ಬಳ್ಳಾರಿ / ಕಂಪ್ಲಿ : ಮಿತ್ತಲ್‌ಗೆ ನೀಡಿದ್ದ ರೈತರ ಭೂಮಿಯನ್ನು ಕೆಐಎಡಿಬಿ ಸರ್ಕಾರದೊಂದಿಗೆ ಶಾಮಿಲಾಗಿ ಜಿಂದಾಲ್‌ಗೆ ಪರಭಾರೆ ಮಾಡಿದೆ. ಕೂಡಲೇ ಸರ್ಕಾರ ಮಧ್ಯಸ್ಥಿಕೆವಹಿಸಿ ಇಲ್ಲಿನ ಸಾವಿರಾರು ರೈತರ ಭೂಮಿಯನ್ನು ವಾಪಸ್ಸು ನೀಡಬೇಕು. ಇಲ್ಲವಾದಲ್ಲಿ ಸೂಕ್ತ ಭೂ ಪರಿಹಾರ ಒದಗಿಸಬೇಕು ಎಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ (ಯುವಸೇನೆ)ಯ ಕುಡತಿನಿ ಘಟಕ ಅಧ್ಯಕ್ಷ ಸಂಪತ್ ಕುಮಾರ ಆಗ್ರಹಿಸಿದರು.
ಕುಡತಿನಿ ಪಟ್ಟಣದಲ್ಲಿ ಬುಧವಾರದಂದು ಭೂ ಸಂತ್ರಸ್ತ ರೈತರಿಗೆ ನ್ಯಾಯ ಸಿಗಬೇಕೆಂಬ ನಿಟ್ಟಿನಲ್ಲಿ ಕಳೆದ ಮೂರು ವರ್ಷದಿಂದ ನಿರಂತರವಾಗಿ ಹಮ್ಮಿಕೊಂಡು ಇಂದಿಗೆ 1251ನೇ ದಿನ ಮತ್ತು 9ನೇ ದಿನದ ಉಪವಾಸ ಸತ್ಯಾಗ್ರಹ ಹೋರಾಟದಲ್ಲಿ ಭಾಗವಹಿಸಿ, ಬೆಂಬಲ ನೀಡಿದ ನಂತರ ಮಾತನಾಡಿ, ಕೆಐಎಡಿಬಿಯು ಮಿತ್ತಲ್ ಕಂಪನಿಗಾಗಿ 2012ರಲ್ಲಿ ಸ್ವಾಧೀನ ಮಾಡಿಕೊಂಡಿದ್ದ ಸಾವಿರಾರು ಎಕರೆಯಷ್ಟು ಜಮೀನನ್ನು ಈಗ ಅಕ್ರಮವಾಗಿ ಜಿಂದಾಲ್ ಕಂಪನಿಗೆ ನೀಡಲಾಗಿದೆ. ಯಾವ ಉದ್ದೇಶಕ್ಕೆ ವಶಕ್ಕೆ ಪಡೆಯಲಾಗಿತ್ತೋ ಅದೇ ಉದ್ದೇಶಕ್ಕೆ ಭೂಮಿ ಬಳಸಬೇಕಿತ್ತು. ಈಗ ಜಿಂದಾಲ್‌ಗೆ ಹಸ್ತಾಂತರ ಮಾಡುತ್ತಿರುವುದು ರೈತರ ಹಿತಾಸಕ್ತಿಗೆ ವಿರುದ್ಧವಾದೆ. ಭೂ ಪರಭಾರೆ ವಿರೋಧಿಸಿ ನಿರಂತರವಾಗಿ ಧರಣಿ ಸತ್ಯಾಗ್ರಹ ಮತ್ತು ಉಪವಾಸದ ಹೋರಾಟ ಮಾಡುತ್ತಿದ್ದಾರೆ. ಆದರೆ, ಜನಪ್ರತಿನಿಧಿಗಳು, ಅಧಿಕಾರಿಗಳು ಕುಮ್ಮಕ್ಕು ನೀಡಿ ಪೊಲೀಸರ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಭೂ ಪ್ರವೇಶದ ವೇಳೆ ಬೈಪಾಸ್ ರಸ್ತೆಯಲ್ಲಿ ರೈತರನ್ನು ತಡೆಗಟ್ಟಿ, ರೈತರಿಗೆ ನ್ಯಾಯ ಸಿಗದ ರೀತಿಯಲ್ಲಿ ಪಿತೂರಿ ನಡೆಸಲಾಗುತ್ತಿದೆ. ಎಷ್ಟೇ ಪಿತೂರಿ ಮತ್ತು ಷಡ್ಯಂತ್ರ ಮಾಡಿದರೂ, ರೈತರ ಹೋರಾಟ ನಿಲ್ಲದು. ಈ ಹೋರಾಟಕ್ಕೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ (ಯುವಸೇನೆ)ಯ ಬೆಂಬಲ ಸದಾ ಇದೆ. ಕೂಡಲೇ ಸರ್ಕಾರ ಮಧ್ಯಸ್ಥಿಕೆವಹಿಸಿ ಭೂ ಸಂತ್ರಸ್ತ ರೈತರಿಗೆ ನ್ಯಾಯ ಒದಗಿಸಲಿ, ಇಲ್ಲವಾದಲ್ಲಿ ಹೋರಾಟ ರೂಪುರೇಷ ದೊಡ್ಡ ಮಟ್ಟದಲ್ಲಿ ಪ್ರಜ್ವಲಿಸಲಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಜಂಗ್ಲಿಸಾಬ್, ಮೀರಿಯಲ ಶ್ರೀನಿವಾಸ, ಜಮ್ಮಯ್ಯ, ಎಂ.ಮಾರೇಶ್, ಟೈಗರ್, ರವಿ, ಅಂಬರೀಶ್, ತಿಮ್ಮಪ್ಪ, ಗಂಗಾಧರ, ಭಾವಿ ಶಿವಕುಮಾರ್, ಕಾಸಿಂ, ರಾಮಣ್ಣ, ದಿವಾಕರಬಾಬು, ವೀರಭದ್ರ, ವಿವೇಕಾನಂದ, ಹಾಲಪ್ಪ ಗಿರೀಶ್, ರೈತರು ಮತ್ತು ರೈತ ಮಹಿಳೆಯರು ಹಾಗೂ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















