ಕೊಪ್ಪಳ / ಗಂಗಾವತಿ : ನ್ಯಾಯಾಲಯದ ಆವರಣದಲ್ಲಿ ವಕೀಲರೊಬ್ಬರು ದಿಢೀರ್ ಕುಸಿದು ಬಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಕನಕಗಿರಿ ತಾಲೂಕಿನ ಚಿಕ್ಕಮಾದಿಹಾಳ ಗ್ರಾಮದ ನಿವಾಸಿಯಾದ 26 ವರ್ಷದ ಯುವ ವಕೀಲ ಕನಕೇಶ್ ಮುರುಡಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಎಂದಿನಂತೆ ಕೋರ್ಟ್ ಕಲಾಪಗಳಿಗಾಗಿ ನ್ಯಾಯಾಲಯಕ್ಕೆ ಆಗಮಿಸಿದ್ದ ಕನಕೇಶ್ ಅವರು ಆವರಣದಲ್ಲಿದ್ದಾಗಲೇ ದಿಢೀರ್ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದ ಸಹೋದ್ಯೋಗಿ ವಕೀಲರು ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರಾದರೂ, ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಮೃತ ಕನಕೇಶ್ ಅವರು ಹಿರಿಯ ವಕೀಲರಾದ ಹೆಚ್.ಎಮ್. ಮಂಜುನಾಥ್ ಅವರ ಬಳಿ ವೃತ್ತಿ ಅಭ್ಯಾಸ ಮಾಡುತ್ತಿದ್ದರು. ಇವರ ಅಕಾಲಿಕ ನಿಧನಕ್ಕೆ ಆಪ್ತ ಗೆಳೆಯ ಆನಂದ ದೇವರಮನಿ ಹಾಗೂ ಗಂಗಾವತಿ ವಕೀಲರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಇಂತಹ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದರಿಂದ ಸಾರ್ವಜನಿಕರು ಆತಂಕ ಪಡದೆ, ವೃತ್ತಿ ಜೀವನದ ಒತ್ತಡದ ನಡುವೆಯೂ ನಿಯಮಿತ ಆರೋಗ್ಯ ತಪಾಸಣೆ, ಸರಿಯಾದ ಜೀವನಶೈಲಿ ಹಾಗೂ ದೈಹಿಕ ಶ್ರಮದ ಕಡೆಗೆ ಗಮನ ಹರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ವೈದ್ಯಕೀಯ ತಜ್ಞರು ಈ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















