾಯದಲ್ಲಿಯೂ ಗದಗ ಚಾರಿತ್ರಿಕ ಐತಿಹಾಸಿಕ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಅರ್ಥಪೂರ್ಣವಾಗಿ ವಿವೇಚಿಸಲಾಗಿದೆ.
ಗದಗ ಜಿಲ್ಲೆಯ ಶಾಸನಗಳು ವಾಸ್ತುಶಿಲ್ಪ ಕಲೆ ಮತ್ತು ಧಾರ್ಮಿಕ ಪರಂಪರೆ, ಕೋಟೆ ಕೊತ್ತಲಗಳು, ಕೆರೆಗಳು ಮತ್ತು ಜನಸಾಮಾನ್ಯರ ಕೃಷಿ ಜೀವನದಿಂದ ಹಿಡಿದು ಕವಿಗಳು,ಕಲಾವಿದರು, ಹಾಗೂ ಗದುಗಿನ ತೋಂಟದಾರ್ಯ ಮಠದ ಭಾವೈಕ್ಯತೆಯ ಪರಂಪರೆಯನ್ನು, ಜಿಲ್ಲೆಯ ಎಲ್ಲಾ ತಾಲೂಕುಗಳ ವಿಶೇಷತೆ ಮತ್ತು ಮಹತ್ವವನ್ನು, ದೇವಾಲಯಗಳು ಬಸದಿಗಳು ಹಾಗೂ ಭಾವೈಕ್ಯತೆಯ ನೆಲೆಗಳನ್ನು ಗುರುತಿಸಲಾಗಿದೆ.
ಗದಗ ಕೇವಲ ಊರಲ್ಲ ಅದು ಕನ್ನಡ ನಾಡಿನ ಸಾಂಸ್ಕೃತಿಕ ಜೀವ ಚೈತನ್ಯದ ಶಕ್ತಿ ಪೀಠ ಇಲ್ಲಿನ ಜನ ಜೀವನ ಇಡೀ ನಾಡಿಗೆ ಮಾದರಿಯಾಗಿದೆ. ಈ ನೆಲವನ್ನು ಆಳಿದ ರಾಜಮನೆತನಗಳು, ರಂಗಭೂಮಿ, ಸಂಗೀತ, ಶಿಲ್ಪಕಲಾ ವೈಭವ, ಚಿತ್ರಕಲೆ, ಪತ್ರಿಕೋದ್ಯಮ ಮತ್ತು ಮುದ್ರಣ ಸಂಸ್ಕೃತಿಯ ತವರೂರಾಗಿರುವ ಗದಗ ನಾಡಿಗೆ ಉತ್ತಮವಾದ ಸಾಂಸ್ಕೃತಿಕ ಕೊಡುಗೆಯನ್ನು ನೀಡಿದೆ ಎಂದು ಕೃತಿಕಾರರು ಗದುಗಿನ ಸಾಂಸ್ಕೃತಿಕ ಹಿರಿಮೆಯನ್ನು ಪ್ರತಿಪಾದಿಸಿದ್ದಾರೆ.
ಗದಗ ಜಿಲ್ಲೆಯ ಪ್ರಾಕೃತಿಕ ಸಂಪತ್ತನ್ನು, ಆ ನೆಲದಲ್ಲಿನ ಕಪ್ಪತ್ತ ಗುಡ್ಡದ ಅರಣ್ಯ ಅಲ್ಲಿ ದೊರಕುವ ಔಷಧೀಯ ಸಸ್ಯಗಳ ವಿವರಣೆ, ಚಿನ್ನದ ನಿಕ್ಷೇಪದ ಬಗ್ಗೆ ಮತ್ತು ಆಧುನಿಕವಾಗಿ ಪವನ ಯಂತ್ರದ ಮೂಲಕ ವಿದ್ಯುತ್ತಿನ ಉತ್ಪಾದನೆ ಇವೆಲ್ಲವುಗಳ ಮಾಹಿತಿಯು ಈ ಕೃತಿಯಲ್ಲಿ ಅಡಕವಾಗಿದೆ.
ದೇಶದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಏಕೀಕರಣ ಚಳುವಳಿಯಲ್ಲಿ ಗದಗ ಜಿಲ್ಲೆ ಮಹತ್ವದ ಪಾತ್ರವಹಿಸಿದೆ. ಅದರ ವಿವರಗಳನ್ನು ಸಹ ಕೊಡಲಾಗಿದೆ.
ಪ್ರೊ. ಶಕುಂತಲಾ ಸಿಂಧೂರ ಅವರ
ಈ ಸಂಶೋಧನಾತ್ಮಕ ಕೃತಿಯು ಮುಂದಿನ ಅಧ್ಯಯನಕಾರರಿಗೆ ಆಕರ ಗ್ರಂಥವಾಗಲಿದೆ. ಇದೊಂದು ಸಂಗ್ರಹ ಯೋಗ್ಯ ಕೃತಿಯಾಗಿದೆ. ನಾಡಿನ ಜನತೆ ಈ ಕೃತಿಯನ್ನು ಸ್ವೀಕರಿಸಿ ಸಂಶೋಧಕಿಯನ್ನು ಪ್ರೋತ್ಸಾಹಿಸಬೇಕು.

- ಡಾ. ನಿಷ್ಠಿ ರುದ್ರಪ್ಪ, ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಖಂಡ ಬಳ್ಳಾರಿ ಜಿಲ್ಲೆ.




















