ಮಧುಗಿರಿ ಪುರಸಭೆ ವ್ಯಾಪ್ತಿಯ ಶಿರಾ ಗೇಟ್ ವೃತ್ತದ ಬಳಿ ರಸ್ತೆ ಬದಿ ಸುಮಾರು 15-20ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ 10ಕ್ಕೂ ಹೆಚ್ಚು ಬೀದಿ ಮಳಿಗೆಗಳನ್ನು ಪುರಸಭೆ ಅಧಿಕಾರಿಗಳು ಇಂದು ಮಧ್ಯಾಹ್ನ 2 ಗಂಟೆಗೆ ಏಕಾಏಕಿ ತೆರವುಗೊಳಿಸಿದ್ದಾರೆ.
JCB ಯಂತ್ರಗಳು ಹಾಗೂ ಪೊಲೀಸ್ ಬಂದೋಬಸ್ತ್‌ನೊಂದಿಗೆ ಆಗಮಿಸಿದ ಪುರಸಭೆ ಸಿಬ್ಬಂದಿ, ಜೆರಾಕ್ಸ್, ಟೀ ಕಾಫಿ, ಚಾಟ್ಸ್, ಟೀ, ಟಿಫಿನ್ ಅಂಗಡಿಗಳನ್ನು ತೆರವು ಮಾಡಿದರು. ದಿಢೀರ್ ಕಾರ್ಯಾಚರಣೆಯಿಂದ ಗಾಬರಿಗೊಂಡ ವ್ಯಾಪಾರಿಗಳು ತಮ್ಮ ಸಾಮಗ್ರಿಗಳನ್ನು ರಕ್ಷಿಸಿಕೊಳ್ಳಲು ಪರದಾಡಿದರು.
“15 ವರ್ಷದಿಂದ ಇಲ್ಲಿ ವ್ಯಾಪಾರ ಮಾಡಿ 3 ಮಕ್ಕಳನ್ನು ಓದಿಸುತ್ತಿದ್ದೇನೆ. ಒಂದೇ ಒಂದು ನೋಟಿಸ್ ಕೊಡಲಿಲ್ಲ. ಈಗ ನಾವು ತಿನ್ನೋದು ಏನು?” ಎಂದು ಟೀ ಕಾಫಿ ವ್ಯಾಪಾರಿ ಗೋಳಾಡಿದರು.
ಪುರಸಭೆ ಸ್ಪಷ್ಟನೆ :
ಪುರಸಭೆ ಮುಖ್ಯಾಧಿಕಾರಿ ಶ್ರೀ ಸುರೇಶ್ ಪ್ರತಿಕ್ರಿಯಿಸಿ, “ಶಿರಾ ಗೇಟ್ ಮುಖ್ಯರಸ್ತೆಯಲ್ಲಿ ಫುಟ್‌ಪಾತ್ ಒತ್ತುವರಿಯಿಂದ ತುಂಬಾ ತೊಂದರೆಯಾಗುತ್ತಿದ್ದು ಕೆಲವು ದಿನಗಳಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣವಾಗುತ್ತಿದೆ ಹಾಗೂ ಕೆಇಬಿಯ ಕಟ್ಟಡ ಉದ್ಘಾಟನೆ ಇದೆ ಹಾಗಾಗಿ ಒತ್ತುವರಿ, ತೆರವು ಕಡ್ಡಾಯ” ಎಂದು ತಿಳಿಸಿದರು
ಅಲ್ಲಿನ ಸ್ಥಳಿಯರು “ಪರ್ಯಾಯ ವ್ಯವಸ್ಥೆ ಮಾಡದೆ ಬಡವರ ಹೊಟ್ಟೆ ಮೇಲೆ ಹೊಡೆಯುವುದು ಸರಿಯಲ್ಲ.” ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೆರವು ಕಾರ್ಯಾಚರಣೆ ವೇಳೆ ಕೆಲಕಾಲ ಮಾತಿನ ಚಕಮಕಿ ನಡೆದರೂ, ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.
ವರದಿ: ರಂಗರಾಜು ಎಂ. ಗರಣಿ




















